ADVERTISEMENT

ರಾಮನಗರ | ಇನ್ನೂ ಶುರುವಾಗದ ಸಂಸ್ಕರಣಾ ಘಟಕ: ಹುಸಿಯಾದ ಮಾವು ಬೆಳೆಗಾರರ ನಿರೀಕ್ಷೆ

ಓದೇಶ ಸಕಲೇಶಪುರ
Published 30 ಏಪ್ರಿಲ್ 2024, 4:21 IST
Last Updated 30 ಏಪ್ರಿಲ್ 2024, 4:21 IST
<div class="paragraphs"><p>ಚನ್ನಪಟ್ಟಣ ತಾಲ್ಲೂಕಿನ ಬೈರಾಪಟ್ಟಣ ಬಳಿ ನಿರ್ಮಾಣವಾಗುತ್ತಿರುವ ಮಾವು ಸಂಸ್ಕರಣ ಘಟಕ-&nbsp;</p></div>

ಚನ್ನಪಟ್ಟಣ ತಾಲ್ಲೂಕಿನ ಬೈರಾಪಟ್ಟಣ ಬಳಿ ನಿರ್ಮಾಣವಾಗುತ್ತಿರುವ ಮಾವು ಸಂಸ್ಕರಣ ಘಟಕ- 

   

ರಾಮನಗರ: ಮಾವು ಬೆಳೆಯ ಮೌಲ್ಯವರ್ಧನೆ ನಿಟ್ಟಿನಲ್ಲಿ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನಲ್ಲಿ ನಿರ್ಮಾಣವಾಗುತ್ತಿರುವ ಮಾವು ಸಂಸ್ಕರಣಾ ಘಟಕವು, ಈ ವರ್ಷವೂ ರೈತರ ಬಳಕೆಗೆ ಮುಕ್ತವಾಗುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಈ ಸಲದ ಮಾವಿನ ಋತು ಆರಂಭವಾಗುವ ಹೊತ್ತಿಗೆ ಘಟಕವು ಕಾರ್ಯಾರಂಭ ಮಾಡಲಿದೆ ಎಂಬ ರೈತರ ಬಹುದಿನಗಳ ನಿರೀಕ್ಷೆ ಹುಸಿಯಾಗಿದೆ.

ರಾಮನಗರವು ಮಾವು ಹೆಚ್ಚಾಗಿ ಬೆಳೆಯುವ ರಾಜ್ಯದ ಎರಡನೇ ಜಿಲ್ಲೆಯಾಗಿದೆ. ಹಾಗಾಗಿ, ಬೆಳೆಗಾರರ ಬೇಡಿಕೆ ಮೇರೆಗೆ ಬೈರಾಪಟ್ಟಣದ ಬಳಿ ಕರ್ನಾಟಕ ರಾಜ್ಯ ಮಾವು ಅಭಿವೃದ್ದಿ ಮತ್ತು ಮಾರುಕಟ್ಟೆ ನಿಗಮದಿಂದ (ಕೆಎಸ್‌ಎಂಡಿಎಂಸಿಎಲ್‌) ಸಂಸ್ಕರಣಾ ಘಟಕ ನಿರ್ಮಿಸಲಾಗುತ್ತಿದೆ. ವರ್ಷದ ಹಿಂದೆ ಶುರುವಾದ ಘಟಕದ ಸಿವಿಲ್ ಕಾಮಗಾರಿ ವರ್ಷವಾದರೂ ಪೂರ್ಣಗೊಂಡಿಲ್ಲ.

ADVERTISEMENT

₹10 ಕೋಟಿ ಯೋಜನೆ: ಮಾವು ಉತ್ಪನ್ನದ ಮೌಲ್ಯವರ್ಧನೆಗಾಗಿ ಜಿಲ್ಲೆಯಲ್ಲಿ ಸಂಸ್ಕರಣಾ ಘಟಕ ನಿರ್ಮಾಣವಾಗಬೇಕೆಂಬುದು ಜಿಲ್ಲೆಯ ಬಹುದಿನಗಳ ಬೇಡಿಕೆಯಾಗಿತ್ತು. ಅದರಂತೆ, ರಾಜ್ಯ ಸರ್ಕಾರ ಬೈರಾಪಟ್ಟಣ ಸಮೀಪ 15 ಎಕರೆ ಜಾಗ ಗುರುತಿಸಿತ್ತು. ಘಟಕ ನಿರ್ಮಾಣ ಮತ್ತು ಯಂತ್ರೋಪಕರಣಗಳ ಅಳಡಿಕೆಗೆ ಒಟ್ಟು ₹10 ಕೋಟಿ ಅನುದಾನ ಬಿಡುಗಡೆ ಮಾಡಿತ್ತು.

ಕಳೆದ ಬಿಜೆಪಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಅವರು ಮಾರ್ಚ್ 27ರಂದು ಘಟಕ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ್ದರು. ಟೆಂಡರ್ ಷರತ್ತಿನ ಪ್ರಕಾರ, ಮಾರ್ಚ್ 30ಕ್ಕೆ ಶುರುವಾದ ಕಾಮಗಾರಿಯು 2024ರ ಫೆಬ್ರುವರಿ 2ಕ್ಕೆ ಮುಗಿಯಬೇಕಿತ್ತು. ಆದರೆ ಕುಂಟುತ್ತಾ ಸಾಗುತ್ತಿರುವ ಕಾಮಗಾರಿಯಿಂದಾಗಿ, ಅವಧಿ ಮುಗಿದರೂ ಸಂಸ್ಕರಣ ಘಟಕವು ಅವಧಿ ಮುಗಿದರೂ ಪೂರ್ಣಗೊಂಡಿಲ್ಲ.

ಯಂತ್ರೋಪಕರಣಕ್ಕೆ ₹3.07 ಕೋಟಿ: ‘ಮೀಸಲಿಟ್ಟಿರುವ 15 ಎಕರೆ ಭೂಮಿ ಪೈಕಿ 4 ಎಕರೆಯಲ್ಲಿ ಸಂಸ್ಕಾರಣಾ ಘಟಕದ ನಿರ್ಮಾಣವು ₹6.93 ಕೋಟಿ ವೆಚ್ಚದಲ್ಲಿ ನಡೆಯುತ್ತಿದೆ. ಸಿವಿಲ್ ಕಾಮಗಾರಿ ಮುಗಿದ ಬಳಿಕ ₹3.07 ಕೋಟಿ ವೆಚ್ಚದಲ್ಲಿ ಯಂತ್ರೋಪಕರಣಗಳನ್ನು ಅಳವಡಿಕೆ ಮಾಡಲಾಗುವುದು’ ಎಂದು ಎಂದು ಕರ್ನಾಟಕ ರಾಜ್ಯ ಮಾವು ಅಭಿವೃದ್ದಿ ಮತ್ತು ಮಾರುಕಟ್ಟೆ ನಿಗಮದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಉದ್ದೇಶಿತ ಸ್ಥಳದಲ್ಲಿ ಮೊದಲ ಹಂತದಲ್ಲಿ ಸಂಸ್ಕರಣ ಘಟಕ ನಿರ್ಮಾಣವಾದ ಬಳಿಕ, ಎರಡನೇ ಹಂತದಲ್ಲಿ ಉಳಿದ 11 ಎಕರೆಯಲ್ಲಿ ಸಾರ್ವಜನಿಕ–ಖಾಸಗಿ ಸಹಭಾಗಿತ್ವದಡಿ ವಿವಿಧ ಸೌಲಭ್ಯಗಳನ್ನು ಒದಗಿಸಲು ನಿರ್ಧರಿಸಲಾಗಿದೆ. ಲೋಕಸಭಾ ಚುನಾವಣೆ ಕಾರಣಕ್ಕೆ ಕೆಲ ಕೆಲಸಗಳು ವಿಳಂಬವಾಗಿವೆ. ಸಿವಿಲ್ ಕಾಮಗಾರಿ ಆದಷ್ಟು ಬೇಗ ಮುಗಿಯಲಿದ್ದು, ಯಂತ್ರೋಪಕರಣಳ ಅಳವಡಿಕೆಗೆ ಚಾಲನೆ ನೀಡಲಾಗುವುದು ಎನ್ನುತ್ತವೆ ಮೂಲಗಳು.

ಆರಂಭಕ್ಕೆ ಆಗ್ರಹಿಸಿ ಶೀಘ್ರ ಎಂ.ಡಿ ಭೇಟಿ ನಿರ್ಧಾರ

‘ಈ ಸಲದ ಮಾವು ಋತು ಆರಂಭವಾಗುವ ಹೊತ್ತಿಗೆ ಸಂಸ್ಕರಣಾ ಘಟಕ ಕಾರ್ಯಾರಂಭಿಸಲಿದೆ ಅಂದುಕೊಂಡಿದ್ದೆವು. ಆದರೆ, ನಮ್ಮ ಕಾಮಗಾರಿಯೂ ಇನ್ನೂ ಮುಗಿದಿಲ್ಲ. ಗುತ್ತಿಗೆದಾರನಿಗೆ ಬಿಲ್ ಪಾವತಿಯಾಗದಿರುವುದರಿಂದ ಕೆಲಸ ವಿಳಂಬವಾಗಿದೆ ಎಂಬ ಮಾಹಿತಿ ಬಂದಿದೆ. ಬೆಳೆಗಾರರಿಗೆ ಅತ್ಯುಪಯುಕ್ತವಾದ ಘಟಕದ ಕೆಲಸವನ್ನು ಆದಷ್ಟು ಬೇಗ ಪೂರ್ಣಗೊಳಿಸಿ ಬಳಕೆಗೆ ಮುಕ್ತವಾಗಿಸಬೇಕು ಎಂದು ಒತ್ತಾಯಿಸಿ, ಸದ್ಯದಲ್ಲೇ ಮಾವು ಅಭಿವೃದ್ದಿ ಮತ್ತು ಮಾರುಕಟ್ಟೆ ನಿಗಮದ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರನ್ನು ಭೇಟಿ ಮಾಡಲಾಗುವುದು’ ಎಂದು ಜಿಲ್ಲಾ ಮಾವು ಮತ್ತು ತೆಂಗು ಬೆಳೆ ರೈತ ಉತ್ಪಾದಕರ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಆರ್. ಚಿಕ್ಕ ಬೈರೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮಳೆ ಇಲ್ಲದೆ ಎದುರಾಗಿರುವ ಬರಗಾಲದಿಂದಾಗಿ ಜಿಲ್ಲೆಯಲ್ಲಿ ಈ ಸಲ ಮಾವು ಬೆಳೆ ಕೈ ಕೊಟ್ಟಿದೆ. ಒಂದು ಕಡೆ ಫಸಲು ನೆಲ ಕಚ್ಚಿದ್ದರೆ, ಮತ್ತೊಂದೆಡೆ ಬಿರು ಬಿಸಿಲಿಗೆ ಮರಗಳು ಒಣಗುತ್ತಿವೆ. ಬೆಳೆಗಾರರಿಗೆ ಎರಡೂ ಕಡೆಯಿಂದಲೂ ಭಾರಿ ನಷ್ಟವಾಗಿದೆ. ಹಾಗಾಗಿ, ಸರ್ಕಾರ ಬೆಳೆಗಾರರ ನೆರವಿಗೆ ಬರಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದೇವೆ’ ಎಂದು ಹೇಳಿದರು.

ಸಂಸ್ಕರಣಾ ಘಟಕದ ಅನುಕೂಲಗಳೇನು?

‘ರೈತರಿಗೆ ಮಾರುಕಟ್ಟೆ ಒದಗಿಸಬೇಕು ಎನ್ನುವುದು ಈ ಸಂಸ್ಕರಣಾ ಘಟಕದ ಮುಖ್ಯ ಉದ್ದೇಶ. ರಫ್ತು, ಮೌಲ್ಯವರ್ಧನೆ ಹಾಗೂ ಉಪ ಉತ್ಪನ್ನಗಳ ತಯಾರಿಯಿಂದ ರೈತರು ಉತ್ತಮ ಆದಾಯ ಪಡೆಬಹುದು. ರಾಜ್ಯದಲ್ಲಿ ಮಾವು ಬೆಳೆಯುವ ಜಿಲ್ಲೆಗಳಲ್ಲಿ ಕೋಲಾರ ಹಾಗೂ ರಾಮನಗರ ಜಿಲ್ಲೆಗಳು ಮೊದಲೆರಡು ಸ್ಥಾನದಲ್ಲಿವೆ. ರಾಮನಗರ ಜಿಲ್ಲೆ ಒಂದರಲ್ಲಿಯೇ 26,889 ಹೆಕ್ಟೇರ್‌ಗೂ ಹೆಚ್ಚಿನ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತದೆ. ವಾರ್ಷಿಕ ಸುಮಾರು 2.5 ಲಕ್ಷ ಟನ್‍ಗಳಷ್ಟು ಸಿಗುತ್ತಿದೆ. ಸುಮಾರು ₹400 ಕೋಟಿಯಷ್ಟು ವಹಿವಾಟು ನಡೆಯುತ್ತದೆ. ರಾಜ್ಯದಲ್ಲಿ ಅಲ್ಲಲ್ಲಿ ಅಲ್ಪಪ್ರಮಾಣದ ಸಂಸ್ಕರಣಾ ಘಟಕಗಳಿವೆ. ಕೆಲವು ಕಾರ್ಖಾನೆಗಳು ಮಾವು ಋತುವಿನಲ್ಲಿ ಹಣ್ಣನ್ನು ಪಲ್ಪ್‌ ಮಾಡಿ ಸಂಗ್ರಹಿಸಿಟ್ಟುಕೊಳ್ಳುತ್ತವೆ. ಅದನ್ನು ಹೊರತುಪಡಿಸಿ ಕರ್ನಾಟಕದಲ್ಲಿ ಎಲ್ಲಿಯೂ ಬೃಹತ್‌ ಸಂಸ್ಕರಣಾ ಘಟಕಗಳಿಲ್ಲ. ಆಂಧ್ರಪ್ರದೇಶದ ಚಿತ್ತೂರಿನಲ್ಲಿ ಬೃಹತ್ ಸಂಸ್ಕರಣಾ ಘಟಕವಿದ್ದು, ಈ ಭಾಗದ ಹಣ್ಣು ಬಹುತೇಕ ಅಲ್ಲಿಗೆ ಸರಬರಾಜಾಗುತ್ತದೆ’ ಎಂದು ರೈತ ಮುಖಂಡ ಸಿ. ಪುಟ್ಟಸ್ವಾಮಿ ಹೇಳಿದರು.

ಚನ್ನಪಟ್ಟಣ ತಾಲ್ಲೂಕಿನ ಬೈರಾಪಟ್ಟಣದ ಬಳಿ ನಿರ್ಮಾಣವಾಗುತ್ತಿರುವ ಮಾವು ಸಂಸ್ಕರಣಾ ಘಟಕದ ಫ್ಲೋರಿಂಗ್ ಕೆಲಸದಲ್ಲಿ ನಿರತ ಕಾರ್ಮಿಕರು

‘ಸ್ಥಳೀಯವಾಗಿಯೇ ಸಂಸ್ಕರಣಾ ಘಟಕ ಶುರುವಾದರೆ ರೈತರಿಗೆ ಹೆಚ್ಚಿನ ಅನುಕೂಲವಾಗುತ್ತದೆ. ಕೆಡುತ್ತದೆ ಎಂಬ ಕಾರಣಕ್ಕೆ ಸಿಕ್ಕ ಬೆಲೆಗೆ ಮಾರಾಟ ಮಾಡುವ ಬದಲು, ಹೆಚ್ಚಿನ ದಿನಗಳ ಕಾಲ ಪಲ್ಪ್ ಮಾಡಿ ಸಂಗ್ರಹಿಸಿಟ್ಟುಕೊಂಡು ಮಾರಬಹುದು. ಇಲ್ಲಿಂದಲೇ ಹೊರ ರಾಜ್ಯಗಳಿಗೆ ಮಾವು ಕಳಿಸುವ ಜೊತೆಗೆ ರಫ್ತು ಸಾಧ್ಯವಾಗಲಿದೆ. ನಮ್ಮ ಉತ್ಪನ್ನಗಳಿಗೆ ಯೋಗ್ಯ ಬೆಲೆ ದೊರೆಯಲಿದೆ. ಜೊತೆಗೆ ಮೈಸೂರು, ಮಂಡ್ಯ, ತುಮಕೂರು, ಕೋಲಾರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ಮಾವು ಕಟಾವು ಆಗಿ ಇಲ್ಲಿಗೆ ಬರಲಿದೆ. 80 ಸಾವಿರದಿಂದ 1 ಲಕ್ಷ ಟನ್‌ವರೆಗೆ ಸಂಸ್ಕರಣೆ ಇಲ್ಲಿ ಸಾಧ್ಯವಾಗಲಿದೆ. ಇಲ್ಲಿ ಕೇವಲ ಮಾವು ಮಾತ್ರ ಸಂಸ್ಕರಣೆಗೆ ಒಳಪಡುವುದಿಲ್ಲ. ಸೀಬೆ, ಸಪೋಟಾ, ಬಾಳೆ, ಎಳನೀರು, ತರಕಾರಿಗಳನ್ನು ಸಹ ಸಂಸ್ಕರಣೆ ಮಾಡಲು ಸಾಧ್ಯವಿದೆ. ಮಾವು ಬೆಳೆ ಅವಧಿ ಕೇವಲ 100 ದಿನಗಳದ್ದು. ಈ ಅವಧಿ ಬಿಟ್ಟು ಉಳಿದ ಅವಧಿಯಲ್ಲಿ ಉಳಿದ ಹಣ್ಣುಗಳನ್ನು ಸಂಸ್ಕರಣೆ ಮಾಡಬಹುದಾಗಿದೆ. ಇದರಿಂದ ಎಲ್ಲ ರೈತರಿಗೂ ಅನುಕೂಲ ಆಗಲಿದೆ’ ಎನ್ನುತ್ತಾರೆ ಪುಟ್ಟಸ್ವಾಮಿ.

ಮಾವು

ಶೇ 80ರಷ್ಟು ಕಾಮಗಾರಿ
‘ಘಟಕದ ಸಿವಿಲ್ ಕಾಮಗಾರಿ ಶೇ 80ರಷ್ಟು ಪೂರ್ಣಗೊಂಡಿದೆ. ಸದ್ಯ ನೆಲಹಾಸು ಹಾಗೂ ಪ್ಲಾಸ್ಟರಿಂಗ್ ಕೆಲಸ ಭರದಿಂದ ನಡೆಯುತ್ತಿದೆ. ಸಿವಿಲ್ ಕೆಲಸಗಳು ಪೂರ್ಣಗೊಂಡ ಬಳಿಕ, ಘಟಕಕ್ಕೆ ಅಗತ್ಯವಿರುವ ಯಂತ್ರೋಪಕರಣಗಳನ್ನು ಅಳವಡಿಸಲಾಗುವುದು. ನಂತರ, ಘಟಕವು ರೈತರ ಬಳಕೆಗೆ ಮುಕ್ತವಾಗಲಿದೆ’ ಎಂದು ಕರ್ನಾಟಕ ರಾಜ್ಯ ಮಾವು ಅಭಿವೃದ್ದಿ ಮತ್ತು ಮಾರುಕಟ್ಟೆ ನಿಗಮದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
ಮಾವು ಸಂಸ್ಕರಣ ಘಟಕದ ಕಾಮಗಾರಿ ವಿಳಂಬದಿಂದ ಒಂದು ವರ್ಷ ನಷ್ಟವಾಯಿತು. ಆದಷ್ಟು ಬೇಗ ಕೆಲಸ ಪೂರ್ಣಗೊಳಿಸಿ, ಯಂತ್ರೋಪಕರಣಗಳನ್ನು ಅಳವಡಿಸಬೇಕು
– ಸಿ. ಪುಟ್ಟಸ್ವಾಮಿ, ರೈತ ಮುಖಂಡ, ಚನ್ನಪಟ್ಟಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.