ADVERTISEMENT

ಮಾಗಡಿ | ರಸ್ತೆ ಕಾಮಗಾರಿ ವಿಳಂಬ: ಶಾಸಕ ತರಾಟೆ

ಬೆಂಗಳೂರು-ಮಾಗಡಿ ರಸ್ತೆ ಅಭಿವೃದ್ಧಿ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 5 ಜುಲೈ 2024, 4:31 IST
Last Updated 5 ಜುಲೈ 2024, 4:31 IST
ಮಾಗಡಿ ಕೆ.ಶಿಫ್‌ ರಸ್ತೆ ಅಧಿಕಾರಿಗಳನ್ನು ಶಾಸಕ ಎಚ್‌.ಸಿ.ಬಾಲಕೃಷ್ಣ ತರಾಟೆಗೆ ತೆಗೆದುಕೊಂಡರು
ಮಾಗಡಿ ಕೆ.ಶಿಫ್‌ ರಸ್ತೆ ಅಧಿಕಾರಿಗಳನ್ನು ಶಾಸಕ ಎಚ್‌.ಸಿ.ಬಾಲಕೃಷ್ಣ ತರಾಟೆಗೆ ತೆಗೆದುಕೊಂಡರು    

ಮಾಗಡಿ: ತಾಲ್ಲೂಕಿನ ಬಾಚೇನಹಟ್ಟಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಮಂಗಳವಾರ ಬೆಂಗಳೂರು-ಮಾಗಡಿ ರಸ್ತೆ ಅಭಿವೃದ್ಧಿ ವಿಳಂಬ ಬಗ್ಗೆ ಎದುರಾಗಿರುವ ಸಮಸ್ಯೆ ಪರಿಹಾರಕ್ಕೆ ಶಾಸಕ ಎಚ್.ಸಿ.ಬಾಲಕೃಷ್ಣ ಗ್ರಾಮಸ್ಥರು ಮತ್ತು ಅಧಿಕಾರಿಗಳ ಸಭೆ ನಡೆಸಿದರು.

ಕೆ.ಶಿಫ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕರು, ಮುಂದಿನ ವಾರದೊಳಗೆ ರಸ್ತೆ ಅಭಿವೃದ್ಧಿ ಕಾಮಗಾರಿ ಆರಂಭಿಸದಿದ್ದರೆ ಕ್ರಮಕೈಗೊಳ್ಳಲಾಗುವುದು. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ನಿತ್ಯ ಅಪಘಾತ ನಡೆದು ಸಾರ್ವಜನಿಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಅರ್ಧಕ್ಕೆ ನಿಂತಿರುವ ರಸ್ತೆ ಅಭಿವೃದ್ಧಿ ಕಾಮಗಾರಿ ಕೂಡಲೇ ಆರಂಭಿಸಬೇಕೆಂದು ಸೂಚಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಎ.ಎಚ್.ಪ್ರಕಾಶ್ ಮಾತನಾಡಿ, ಕೆ.ಶಿಫ್ ಅಧಿಕಾರಿಗಳು ರಸ್ತೆ ನಿರ್ಮಿಸಲು ಗುಂಡಿ ತೆಗೆದು ಅರ್ಧಕ್ಕೆ ನಿಲ್ಲಿಸಿದ್ದಾರೆ. ಹೆಚ್ಚಿನ ಅಪಘಾತಗಳಿಂದಾಗಿ ಜನರು ಸತ್ತಿದ್ದಾರೆ. ರಸ್ತೆ ನಿರ್ಮಾಣಕ್ಕೆ ಭೂಮಿ ನೀಡಿರುವ ರೈತರಿಗೆ ಪರಿಹಾರ ನೀಡುವಲ್ಲಿ ಅಧಿಕಾರಿಗಳು ತಾರತಮ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ADVERTISEMENT

ಕೆ.ಶಿಫ್ ಸೂಪರಿಂಡೆಂಟ್ ಎಂಜಿನಿಯರ್ ಸುನೀಲ್ ಕುಮಾರ್ ಮಾತನಾಡಿ, ಗುತ್ತಿಗೆದಾರರಿಗೆ ಒಂದೊಂದು ಕಿ.ಮಿ.ರಸ್ತೆ ನಿರ್ಮಾಣದ ತುಂಡು ಗುತ್ತಿಗೆ ಕೊಟ್ಟಿರುವುದು ವಿಳಂಬಕ್ಕೆ ಕಾರಣವಾಗಿದೆ. ಭೂಮಿ ವಶಪಡಿಸಿಕೊಳ್ಳುವಲ್ಲಿ ಕೆಲವರು ಅಡ್ಡಿಪಡಿಸಿದ್ದಾರೆ. ಹಣ ಬಿಡುಗಡೆ ಮಾಡಿಸುವುದಾಗಿ ಶಾಸಕರು ಭರವಸೆ ನೀಡಿರುವುದರಿಂದ ಸೋಮವಾರದಿಂದಲೇ ರಸ್ತೆ ಕಾಮಗಾರಿ ಆರಂಭಿಸುವುದಾಗಿ ತಿಳಿಸಿದರು.

ನಿವೇಶನ: ಕೆ.ಶಿಫ್ ರಸ್ತೆ ವಿಸ್ತರಣೆಯಿಂದಾಗಿ ಮನೆ ಕಳೆದುಕೊಳ್ಳುವ ಚಿಕ್ಕತೊರೆಲಂಬಾಣಿ ತಾಂಡಾದ ನಿವಾಸಿಗಳಿಗೆ ಒಂದು ಎಕರೆ ಗೋಮಾಳದಲ್ಲಿ ಮನೆ ನಿರ್ಮಿಸಿಕೊಡಲಾಗುವುದು. ದಾಖಲೆ ಇಲ್ಲದಿದ್ದರೂ ಮಾನವೀಯ ದೃಷ್ಟಿಯಿಂದ ಪರಿಹಾರ ನೀಡಲಾಗುವುದು ಎಂದರು.

ವರದೋನಹಳ್ಳಿ ಹ್ಯಾಂಡ್‌ ಪೋಸ್ಟ್‌ ಬಳಿ ಬಂಡೆ ಸಿಡಿದರೆ ಮನೆವೊಂದಕ್ಕೆ ಹಾನಿಯಾಗಲಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿದರು.

ಸರ್ಕಾರಿ ಗೋಮಾಳದಲ್ಲಿ ಮನೆ ಕಟ್ಟಿಕೊಂಡಿರುವವರಿಗೆ 94ಸಿ ಅನ್ವಯ ಖಾತೆ ಮಾಡಿಕೊಡದೆ ಕಂದಾಯ ಅಧಿಕಾರಿಗಳು ನಿರ್ಲಕ್ಷ್ಯ ಮಾಡಬಾರದು. ಕಾನೂನು ರೀತಿ ಸಾಗುವಳಿ ಚೀಟಿ ನೀಡಬೇಕು. 4 ಎಕರೆಗಿಂತ ಅಧಿಕವಾಗಿ ಅಕ್ರಮ ಒತ್ತುವರಿ ಮಾಡಿಕೊಂಡಿದ್ದರೆ ತೆರವುಗೊಳಿಸಿ ಎಂದು ಶಾಸಕರು, ತಹಶೀಲ್ದಾರ್ ಸುರೇಂದ್ರಮೂರ್ತಿ ಮತ್ತು ಕಂದಾಯ ಅಧಿಕಾರಿ ನಟರಾಜ್‌ ಮಧು ಅವರಿಗೆ ಸೂಚಿಸಿದರು.

ಉಪವಿಭಾಗಾಧಿಕಾರಿ ಮಂಜುನಾಥ್, ತಾಲ್ಲೂಕು ಪಂಚಾಯಿತಿ ಇಒ ಚಂದ್ರು, ಸಹಕಾರಿ ಧುರೀಣ ಬಿ.ಜಿ.ಶಿವಮೂರ್ತಿ, ಗ್ರಾಮ ಪಂಚಾಯಿತಿ ಸದಸ್ಯರಾದ ದಯಾನಂದ್, ಚಂದ್ರಶೇಖರ್, ರಂಗಸ್ವಾಮಯ್ಯ, ಹನುಮಂತರಾಜು, ಗಂಗಹನುಮಯ್ಯ, ಯೋಗೇಶ್ ಕುಮಾರ್, ಎ.ಎಚ್.ನಾರಾಯಣಪ್ಪ, ಜಯರಾಮ್, ಲಕ್ಷ್ಮಣ, ಚಿಕ್ಕಣ್ಣ ಮತ್ತು ಪಿಡಿಒ ಪುಟ್ಟರಾಮು ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.