ಮಾಗಡಿ: ತೀವ್ರ ಕುತೂಹಲ ಕೆರಳಿಸಿದ್ದ ಮಾಗಡಿ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಚುನಾವಣೆಯ ಅನೇಕ ನಾಟಕೀಯ ಬೆಳವಣಿಗೆಗೆ ಸಾಕ್ಷಿಯಾಯಿತು. ನಿರೀಕ್ಷೆಯಂತೆ ಪುರಸಭೆಯ ಅಧಿಕಾರ ಹಿಡಿಯುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದ್ದು, ಬಹುಮತ ಹೊಂದಿದ್ದ ಜೆಡಿಎಸ್ ತೀವ್ರ ಮುಖಭಂಗ ಅನುಭವಿಸಿದೆ.
ಜೆಡಿಎಸ್‌ನ ನಾಲ್ವರು ಸದಸ್ಯರು ಮತದಾನ ಮಾಡದೆ ತಟಸ್ಥವಾಗಿ ಉಳಿಯುವ ಮೂಲಕ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು. ಜೆಡಿಎಸ್ ಆಂತರಿಕ ಭಿನ್ನಮತದ ಲಾಭ ಪಡೆಯುವಲ್ಲಿ ಶಾಸಕ ಎಚ್.ಸಿ.ಬಾಲಕೃಷ್ಣ ಅವರ ತಂತ್ರ ನಿರೀಕ್ಷಿತ ಫಲ ನೀಡಿದೆ.
ಪುರಸಭೆ ನೂತನ ಅಧ್ಯಕ್ಷರಾಗಿ 22ನೇ ವಾರ್ಡಿನ ಕಾಂಗ್ರೆಸ್ ಸದಸ್ಯೆ ರಮ್ಯಾ ನರಸಿಂಹಮೂರ್ತಿ ಮತ್ತು ಉಪಾಧ್ಯಕ್ಷರಾಗಿ 14ನೇ ವಾರ್ಡಿನ ರಿಯಾಜ್ ಅಹ್ಮದ್ ಆಯ್ಕೆಯಾದರು. ಇಬ್ಬರೂ ತಲಾ 11 ಮತಗಳನ್ನು ಪಡೆಯುವ ಮೂಲಕ ಗೆಲುವು ಸಾಧಿಸಿದ್ದಾರೆ.
ಒಟ್ಟು 23 ಸದಸ್ಯರ ಬಲದ ಪುರಸಭೆಯಲ್ಲಿ ಜೆಡಿಎಸ್ 12 ಸದಸ್ಯರನ್ನು ಹೊಂದಿದ್ದರೆ, ಕಾಂಗ್ರೆಸ್ 10 ಸದಸ್ಯರನ್ನು ಹೊಂದಿದೆ. ಬಿಜೆಪಿಯ ಒಬ್ಬ ಸದಸ್ಯೆ ಮತ್ತು ಸಂಸದ ಡಾ. ಮಂಜುನಾಥ್ ಮತ ಸೇರಿ ಒಟ್ಟು 14 ಮತ ಪಡೆದು ಜೆಡಿಎಸ್ ಸುಲಭವಾಗಿ ಅಧಿಕಾರ ಹಿಡಿಯಬೇಕಾಗಿತ್ತು.
ಆದರೆ, ಸ್ಪಷ್ಟ ಬಹುಮತ ಇದ್ದರೂ ಆಂತರಿಕ ಭಿನ್ನಮತದಿಂದಾಗಿ ಕೈಯಲ್ಲಿದ್ದ ಪುರಸಭೆಯ ಅಧಿಕಾರವನ್ನು ಕಾಂಗ್ರೆಸ್ ಪಕ್ಷಕ್ಕೆ ಸುಲಭವಾಗಿ ಬಿಟ್ಟು ಕೊಟ್ಟಿದೆ.
ಕಾಂಗ್ರೆಸ್ ಹತ್ತು ಸದಸ್ಯರ ಮತಗಳೊಂದಿಗೆ ಶಾಸಕ ಎಚ್.ಸಿ. ಬಾಲಕೃಷ್ಣ ಅವರ ಮತ ಸೇರಿ ಹನ್ನೊಂದು ಮತ ಪಡೆದ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದರು.
ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಜೆಡಿಎಸ್ ಅಭ್ಯರ್ಥಿ ಒಂದನೇ ವಾರ್ಡ್ ಸದಸ್ಯೆ ನಾಗರತ್ನ, ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಹತ್ತನೇ ವಾರ್ಡ್ ಸದಸ್ಯ ಅಶ್ವಥ್ ತಲಾ 8 ಮತ ಪಡೆಯುವ ಮೂಲಕ ಸೋಲು ಕಂಡರು.
ಆಂತರಿಕ ಭಿನ್ನಾಭಿಪ್ರಾಯದಿಂದಾಗಿ ಜೆಡಿಎಸ್ ಅಧಿಕಾರ ಕಳೆದುಕೊಂಡಿದೆ. ಚುನಾವಣೆಯಲ್ಲಿ ತಟಸ್ಥರಾಗಿ ಉಳಿದ ಜೆಡಿಎಸ್‌ನ ನಾಲ್ವರು ಸದಸ್ಯರು ಕಾಂಗ್ರೆಸ್‌ಗೆ ಬರುವುದಾದರೆ ನಾವು ಸ್ವಾಗತಿಸುತ್ತೇವೆ.–ಎಚ್.ಸಿ.ಬಾಲಕೃಷ್ಣ, ಮಾಗಡಿ ಶಾಸಕ
ಪುರಸಭಾ ಚುನಾವಣೆಯಲ್ಲಿ ಯಾರಿಗೆ ಮತ ನೀಡಬೇಕು ಎಂದು ಬಿಜೆಪಿ ಜಿಲ್ಲಾ ಮತ್ತು ತಾಲ್ಲೂಕು ಅಧ್ಯಕ್ಷರು ಸ್ಪಷ್ಟ ಸೂಚನೆ ನೀಡಲಿಲ್ಲ. ಮಾಜಿ ಶಾಸಕ ಎ. ಮಂಜುನಾಥ್ ಕರೆದಿದ್ದ ಸಭೆಯಲ್ಲೂ ಭಾಗವಹಿಸಿದ್ದೆ. ಆದರೆ ಪಕ್ಷದ ವರಿಷ್ಠರ ಸೂಚನೆ ಬಾರದ ಹಿನ್ನೆಲೆಯಲ್ಲಿ ಚುನಾವಣೆ ಪ್ರಕ್ರಿಯೆಯಲ್ಲಿ ಗೈರು ಹಾಜರಾಗಿದ್ದೇನೆ.–ಭಾಗ್ಯಮ್ಮ ನಾರಾಯಣಪ್ಪ ಬಿಜೆಪಿ ಸದಸ್ಯೆ
ಜೆಡಿಎಸ್‌ಗೆ ಮುಳುವಾದ ‘ತಟಸ್ಥ ಧೋರಣೆ’
ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯಲ್ಲಿ ಜೆಡಿಎಸ್‌ನ ನಾಲ್ವರು ಸದಸ್ಯರು ತಟಸ್ಥವಾಗಿ ಉಳಿದಿದ್ದು ಜೆಡಿಎಸ್‌ಗೆ ಮುಳುವಾಗಿ ಪರಿಣಮಿಸಿತು. ಜೆಡಿಎಸ್‌ನ ರಹಮತ್ ರಾಮು ಹೇಮಲತಾ ಕಾಂತರಾಜು ತಟಸ್ಥರಾಗಿ ಉಳಿಯುವ ಮೂಲಕ ಯಾರಿಗೂ ಮತ ಚಲಾಯಿಸಲಿಲ್ಲ. ಬಿಜೆಪಿಯ ಏಕೈಕ ಸದಸ್ಯೆ ಭಾಗ್ಯಮ್ಮ ನಾರಾಯಣಪ್ಪ ಕೂಡ ಗೈರು ಆಗುವ ಮೂಲಕ ಕಾಂಗ್ರೆಸ್ ಅಧಿಕಾರ ಹಿಡಿಯುವಲ್ಲಿ ಪರೋಕ್ಷವಾಗಿ ನೆರವಾದರು. ಜೆಡಿಎಸ್ ಬೆಂಬಲದೊಂದಿಗೆ ಮೊದಲ ಅವಧಿಗೆ ಮಾಗಡಿ ಪುರಸಭೆಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಭಾಗ್ಯಮ್ಮ ಇದೀಗ ಜೆಡಿಎಸ್‌ಗೆ ಕೈ ಕೊಟ್ಟಿದ್ದಾರೆ. ಅವರ ಈ ನಡೆ ಮೈತ್ರಿ ಪಾಳಿಯಲ್ಲಿ ಅಚ್ಚರಿ ಮೂಡಿಸಿದೆ. ಸಂಸದ ಡಾ.ಸಿ.ಎನ್. ಮಂಜುನಾಥ್ ಕೂಡ ಮತ ಹಾಕಲು ಬರಲಿಲ್ಲ.
ಕಾಂಗ್ರೆಸ್ ಶಾಸಕ ಕಾರಿನಲ್ಲಿ ಜೆಡಿಎಸ್ ಸದಸ್ಯರು
ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಗಾಗಿ ಪುರಸಭೆಗೆ ಬಂದ ಶಾಸಕ ಎಚ್.ಸಿ. ಬಾಲಕೃಷ್ಣ ಅವರ ಕಾರಿನಲ್ಲಿ ಜೆಡಿಎಸ್ ನಾಲ್ವರು ಸದಸ್ಯರು ಬಂದಿಳಿದರು. ಅಲ್ಲಿಗೆ ಜೆಡಿಎಸ್ ಸೋಲು ಸ್ಪಷ್ಟವಾಗಿತ್ತು. ‘ಪುರಸಭೆಗೆ ಬರುವ ದಾರಿಯಲ್ಲಿ ನಾಲ್ವರು ಜೆಡಿಎಸ್ ಸದಸ್ಯರು ನಡೆದುಕೊಂಡು ಬರುತ್ತಿದ್ದರು. ಅವರನ್ನು ನೋಡಿ ಕಾರಿನಲ್ಲಿ ಕರೆದುಕೊಂಡು ಬಂದೆ. ಪುರಸಭೆ ಸದಸ್ಯರನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗಿದ್ದ ಜೆಡಿಎಸ್‌ನವರು ಈ ನಾಲ್ವರನ್ನು ಅರ್ಧದಾರಿಯಲ್ಲಿ ಬಿಟ್ಟಿದ್ದರು. ನಾನು ಅವರನ್ನು ಕರೆದುಕೊಂಡು ಬಂದಿದ್ದೇನೆ’ ಎಂದು ಶಾಸಕ ಬಾಲಕೃಷ್ಣ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.