ರಾಮನಗರ: ಎರಡು ವರ್ಷಗಳ ವಿರಾಮದ ಬಳಿಕ ಜಿಲ್ಲೆಯಲ್ಲಿ ಮತ್ತೆ ಮಾವು ಮೇಳಕ್ಕೆ ವೇದಿಕೆ ಸಜ್ಜಾಗಿದ್ದು, ಮೇ ಮೊದಲ ಅಥವಾ ಎರಡನೇ ವಾರದಲ್ಲಿ ಮೇಳ ನಡೆಯಲಿದೆ.
ಮಾವು ಕೃಷಿಗೆ ಹೆಸರಾದ ರಾಮನಗರದಲ್ಲಿ ತೋಟಗಾರಿಕೆ ಇಲಾಖೆಯು ಪ್ರತಿ ವರ್ಷ ಮೇಳ ಆಯೋಜನೆ ಮೂಲಕ ಬೆಳೆಗಾರರು–ಗ್ರಾಹಕರ ನಡುವೆ ನೇರ ಮಾರಾಟದ ವ್ಯವಸ್ಥೆ ಕಲ್ಪಿಸುತ್ತಾ ಬಂದಿದೆ. ಗ್ರಾಹಕರಿಗೆ ಕಾರ್ಬೈಡ್ ರಾಸಾಯನಿಕ ಮುಕ್ತ ಹಣ್ಣುಗಳ ಮಾರಾಟ ನಡೆಯುತ್ತ ಬಂದಿದೆ. ಇದರಿಂದ ಬೆಳೆಗಾರರಿಗೂ ಸಾಕಷ್ಟು ಅನುಕೂಲ ಆಗಿದೆ. ಆದರೆ, ಕೋವಿಡ್ ಕಾರಣಕ್ಕೆ ಕಳೆದ ಎರಡು ವರ್ಷಗಳಲ್ಲಿ ಜಿಲ್ಲೆಯಲ್ಲಿ ಮಾವು ಮೇಳ ಆಯೋಜನೆಗೆ ಅವಕಾಶ ಸಿಕ್ಕಿರಲಿಲ್ಲ. ಹೀಗಾಗಿ, ಬೆಳೆಗಾರರು ನಿರಾಸೆ ಅನುಭವಿಸಿದ್ದರು.
ಸ್ಥಳ ಬದಲು?: ಪ್ರತಿ ವರ್ಷ ಜಾನಪದ ಲೋಕದ ಮುಂಭಾಗದಲ್ಲಿ ಬೆಂಗಳೂರು–ಮೈಸೂರು ಹೆದ್ದಾರಿಗೆ ಹೊಂದಿಕೊಂಡಂತೆ ಮೇಳವನ್ನು ಆಯೋಜಿಸುತ್ತ ಬರಲಾಗಿದೆ. ವಾರದ ಕಾಲ ನಡೆಯಲಿರುವ ಮೇಳದಲ್ಲಿ ಹಣ್ಣು ಮಾರಾಟಗಾರರಿಗೆ ತೋಟಗಾರಿಕೆ ಇಲಾಖೆಯು ಮಳಿಗೆಗಳ ವ್ಯವಸ್ಥೆ ಮಾಡುತ್ತ ಬಂದಿದೆ. ಹೆದ್ದಾರಿಯಾದ ಕಾರಣ ಈ ಮಾರ್ಗದಲ್ಲಿ ಸಂಚರಿಸುವ ಸಾವಿರಾರು ವಾಹನ ಸವಾರರು ಹಣ್ಣು ಖರೀದಿಗೆ ಬರುತ್ತಿದ್ದು, ವರ್ಷದಿಂದ ವರ್ಷಕ್ಕೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ.
ಆದರೆ, ಜಾನಪದ ಲೋಕದ ಬಳಿ ಹೆದ್ದಾರಿ ಪಕ್ಕ ಸ್ಥಳಾವಕಾಶ ಕಡಿಮೆ. ವಾಹನಗಳ ನಿಲುಗಡೆಗೂ ತೊಂದರೆ. ಹೀಗಾಗಿ, ಕೆಂಗಲ್ ದೇಗುಲದ ಆವರಣದಲ್ಲಿ ಮೇಳ ಆಯೋಜಿಸಿದರೆ ಉತ್ತಮ ಎಂದು ಕೆಲವು ರೈತರು ಸಲಹೆ ನೀಡಿದ್ದಾರೆ. ಸ್ಥಳದ ಕುರಿತು ತೋಟಗಾರಿಕೆ ಇಲಾಖೆ ಇನ್ನೊಂದು ವಾರದಲ್ಲಿ ನಿರ್ಧಾರ ಕೈಗೊಳ್ಳಲಿದೆ.
ಉತ್ತಮ ವಹಿವಾಟು: 2018ರಲ್ಲಿ ಜಿಲ್ಲೆಯಲ್ಲಿ 8 ದಿನ ಕಾಲ ಮೇಳ ನಡೆದಿತ್ತು. ಒಟ್ಟು 13.855 ಟನ್ ಮಾರಾಟದಿಂದ ₹10.32 ಲಕ್ಷದಷ್ಟು ವಹಿವಾಟು ಆಗಿತ್ತು. 2019ರಲ್ಲಿ ಮೊದಲ ಮೂರು ದಿನದಲ್ಲೇ 24 ಟನ್ ಮಾವು ಮಾರಾಟವಾಗಿ ₹21.88 ಲಕ್ಷ ಮೊತ್ತದ ವಹಿವಾಟು ನಡೆದಿತ್ತು. ವಾರದ ಕಾಲ ನಡೆದ ಮೇಳದಲ್ಲಿ 50 ಟನ್‌ನಷ್ಟು ಮಾವು ಮಾರಾಟ ಕಂಡಿತ್ತು. ಈ ವರ್ಷವೂ ಉತ್ತಮ ವಹಿವಾಟು ನಡೆಯುವ ನಿರೀಕ್ಷೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.