ಕುದೂರು: ಚಿತ್ರಕಲೆಯಲ್ಲಿ ಸಾಧನೆ ಮಾಡಲು ಅತೀವ ಆಸಕ್ತಿ, ಸಾಕಷ್ಟು ಬದ್ಧತೆ ಮತ್ತು ಸುದೀರ್ಘ ಶ್ರಮ ಅವಶ್ಯ. ಇಂತಹ ಕಲೆಯನ್ನು ಕರಗತ ಮಾಡಿಕೊಂಡಿರುವ ಕುದೂರು ಪಟ್ಟಣದ ಯುವಕನೊಬ್ಬ ಇದೀಗ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.
ಕುದೂರು ನಿವಾಸಿ ಸುರೇಶ್ ಹಾಗೂ ಲಕ್ಷ್ಮೀದೇವಿ ದಂಪತಿ ಪುತ್ರ ದೇವರಾಜ್ ಈ ಕಲಾಪ್ರತಿಭೆ. ಡಿಪ‍್ಲೊಮಾ ವಿದ್ಯಾಭ್ಯಾಸ ಮಾಡಿರುವ ದೇವರಾಜ್, ಡಿಸೈನ್ ಎಂಜಿನಿಯರ್ ಆಗಿ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಾ ಬಿಡುವಿನ ವೇಳೆಯಲ್ಲಿ ತಮಗಿಷ್ಟವಾದ ಚಿತ್ರಕಲೆಗೆ ಸಮಯ ಮೀಸಲಿಟ್ಟಿದ್ದಾರೆ.
ಕೇವಲ 29 ನಿಮಿಷದಲ್ಲಿ ಯಾರ ಸಹಾಯವೂ ಇಲ್ಲದೆ 48*67 ಇಂಚು ಅಳತೆ ಕ್ಯಾನ್ವಾಸ್ ನಲ್ಲಿ ಮೂಗಿನ ತುದಿಗೆ ಬಣ್ಣಮಾಡಿಕೊಂಡು ಚಿತ್ರನಟ ಪುನೀತ್ ರಾಜ್ ಕುಮಾರ್ ಅವರ ಚಿತ್ರವನ್ನು ತಲೆಕೆಳಗಾಗಿ ಬಿಡಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಪ್ರಶಸ್ತಿ ಪಡೆದಿದ್ದಾರೆ.
’ಮೂರನೇ ತರಗತಿಯಲ್ಲಿ ಓದುತ್ತಿದ್ದಾಗ ಮನಸ್ಸಿಗೆ ತೋಚಿದ ಚಿತ್ರಗಳನ್ನು ಬಿಳಿ ಹಾಳೆಯಲ್ಲಿ ಬಿಡಿಸಿ ಸ್ನೇಹಿತರಿಗೆ ಕೊಡುತ್ತಿದ್ದೆ. ಆಗೆಲ್ಲ ಸಹಪಾಠಿಗಳು ಆಡುತ್ತಿದ್ದ ಮೆಚ್ಚುಗೆ ಮಾತುಗಳು ನನ್ನನ್ನು ಅತೀವ ಖುಷಿಯಲ್ಲಿ ತೇಲಾಡುವಂತೆ ಮಾಡಿತ್ತು. ಶಾಲೆ ಶಿಕ್ಷಕಿ ಶಿಲ್ಪ ಅವರು ನನ್ನೊಳಗಿನ ಚಿತ್ರಕಲೆ ಬಗ್ಗೆ ಇರುವ ಆಸಕ್ತಿ ಮತ್ತು ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಿದರು’ ಎಂದು ತಿಳಿಸಿದರು.
ಚಿತ್ರ ಕಲಾವಿದ ವಿಲಾಸ್ ನಾಯಕ್ ಅವರಿಂದ ಸ್ಫೂರ್ತಿ ಪಡೆದಿರುವ ಇವರು ಮುಂದೆ ಗಿನ್ನಿಸ್ ದಾಖಲೆ ಬರೆಯಬೇಕೆಂಬ ಇಚ್ಛೆ ಇದೆ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.