ರಾಮನಗರ: ರಾಜ್ಯದ ಮಾವಿನ ತೊಟ್ಟಿಲಿನಲ್ಲಿ ಒಂದಾದ ರಾಮನಗರ ಜಿಲ್ಲೆಯಲ್ಲಿ ಹವಾಮಾನ ವೈಪರೀತ್ಯದಿಂದಾಗಿ, ಈ ಬಾರಿ ಶೇ 90ರಷ್ಟು ಬೆಳೆ ಕೈ ಕೊಟ್ಟಿದೆ. ಮಾವು ನೆಚ್ಚಿಕೊಂಡು ಬಂಡವಾಳ ಹಾಕಿದ ಬೆಳೆಗಾರರು ನಷ್ಟದ ಕೂಪದಲ್ಲಿದ್ದಾರೆ. ಮಳೆಯ ಕಣ್ಣಾಮುಚ್ಚಾಲೆಯಿಂದ ಬೆಳೆ ಕೈ ಕೊಟ್ಟರೆ, ಅದದಿಂದ ಪಾರಾಗಲು ಜಿಲ್ಲೆಯ ಹಲವು ಬೆಳೆಗಾರರು ಬೆಳೆ ವಿಮೆ ಮಾಡಿಸಿದ್ದಾರೆ.
ಆದರೆ, ಸಂಕಷ್ಟದಲ್ಲಿರುವ ಬೆಳೆಗಾರರಿಗೆ ವಿಮೆ ಪರಿಹಾರ ಸಿಗುವ ಲಕ್ಷಣಗಳು ಕಾಣುತ್ತಿಲ್ಲ. ಯಾಕೆಂದರೆ, ವಿಮೆ ಪರಿಹಾರದ ಮಾನದಂಡಗಳ ವ್ಯಾಪ್ತಿಗೆ ಈ ಸಲದ ಬೆಳೆ ನಷ್ಟವು ಒಳಪಡುತ್ತಿಲ್ಲ. ಇದರಿಂದಾಗಿ, ಈಗಾಗಲೇ ಕಷ್ಟದಲ್ಲಿರುವ ಬೆಳೆಗಾರರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಜಿಲ್ಲೆಯಲ್ಲಿ ಈ ಬಾರಿ ವಿಮೆಗೆ ನೋಂದಣಿ ಮಾಡಿಸಿರುವರ ಸಂಖ್ಯೆ ಕಳೆದ ಏಳು ವರ್ಷಗಳಲ್ಲಿ ಆಗಿರುವ ಅತ್ಯಧಿಕವಾಗಿದೆ. ಆದರೆ, ವಿಮೆ ಪರಿಹಾರದ ಭರವಸೆ ಕ್ಷೀಣಿಸಿದೆ.
11,949 ಬೆಳೆಗಾರರು ನೋಂದಣಿ: ‘ಜಿಲ್ಲೆಯಲ್ಲಿ 30,067 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತದೆ. ಸುಮಾರು 28 ಸಾವಿರ ರೈತರು ಮಾವು ಬೆಳೆಯನ್ನು ಆಶ್ರಯಿಸಿದ್ದಾರೆ. 11,949 ಬೆಳೆಗಾರರು 2023–24ನೇ ಸಾಲಿನಲ್ಲಿ ಮಾವು ವಿಮೆಗೆ ನೋಂದಣಿ ಮಾಡಿಸಿದ್ದಾರೆ’ ಎಂದು ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ರಾಜು ಎಂ.ಎಸ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಅತಿ ಹೆಚ್ಚು ಮಾವು ಬೆಳೆಯುವ ರಾಮನಗರ ತಾಲ್ಲೂಕಿನಲ್ಲಿ 4,821 ಬೆಳೆಗಾರರು ನೋಂದಣಿ ಮಾಡಿಕೊಂಡಿದ್ದು, 2,372.61 ಹೆಕ್ಟೇರ್ ಮಾವು ಪ್ರದೇಶ ವಿಮೆಗೆ ಒಳಪಟ್ಟಿದೆ. ಮಾಗಡಿಯಲ್ಲಿ ಅತಿ ಕಡಿಮೆ 1,263 ಬೆಳೆಗಾರರು ನೋಂದಣಿ ಮಾಡಿಕೊಂಡಿದ್ದು, ಇಲ್ಲಿ 754.36 ಹೆಕ್ಟೇರ್ ವಿಮಾ ವ್ಯಾಪ್ತಿಗೆ ಸೇರಿದೆ’ ಎಂದರು.
ಮಳೆಯೇ ಮುಖ್ಯ ಮಾನದಂಡ: ‘ಬೆಳೆ ವಿಮೆಗೆ ಜಿಲ್ಲೆಯಲ್ಲಿ ಮಳೆಯೇ ಮುಖ್ಯಮಾನದಂಡವಾಗಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು (ಕೆಎಸ್‌ಎನ್‌ಡಿಎಂಸಿ) ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮಳೆ ಮಾಪಕಗಳನ್ನು ಅಳವಡಿಸಿದೆ. ಅಲ್ಲಿನ ವರದಿ ಜೊತೆಗೆ ವಾತಾವರಣದ ತಾಪಮಾನ, ಗಾಳಿಯ ವೇಗ, ಆದ್ರತೆ ಸೇರಿದಂತೆ ಇತರ ಅಂಶಗಳು ಸಹ ವಿಮೆ ಪರಿಹಾರ ನಿಗದಿಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ’ ಎಂದು ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.
‘ಈ ಸಲ ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ತಾಪಮಾನವು ತಾರಕಕ್ಕೇರಿದ್ದರಿಂದ ಹೆಚ್ಚು ನಷ್ಟವಾಗಿದೆ. ಇದು ವಿಮೆ ಮಾನದಂಡದ ವ್ಯಾಪ್ತಿಗೆ ಅಷ್ಟಾಗಿ ಒಳಪಡುವುದಿಲ್ಲ. ಇದರಿಂದಾಗಿ ಬೆಳೆಗಾರರಿಗೆ ವಿಮೆ ಪರಿಹಾರ ಸಿಗುವುದು ಅನುಮಾನವಾಗಿದೆ. ಮೊದಲ ಬಾರಿಗೆ ಬೆಳೆಗಾರರು ಇಂತಹದ್ದೊಂದು ಸಂಕಷ್ಟಕ್ಕೆ ಸಿಲುಕಿದ್ದಾರೆ’ ಎಂದು ಹೇಳಿದರು.
ಶೇ 90ರಷ್ಟು ಮಳೆಯಾಶ್ರಿತ: ಜಿಲ್ಲೆಯ ಬಹುತೇಕ ಮಾವು ಪ್ರದೇಶ ಮಳೆಯಾಶ್ರಿತವಾಗಿದೆ. ಅತಿಯಾದ ತಾಪಮಾನವು ಬೆಳೆಗೆ ಭಾರಿ ಹೊಡೆತ ಕೊಟ್ಟಿದೆ. ಅವಧಿ ಪೂರ್ವದಲ್ಲೇ ಹೂವು ಉದುರಿದ್ದರಿಂದ ಮರಗಳಲ್ಲಿ ಕಾಯಿ ಕಟ್ಟಿಲ್ಲ. ಅಲ್ಪಸ್ವಲ್ಪ ಬೆಳೆ ಉಳಿದರೂ ಜೋನಿ ಮತ್ತು ನುಸಿಹುಳು ಬಾಧೆಗೆ ಬಲಿಯಾಗಿವೆ. ಕಾಯಿಗಳು ಹಳದಿ ಬಣ್ಣಕ್ಕೆ ತಿರುಗಿವೆ. ಬಾದಾಮಿ ಮಾವಿನಲ್ಲಿ ಸ್ಪಾಂಜಿ ಟಿಶ್ಯೂ ಎಂಬ ಸಮಸ್ಯೆ ಕಾಣಿಸಿಕೊಂಡಿದೆ. ಇವೆಲ್ಲವೂ ಬೆಳೆಗಾರರನ್ನು ನಷ್ಟಕ್ಕೆ ದೂಡಿವೆ ಎಂದು ಮಾವು ನಷ್ಟ ಕುರಿತು ಜಂಟಿ ಸಮೀಕ್ಷೆ ನಡೆಸಿದ್ದ ಅಧಿಕಾರಿಗಳು ತಮ್ಮ ವರದಿಯಲ್ಲಿ ತಿಳಿಸಿದ್ದರು.
ಮಾವು ಬೆಳೆ ಉಳಿಸಿಕೊಳ್ಳಲು ಎಷ್ಟೇ ಪರದಾಡಿದರು ಸಾಧ್ಯವಾಗಿಲ್ಲ. ನೀರಿನ ಕೊರತೆ ಮತ್ತು ಅತಿಯಾದ ಬಿಸಿಲಿಗೆ ಬೆಳೆ ಕೈ ಸೇರಿಲ್ಲ. ಸರ್ಕಾರ ನಮ್ಮ ನೆರವಿಗೆ ಬಾರದಿದ್ದರೆ ಬೆಳೆಗಾರರು ಮತ್ತಷ್ಟು ಸಾಲದ ಶೂಲಕ್ಕೆ ಸಿಲುಕಬೇಕಾಗುತ್ತದೆ- ಗಂಗರಾಜು ಮಾವು ಬೆಳೆಗಾರ ಅರೇಹಳ್ಳಿ ರಾಮನಗರ ತಾಲ್ಲೂಕು
‘ಮಾವು ಬೆಳೆ ನೆಚ್ಚಿಕೊಂಡಿದ್ದವರು ಬೆಳೆ ನಷ್ಟದಿಂದ ತತ್ತರಿಸಿದ್ದಾರೆ. ಒಂದು ಕಡೆ ಮಾವಿನ ಇಳುವರಿ ಪಾತಾಳಕ್ಕೆ ಕುಸಿದಿದ್ದರೆ ಮತ್ತೊಂದೆಡೆ ಒಣಗುತ್ತಿರುವ ಮಾವಿನ ಮರಗಳನ್ನು ಉಳಿಸಿಕೊಳ್ಳುವ ಸವಾಲಿನ ಸುಳಿಯಲ್ಲಿ ಸಿಲುಕದ್ದಾರೆ. ಇದೀಗ ಬೆಳೆಗಾರರ ಪೈಕಿ ವಿಮೆ ಮಾಡಿಸಿಕೊಂಡವರಿಗೆ ಅದೂ ಸಹ ಕೈಗೆ ಸಿಗದಿದ್ದರೆ ರೈತನ ಕಥೆ ಏನಾಗಬೇಕು? ಸರ್ಕಾರ ಈ ವಿಷಯದಲ್ಲಿ ಮಧ್ಯ ಪ್ರವೇಶಿಸಬೇಕು. ವಿಮೆ ಮಾಡಿಸುವವರಿಗೆ ವಿಮಾ ಪರಿಹಾರ ನೀಡಲು ಸೂಕ್ತ ಕ್ರಮ ಕೈಗೊಳ್ಳಬೇಕು. ಉಳಿದವರಿಗೂ ಬೆಳೆ ನಷ್ಟಕ್ಕೆ ಅನುಗುಣವಾಗಿ ವಿಶೇಷ ಪರಿಹಾರ ಪ್ಯಾಕೇಜ್ ಘೋಷಿಸಬೇಕು’ ಎಂದು ರೈತ ಮುಖಂಡ ಸಿ. ಪುಟ್ಟಸ್ವಾಮಿ ಒತ್ತಾಯಿಸಿದರು. ‘ತಾಪಮಾನದ ಕಾರಣ ಹೇಳಿ ನಿರಾಕರಣೆ ಸಲ್ಲದು’ ‘ಬರದ ಕಾರಣಕ್ಕೆ ಮಳೆ ಕೈ ಕೊಟ್ಟಿರುವುದು ಸಹ ಮಾವಿನ ಬೆಳೆ ನಷ್ಟಕ್ಕೆ ಪ್ರಮುಖ ಕಾರಣ. ಇದೇ ಕಾರಣಕ್ಕೆ ಅತಿಯಾದ ತಾಪಮಾನಕ್ಕೆ ವಾತಾವರಣ ಸಾಕ್ಷಿಯಾಗಿದೆ. ಆದರೆ ನಷ್ಟಕ್ಕೆ ಮಳೆ ಬದಲು ತಾಪಮಾನವನ್ನೇ ಮುಖ್ಯವಾಗಿ ಪರಿಗಣಿಸಿ ವಿಮೆಗೆ ನೋಂದಣಿ ಮಾಡಿಕೊಂಡವರಿಗೆ ಪರಿಹಾರ ಸಿಗುವುದಿಲ್ಲ ಎಂದು ಹೇಳುವುದು ತಪ್ಪು. ಈ ಬಗ್ಗೆ ಜಿಲ್ಲಾಧಿಕಾರಿ ಭೇಟಿ ಮಾಡಿ ಮನವಿ ಕೊಟ್ಟಿದ್ದೇವೆ. ಜಿಲ್ಲೆಯ ಮಾವು ಬೆಳೆಗಾರರ ಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟಿದ್ದೇವೆ. ಅವರು ಸೂಕ್ತವಾಗಿ ಸ್ಪಂದಿಸಬೇಕು’ ಎಂದು ಜಿಲ್ಲಾ ಮಾವು ಮತ್ತು ತೆಂಗು ಬೆಳೆ ರೈತ ಉತ್ಪಾದಕರ ಕಂಪನಿ ವ್ಯವಸ್ಥಾಪಕ ನಿರ್ದೇಶಕ ಆರ್. ಚಿಕ್ಕಭೈರೇಗೌಡ ಹೇಳಿದರು.
ಮಾನದಂಡ
ಸೆಪ್ಟೆಂಬರ್ ಮತ್ತು ಅಕ್ಟೋಬರ್ ಅವಧಿಯಲ್ಲಿ ಅಗತ್ಯ ಮಳೆ ಸುರಿಯದಿದ್ದರೆ
ಡಿಸೆಂಬರ್‌ನಿಂದ ಫೆಬ್ರುವರಿವರೆಗೆ ಹೆಚ್ಚು ಶೀತದ ವಾತಾವರಣವಿದ್ದು, ಬೆಳೆ ರೋಗ ಉಲ್ಭಣಗೊಂಡರೆ
ಜನವರಿ ಮತ್ತು ಫೆಬ್ರುವರಿ ತಿಂಗಳಲ್ಲಿ ಅತಿಯಾದ ಮಳೆಸುರಿದರೆ
ಏಪ್ರಿಲ್‌ನಲ್ಲಿ ಹೆಚ್ಚು ಗಾಳಿ ಬೀಸಿ ಹಾನಿಯಾದರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.