ರಾಮನಗರ: ‘ಪ್ರಶ್ನಿಸುವ ಹಕ್ಕು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿರುವ ವಿಶೇಷತೆಗಳಲ್ಲೊಂದು. ಕಲಿಯುವ ವಯಸ್ಸಿನಲ್ಲೇ ಮಕ್ಕಳು ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಇದು ನಿಮ್ಮ ಜ್ಞಾನವನ್ನು ಮತ್ತಷ್ಟು ತೀಕ್ಷ್ಣಗೊಳಿಸುತ್ತದೆ. ಜೊತೆಗೆ, ನಾಯಕತ್ವ ಗುಣಗಳನ್ನು ಬೆಳೆಸುತ್ತದೆ’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ದಿಗ್ವಿಜಯ್ ಬೋಡ್ಕೆ ಸಲಹೆ ನೀಡಿದರು.
ತಾಲೂಕಿನ ಬನ್ನಿಕುಪ್ಪೆ (ಕೆ) ಗ್ರಾಮ ಪಂಚಾಯಿತಿ ಹಾಗೂ ಸಿಎಂಸಿಎ ಸ್ವಯಂಸೇವಾ ಸಂಸ್ಥೆ ಸಹಯೋಗದಲ್ಲಿ ಗ್ರಾಮದ ಕೆಂಗಲ್ ಆಂಜನೇಯಸ್ವಾಮಿ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ಮಕ್ಕಳ ಹಕ್ಕುಗಳ ಗ್ರಾಮಸಭೆ ಉದ್ಘಾಟಿಸಿ ಅವರು ಮಾತನಾಡಿದರು.
‘ಸ್ಥಳೀಯ ಸಂಸ್ಥೆಗಳು ಇರುವುದೇ ಜನರ ಮತ್ತು ಮಕ್ಕಳ ಸಮಸ್ಯೆಗಳನ್ನು ಬಗೆಹರಿಸಲು. ಗ್ರಾಮೀಣ ಪ್ರದೇಶದ ಮಕ್ಕಳು ಹೆಚ್ಚಿನ ಬುದ್ದಿವಂತರು. ಮಕ್ಕಳು ವೇದಿಕೆಗೆ ಬಂದು ಸ್ವಯಂಪ್ರೇರಿತರಾಗಿ ಪ್ರಶ್ನೆಗಳನ್ನು ಕೇಳುವಂತಹ ಧೈರ್ಯ ಬೆಳೆಸಿಕೊಂಡಿರುವುದು ಶ್ಲಾಘನೀಯ. ಇಂತಹ ಕಾರ್ಯಕ್ರಮಗಳು ಮಕ್ಕಳಲ್ಲಿ ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಲು ಸಹಕಾರಿಯಾಗಿವೆ’ ಎಂದರು.
‘ಕೆಲವು ಸಮಸ್ಯೆಗಳು ಬೇಗನೆ ಇತ್ಯರ್ಥವಾಗುತ್ತವೆ. ಉಳಿದವು ಒಂದಿಷ್ಟು ಸಮಯ ತೆಗೆದುಕೊಳ್ಳುತ್ತೇವೆ. ಮಕ್ಕಳು ಸಭೆಯಲ್ಲಿ ಹೇಳಿರುವ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲು ಗಮನ ಹರಿಸುವೆ. ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಮಕ್ಕಳ ಗ್ರಾಮ ಸಭೆಗಳನ್ನು ಸಿಎಂಸಿಎ ಸಂಸ್ಥೆಯ ಸಹಯೋಗದೊಂದಿಗೆ ನಡೆಸಲಾಗುತ್ತಿದೆ’ ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಸಿ. ಹೇಮಂತ್ ಕುಮಾರ್ ಮಾತನಾಡಿ, ‘ಸಮುದಾಯದ ಹಿತಾಸಕ್ತಿಗಳನ್ನು ರಕ್ಷಿಸಲು ಪಂಚಾಯತಿ ಬದ್ದವಾಗಿದೆ. ಮಕ್ಕಳ ಗ್ರಾಮಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯಗಳನ್ನು ಆಧರಿಸಿ, ಶಾಲೆಗಳಲ್ಲಿ ಕೆಲ ಬದಲಾವಣೆಗೆ ಕ್ರಮ ಕೈಗೊಳ್ಳಲಾಗುವುದು. ಮಾದರಿ ಗ್ರಾಮ ಪಂಚಾಯಿತಿಯತ್ತ ಗಮನ ಹರಿಸಲಾಗುವುದು’ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಿಎಂಸಿಎ ಸಂಸ್ಥೆಯ ಸಹಾಯಕ ನಿರ್ದೇಶಕ ಪಿ.ಆರ್. ಮರುಳಪ್ಪ, ‘ಮಕ್ಕಳ ಹಕ್ಕುಗಳ ಸಮಗ್ರ ಅನುಷ್ಠಾನವು ಗ್ರಾಮ ಪಂಚಾಯಿತಿ ಮತ್ತು ಇತರ ಎಲ್ಲಾ ಸರ್ಕಾರಿ ಇಲಾಖೆಗಳ ಜವಾಬ್ದಾರಿಯಾಗಿದೆ. ಪ್ರಜಾಪ್ರಭುತ್ವವು ತಳಮಟ್ಟದಲ್ಲಿ ಗಟ್ಟಿಗೊಳ್ಳಲು ಮಕ್ಕಳ ಗ್ರಾಮ ಸಭೆ ಅತ್ಯುತ್ತಮ ವೇದಿಕೆ. ಈ ವೇದಿಕೆ ಕಲ್ಪಿಸಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕ್ರಮ ಶ್ಲಾಘನೀಯ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಎಚ್.ಎಸ್. ಕುಮಾರ್, ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ. ರೇಣುಕಾ ಪ್ರಸಾದ್, ಪಿಡಿಸಿ ಆರ್. ಶಿವಕುಮಾರ್, ಪಂಚಾಯಿತಿ ಸದಸ್ಯರು, ಸಿ.ಆರ್.ಪಿ.ಡಿ.ಪಿ ಮೃತ್ಯುಂಜಯ, ಸಿಎಂಸಿಎ ಸಂಸ್ಥೆಯ ಮಹಮ್ಮದ್ ಶಫಿ, ವಿಜಯ್ ರಾಂಪುರ, ಶಿಲ್ಪ ನಾಗೇನಹಳ್ಳಿ, ವರಲಕ್ಷ್ಮಿ, ಅನಿತಾ, ಸೌಮ್ಯ, ರಘು ಮುಂತಾದವರು ಹಾಜರಿದ್ದರು.
ಮಕ್ಕಳಿಂದ ಪ್ರಶ್ನೆಗಳ ಸುರಿಮಳೆ
ಗ್ರಾಮಸಭೆಯಲ್ಲಿ ಭಾಗವಹಿಸಿದ್ದ ಅಧಿಕಾರಿಗಳಿಗೆ ಮಕ್ಕಳು ಪ್ರಶ್ನೆಗಳ ಸುರಿಮಳೆಗರೆದರು. ನಮ್ಮ ಶಾಲೆಗೆ ಶೌಚಾಲಯ ಕಾಂಪೌಂಡ್ ಕೊಠಡಿ ಸೋರುವಿಕೆ ಕಾಡುಪ್ರಾಣಿಗಳ ಹಾವಳಿ ಶಾಲೆಗಳಿಗೆ ಫ್ಯಾನ್ ಕಂಪ್ಯೂಟರ್ ವ್ಯವಸ್ಥೆ ಆಟದ ಮೈದಾನ ಸಮಸ್ಯೆ ಶಾಲಾ ಆವರಣದಲ್ಲಿ ಮದ್ಯಪಾನ-ಧೂಮಪಾನ ಹಾವಳಿ ತಡೆ ಹೆಣ್ಣು ಮಕ್ಕಳ ಸುರಕ್ಷತೆ ಶುಚಿ ಪ್ಯಾಡ್ ಸೈಕಲ್ ವಿತರಣೆ ಕ್ರೀಡಾ ಸಾಮಗ್ರಿ ಶಿಕ್ಷಕರ ಕೊರತೆ ನೀಗಿಸುವುದು ಸೇರಿದಂತೆ 50ಕ್ಕೂ ಹೆಚ್ಚು ಪ್ರಶ್ನೆಗಳನ್ನು ಕೇಳಿದರು. 300ಕ್ಕೂ ಹೆಚ್ಚು ಮಕ್ಕಳು ಸಭೆಯಲ್ಲಿ ಭಾಗವಹಿಸಿದ್ದರು. ಮಕ್ಕಳ ಪ್ರಶ್ನೆಗಳನ್ನು ಸಮಾಧಾನದಿಂದ ಆಲಿಸಿದ ಅಧಿಕಾರಿಗಳು ಹಾಗೂ ಪಂಚಾಯತಿ ಅಧ್ಯಕ್ಷ ಬಿ.ಸಿ. ಹೇಮಂತ್ ಕುಮಾರ್ ಅವರು ‘ಕಾಲಮಿತಿಯೊಳಗೆ ನಮ್ಮ ವ್ಯಾಪ್ತಿಗೆ ಬರುವ ಸಮಸ್ಯೆಗಳನ್ನು ಬಗೆಹರಿಸಲಾಗುವುದು’ ಎಂದು ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.