ಹಾರೋಹಳ್ಳಿ: ಬೆಂಗಳೂರು–ಕೊಯಮತ್ತೂರು ನಡುವೆ ನಿರ್ಮಾಣ ಆಗುತ್ತಿರುವ ರಾಷ್ಟ್ರೀಯ ಹೆದ್ದಾರಿ–209ರಲ್ಲಿ ಹಲವು ಸಮಸ್ಯೆಗಳಿದ್ದು, ಅವುಗಳನ್ನು ಕೂಡಲೇ ಸರಿಪಡಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಹಾರೋಹಳ್ಳಿ ತಾಲೂಕಿನಾದ್ಯಂತ ಈ ಹೆದ್ದಾರಿ ಹಾದು ಹೋಗಲಿದೆ. ಗಬ್ಬಾಡಿ, ತಾಮಸಂದ್ರ ಗ್ರಾಮಗಳಲ್ಲಿ ಮೇಲ್ಸೇತುವೆಯ ಕೆಲವೆಡೆ ಅಪಘಾತ ಸ್ಥಳವಾಗಿ ಮಾರ್ಪಟ್ಟಿದೆ. ಇಲ್ಲಿ ರಸ್ತೆ ಉಬ್ಬು ನಿರ್ಮಿಸಿ ಅಪಘಾತ ತಡೆಗೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ದೇವರ ಕಗ್ಗಲಹಳ್ಳಿಯ ತಿರುವಿನಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನು ವೈಜ್ಞಾನಿಕವಾಗಿ ನಿರ್ಮಾಣ ಮಾಡಲಾಗಿದೆ. ನೇರವಾಗಿ ಸಮತಟ್ಟಾಗಿ ಇಲ್ಲದೆ ಹಳ್ಳ ದಿಣ್ಣೆಯಿಂದ ಕೂಡಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿದೆ.
ಬೆಂಗಳೂರಿಗೆ ನೀರು ಪೂರೈಸುವ ಬೆಂಗಳೂರು ಜಲಮಂಡಳಿ ಕಾಮಗಾರಿಯು ಹೆದ್ದಾರಿಯ ಸಮೀಪದಲ್ಲೇ ಹಾದು ಹೋಗಿದೆ. ಗುತ್ತಿಗೆದಾರರು ನಿರ್ಲಕ್ಷದಿಂದ ಪೈಪ್ ಅಳವಡಿಸಲು ಕೊರೆದ ಗುಂಡಿಯನ್ನು ಸರಿಯಾಗಿ ಮುಚ್ಚಿಲ್ಲ. ಮಳೆಗೆ ಗುಂಡಿ ಬಾಯ್ತೆರದು ಅಪಾಯಕ್ಕೆ ಕಾಯುತ್ತಿದೆ. ಇದಕ್ಕೆ ಸಂಬಂಧಪಟ್ಟವರು ಕೂಡಲೇ ಕ್ರಮಕೈಗೊಂಡು ಗುಂಡಿ ಮುಚ್ಚಿಸಬೇಕೆಂದು ವಾಹನ ಸವಾರರು ಒತ್ತಾಯಿಸಿದ್ದಾರೆ.
‘ರಾಷ್ಟ್ರೀಯ ಹೆದ್ದಾರಿಯನ್ನು ತರಾತುರಿಯಲ್ಲಿ ನಿರ್ಮಾಣ ಮಾಡಲಾಗಿದೆ. ವೈಜ್ಞಾನಿಕವಾಗಿ ರಸ್ತೆ ನಿರ್ಮಿಸಿಲ್ಲ. ಅಲ್ಲಲ್ಲಿ ಉಬ್ಬು, ತಗ್ಗು ಹೀಗೆ ಹಲವಾರು ಸಮಸ್ಯೆಗಳಿವೆ’ ಎಂದು ಸಾಮಾಜಿಕ ಹೋರಾಟಗಾರ ಪ್ರಶಾಂತ್ ದೂರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.