ರಾಮನಗರ: ಮಕರ ಸಂಕ್ರಾಂತಿ ಹಬ್ಬವನ್ನು ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಸೋಮವಾರ ಸಂಭ್ರಮದಿಂದ ಆಚರಿಸಲಾಯಿತು. ಕೆಲವರು ಭಾನುವಾರವೇ ಹಬ್ಬ ಆಚರಿಸಿದರೆ, ಉಳಿದವರು ಇಂದು ಹಬ್ಬ ಮಾಡಿದರು.
ಹಬ್ಬದ ಪ್ರಯುಕ್ತ ಮನೆಗಳಲ್ಲಿ ಸಂಭ್ರಮ ಮನೆ ಮಾಡಿತ್ತು. ಮಕ್ಕಳು ಹಾಗೂ ಮಹಿಳೆಯರು ಹಬ್ಬದ ವಿಶೇಷವಾದ ಎಳ್ಳು–ಬೆಲ್ಲವನ್ನು ನೆರೆಹೊರೆಯವರಿಗೆ ಹಂಚಿ ಸಂಭ್ರಮಿಸಿದರು. ಹಳ್ಳಿಗಳಲ್ಲಿ ರೈತರು ತಮ್ಮ ಜಾನುವಾರುಗಳನ್ನು ತೊಳೆದು ಸಿಂಗರಿಸಿ, ಪೂಜೆ ಮಾಡಿದರು.
ಸಂಜೆಯಾಗುತ್ತಿದ್ದಂತೆ ಕಿಚ್ಚು ಹಾಯಿಸಿ ಸಂಭ್ರಮಿಸಿದರು. ಬೆಂಕಿಯ ಕೆನ್ನಾಲಿಗೆಯನ್ನು ಲೆಕ್ಕಿಸದೆ ಜಾನುವಾರುಗಳು ಕಿಚ್ಚು ಹಾದವು. ಇದನ್ನು ಕಂಡ ಮಕ್ಕಳು ಕುಣಿದು ಕುಪ್ಪಳಿಸಿದರು. ಜಾನುವಾರುಗಳಿಗೆ ಮಾಡಿದ್ದ ಬಗೆಬಗೆಯ ಅಲಂಕಾರ ಗಮನ ಸೆಳೆಯಿತು.
ಹಬ್ಬದ ಪ್ರಯುಕ್ತ ಬೆಳಿಗ್ಗೆ ಮನೆಗಳ ಎದುರು ಬಗೆ ಬಗೆಯ ರಂಗೋಲಿ ಗಮನ ಸೆಳೆಯಿತು. ಮನೆಗಳಲ್ಲಿ ವಿಶೇಷ ಪೂಜೆ ಜರುಗಿತು. ಕಬ್ಬು ಸೇರಿದಂತೆ ತಾವು ಬೆಳೆದ ವಿವಿಧ ಬೆಳಗಳನ್ನಿಟ್ಟು ಪೂಜೆ ಮಾಡಿದರು. ಎಲ್ಲರೂ ಹೊಸ ಬಟ್ಟೆ ತೊಟ್ಟು ಸಂಭ್ರಮಿಸಿದರು. ಪಾಯಸ, ಕರ್ಚಿಕಾಯಿ ಸೇರಿದಂತೆ ವಿವಿಧ ರೀತಿಯ ಹಿಸಿ ತಿನಿಸಿ ಭೋಜನವನ್ನು ಕುಟುಂಬ ಸಮೇತ ಸವಿದರು.
ನಗರದ ಟ್ರೂಪ್ ಲೈನ್ ಸೇರಿದಂತೆ ಕೆಲ ಬಡಾವಣೆಗಳಲ್ಲಿ ಸ್ಥಳೀಯರು ಸಾಮೂಹಿಕವಾಗಿ ಪೊಂಗಲ್ ತಯಾರಿಸಿ ಸಂಭ್ರಮಿಸಿದರು. ಹೊಸ ಬಟ್ಟೆ ಧರಿಸಿದ್ದ ಮಹಿಳೆಯರು, ಗಂಡಸರು ಹಾಗೂ ಮಕ್ಕಳು ಪೊಂಗಲ್ ತಯಾರಿಸಿದರು. ನಂತರ, ಎಲ್ಲರಿಗೂ ಹಂಚಿ ತಾವೂ ಸವಿದರು.
ದೇವಾಲಯಗಳಲ್ಲಿ ಪೂಜೆ: ಸೂರ್ಯ ತನ್ನ ಪಥವನ್ನು ಬದಲಿಸುವ ಮಕರ ಸಂಕ್ರಮಣದ ಶುಭ ದಿನವಾದು ಇಂದು ದೇವಾಲಯಗಳಲ್ಲಿ ವಿಶೇಷ ಪೂಜೆ ಜರುಗಿತು. ನಗರದ ಚಾಮುಂಡೇಶ್ವರಿ ದೇವಸ್ಥಾನ, ಬಲಮುರಿ ಗಣಪತಿ, ಪಂಚಮುಖಿ ಆಂಜನೇಯ ದೇವಸ್ಥಾನ, ಕನ್ನಿಕಾ ಪರಮೇಶ್ವರಿ ದೇವಸ್ಥಾನ ಸೇರಿದಂತೆ ಬಹುತೇಕ ದೇವಸ್ಥಾನಗಳು ದಿನವಿಡೀ ಭಕ್ತರಿಂದ ತುಂಬಿದ್ದವು.
ಮನೆಯಲ್ಲಿ ಪೂಜೆ ಮುಗಿಸಿದ ಬಳಿಕ ಕುಟುಂಬದವರು ದೇವಸ್ಥಾನಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆದರು. ವಿಶೇಷ ಪೂಜೆ ಮಾಡಿಸಿ, ಪ್ರಸಾದ ಸವಿದರು. ಭಕ್ತರ ದಟ್ಟಣೆ ಹೆಚ್ಚಾಗಿದ್ದರಿಂದ ಕೆಲ ದೇವಸ್ಥಾನಗಳಲ್ಲಿ ಜನ ದರ್ಶನಕ್ಕಾಗಿ ಸಾಲುಗಟ್ಟಿ ನಿಂತಿದ್ದರು. ಸಂಕ್ರಾಂತಿ ಹಬ್ಬದ ಮಹತ್ವ ಸಾರುವ ಹಾಗೂ ದೇವರನ್ನು ಕೊಂಡಾಡುವ ಗೀತೆಗಳು ದೇಗುಲಗಳ ಆವರಣದಲ್ಲಿ ಮೊಳಗಿತು.
ಕಡಲೆಕಾಯಿ ಅವರೆ ಕಬ್ಬು ಪರಿಷೆ
ಸಂಕ್ರಾಂತಿ ಹಬ್ಬದ ಅಂಗವಾಗಿ ನಗರದ ಬೆಂಗಳೂರು–ಮೈಸೂರು ರಸ್ತೆಯಲ್ಲಿರುವ ಬಾಲ ನಾಗಮ್ಮ ಪಂಚಮುಖಿ ಆಂಜನೇಯ ದೇವಸ್ಥಾನದಲ್ಲಿ ಕಡಲೆಕಾಯಿ ಅವರೆಕಾಯಿ ಹಾಗೂ ಕಬ್ಬು ಪರಿಷೆ ನಡೆಯಿತು. ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ನಡೆದ ಪರಿಷೆಯಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು. ದೇವಸ್ಥಾನ ಟ್ರಸ್ಟ್ ವತಿಯಿಂದ ಭಕ್ತರಿಗೆ ಕಡಲೆಕಾಯಿ ಅವರೆ ಹಾಗೂ ಕಬ್ಬನ್ನು ಉಚಿತವಾಗಿ ವಿತರಿಸಲಾಯಿತು. ಹಬ್ಬದ ಪ್ರಯುಕ್ತ ದೇವರ ಮೂರ್ತಿಯನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಬೆಳಿಗ್ಗೆ 6 ಗಂಟೆಯಿಂದಲೇ ದೇವಸ್ಥಾನದಲ್ಲಿ ಗಣಹೋಮ ಆಂಜನೇಯ ಹೋಮ ವಿಶೇಷಾಲಂಕಾರ ಮಹಾ ಮಂಗಳಾರತಿ ಹಾಗೂ ವಿಶೇಷ ಪೂಜೆ ಜರುಗಿತು. ಭಕ್ತರು ಬೆಳಿಗ್ಗೆಯಿಂದಲೇ ದೇಗುಲಕ್ಕೆ ಭೇಟಿ ನೀಡಿ ದೇವರ ಮೂರ್ತಿಯನ್ನು ಕಣ್ತುಂಬಿಕೊಂಡರು. ಭಕ್ತರಿಗೆ ಚಿತ್ರಾನ್ನ ಹಾಗೂ ಪಾಯಸ ಪ್ರಸಾದ ವ್ಯವಸ್ಥೆ ಮಾಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.