ರಾಮನಗರ: ತಾಲ್ಲೂಕಿನ ಕವಣಾಪುರ ಗ್ರಾಮದ ಪಟ್ಟಲದಮ್ಮ ದೇವಾಲಯದ ಆವರಣದಲ್ಲಿ ಕಸ್ತೂರಿ ಕರ್ನಾಟಕ ರಕ್ಷಣಾ ಸೇನೆ ವತಿಯಿಂದ ಐದು ಜೋಡಿಗಳಿಗೆ ಇತ್ತೀಚೆಗೆ ಸಾಮೂಹಿಕ ವಿವಾಹ ಕಾರ್ಯಕ್ರಮ ನೆರವೇರಿತು. ಕಾರ್ಯಕ್ರಮಕ್ಕೆ ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ‘ಸಾಮೂಹಿಕ ಮದುವೆಗಳು ದುಂದುವೆಚ್ಚಕ್ಕೆ ಕಡಿವಾಣ ಹಾಕುತ್ತವೆ. ಜನರು ಸಹ ಆಡಂಬರದ ಆಚರಣೆ ಹಾಗೂ ಕಾರ್ಯಕ್ರಮಗಳನ್ನು ಕಡಿಮೆ ಮಾಡಿ ಇಂತಹ ಸರಳ ಹಾಗೂ ಸುಂದರ ಕಾರ್ಯಕ್ರಮಗಳಲ್ಲಿ ಮುಕ್ತವಾಗಿ ಪಾಲ್ಗೊಳ್ಳಬೇಕು. ಇದರಿಂದ ಜನರಲ್ಲಿಯೂ ಸಮಾನತೆಯ ಭಾವನೆ ಮೂಡುತ್ತದೆ’ ಎಂದು ಅಭಿಪ್ರಾಯಪಟ್ಟರು.
‘ಸಾಮೂಹಿಕ ವಿವಾಹಗಳು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಜರುಗಬೇಕು. ಇವುಗಳಿಂದ ಬಡವರಿಗೆ ಹೆಚ್ಚಿನ ಅನುಕೂಲವಾಗಲಿದೆ. ಇದರಿಂದ ಅವರಿಗಾಗುವ ಆರ್ಥಿಕ ಹೊರೆಯೂ ತಗ್ಗುತ್ತದೆ ಸಂಘಟಕರು ಮುಂದೆಯೂ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲಿ. ಇದಕ್ಕೆ ನನ್ನ ಸಹಕಾರ ಸದಾ ಇರುತ್ತದೆ’ ಎಂದು ಭರವಸೆ ನೀಡಿದರು.
ಕರ್ನಾಟಕ ರಕ್ಷಣಾ ಸೇನೆ ರಾಜ್ಯಾಧ್ಯಕ್ಷ ಆಂಜನಪ್ಪ, ಯುವ ಘಟಕದ ಅಧ್ಯಕ್ಷ ವೆಂಕಟೇಶ್, ಉಪಾಧ್ಯಕ್ಷ ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ವೆಂಕಟಪ್ಪ, ಮಂಜು ಪಾಳ್ಯ, ಪಿ. ರಾಮಚಂದ್ರ, ರವಿ ಗಬ್ಬಾಡಿ, ವೆಂಕಟೇಶ್ ಗೌಡ, ಪ್ರದೀಪ್ ಕುಮಾರ್, ಇಮ್ರಾನ್ ಪಾಷಾ, ಪ್ರಕಾಶ್ ಗಬ್ಬಾ ಡಿ, ಕೃಷ್ಣಪ್ಪ, ಅರ್ಚಕ ರಾಜಶೇಖರ್ ಹಾಗೂ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.