ಚನ್ನಪಟ್ಟಣ (ರಾಮನಗರ): ಉಪ ಚುನಾವಣೆ ಪ್ರಚಾರದಲ್ಲಿ ಮೇಕೆದಾಟು ಅಣೆಕಟ್ಟೆ ನಿರ್ಮಾಣ ಅನುಮತಿ ವಿಷಯವು ಪ್ರತಿಧ್ವನಿಸಿದ್ದು, ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರ ನಡುವೆ ಪರಸ್ಪರ ವಾಕ್ಸಮರಕ್ಕೂ ಕಾರಣವಾಗಿದೆ.
‘ಯೋಜನೆಗೆ ಯಾಕಿನ್ನೂ ಅನುಮತಿ ಕೊಡಿಸಿಲ್ಲ’ ಎಂಬ ಕಾಂಗ್ರೆಸ್ ನಾಯಕರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ‘ಕಾಂಗ್ರೆಸ್‌ನವರು ತಮ್ಮ ಮಿತ್ರಪಕ್ಷ ಡಿಎಂಕೆಯನ್ನು ಮೊದಲು ಒಪ್ಪಿಸಲಿ’ ಎಂದು ಸವಾಲು ಹಾಕಿದ್ದಾರೆ.
ತಾಲ್ಲೂಕಿನ ಮುಕುಂದ ಗ್ರಾಮದಲ್ಲಿ ಪುತ್ರ ನಿಖಿಲ್ ಕುಮಾರಸ್ವಾಮಿ ಪರವಾಗಿ ಶನಿವಾರ ಪ್ರಚಾರ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಅವರು ಡಿಎಂಕೆಯನ್ನು ಒಪ್ಪಿಸಿದರೆ ಕೇಂದ್ರ ಸರ್ಕಾರದಿಂದ ಅನುಮತಿ ಕೊಡಿಸುವ ಜವಾಬ್ದಾರಿ ನಮ್ಮದು. ಆದರೆ, ಅವರ ಮಿತ್ರಪಕ್ಷ ಕ್ಯಾತೆ ತೆಗೆದುಕೊಂಡು ಕೂತಿದೆಯಲ್ಲಾ. ಕಾಂಗ್ರೆಸ್‌ನವರು ಮೊದಲು ಅದರ ಬಗ್ಗೆ ಬಾಯಿ ಬಿಡಲಿ’ ಎಂದರು.
‘ಯೋಗೇಶ್ವರ್ ಕಾಂಗ್ರೆಸ್ ಪಕ್ಷಕ್ಕೆ ಸೇರುವ ವ್ಯಾಪಾರ ಮೂರು ತಿಂಗಳ ಹಿಂದೆ ಲೋಕಸಭೆ ಚುನಾವಣೆ ಸಂದರ್ಭದಲ್ಲೇ ಆಗಿದೆ ಹೋಗಿದೆ. ನೆಪ ಮಾತ್ರಕ್ಕೆ ಲೋಕಸಭೆ ಚುನಾವಣೆಯಲ್ಲಿ ನಮ್ಮೊಂದಿಗಿದ್ದ ಅವರು, ಮಾನಸಿಕವಾಗಿ ಕಾಂಗ್ರೆಸ್‌ನಲ್ಲಿದ್ದರು. ಕಡೆಗೆ ಇಬ್ಬರಿಗೂ ಟೋಪಿ ಹಾಕಿ ಹೋದರು’ ಎಂದು ಬೇವೂರಿನಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಮಾಡಿಯೇ ತೀರುವೆ: ಮೂರು ದಿನಗಳ ಹಿಂದೆಯಷ್ಟೇ ಪ್ರಚಾರಸಭೆಯಲ್ಲಿ, ‘ನನ್ನ ಕೊನೆಯುಸಿರು ಹೋಗುವುದರೊಳಗೆ ಮೇಕೆದಾಟುಗೆ ಅನುಮತಿ ಕೊಡಿಸುವೆ’ ಎಂದಿದ್ದ ಗೌಡರು, ತಾಲ್ಲೂಕಿನ ಎಸ್.ಎಂ. ಹಳ್ಳಿಯಲ್ಲಿ ನಡೆದ ಪ್ರಚಾರ ನಡೆಸುವಾಗ ಮತ್ತೆ ತಮ್ಮ ಮಾತು ಪುನರುಚ್ಛರಿಸಿದರು.
‘ಕಾಂಗ್ರೆಸ್‌ನಿಂದ ಮೇಕೆದಾಟು ಯೋಜನೆ ಕಾರ್ಯಗತಗೊಳಿಸಲು ಸಾಧ್ಯವಿಲ್ಲ. ನಾನದನ್ನೂ ಮಾಡಿಯೇ ತೀರುತ್ತೇವೆ. ಉಪ ಚುನಾವಣೆಯಲ್ಲಿ ನಿಖಿಲ್ ಗೆದ್ದರೆ ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ ಹೋರಾಟ ನಡೆಸಿ ಯೋಜನೆ ಜಾರಿಗೊಳಿಸುವೆ’ ಎಂದು ಭರವಸೆ ನೀಡಿದರು.
ಜನರನ್ನು ಸುಲಿಗೆ ಮಾಡುತ್ತಿರುವ ರಾಜ್ಯದ ಕಾಂಗ್ರೆಸ್ ಸರ್ಕಾರ ಅವಧಿ ಪೂರ್ಣಗೊಳಿಸುವುದಿಲ್ಲ. ಇಂತಹ ಸರ್ಕಾರ ಇರಲೇಬಾರದು. ಹಾಗಾಗಿ, ನಿಖಿಲ್ ಬೆಂಬಲಿಸಿ ಪ್ರಧಾನಿ ಮೋದಿ ಮತ್ತು ಕೇಂದ್ರ ಸಚಿವ ಕುಮಾರಸ್ವಾಮಿ ಕೈ ಬಲಪಡಿಸಿ ಎಂದು ಮನವಿ ಮಾಡಿದರು.
ದಾಖಲೆ ಬಿಡುಗಡೆ ಮಾಡಲಿ: ‘ಶಾಲೆಗೆ 25 ಎಕರೆ ದಾನ ನೀಡಿದ್ದೇನೆ. ದೇವೇಗೌಡರ ಕುಟುಂಬದವರು ಎಲ್ಲಾದರೂ ಜಮೀನು ದಾನ ನೀಡಿದ್ದಾರಾ?’ ಎಂಬ ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ‘ಜಮೀನು ಕೊಡಲಿಕ್ಕೆ ಅವರೇನು ಮಹಾರಾಜರ ವಂಶಸ್ಥರಾ? ಇಷ್ಟಕ್ಕೂ ಎಲ್ಲಿ ಜಮೀನು ಕೊಟ್ಟಿದ್ದಾರೆ? ದಾಖಲೆ ಸಮೇತ ಜನರಿಗೆ ತಿಳಿಸಲಿ. ನಾನೂ ಸಂತೋಷಪಡುವೆ. ಸುಳ್ಳಿಗೂ ಮಿತಿ ಇದೆ. ಇವರಂತೆ ನಾನು ಮಾಡಿರುವ ಕೆಲಸಗಳಿಗೆ ಬೋರ್ಡ್ ಹಾಕಿಕೊಂಡಿಲ್ಲ. ರಾಜ್ಯದ ಶಿಕ್ಷಣ ಕ್ಷೇತ್ರದ ಅಭಿವೃದ್ದಿಗೆ ಏನೆಲ್ಲಾ ಮಾಡಿದ್ದೇನೆ ಎಂಬುವುದು ಜನತೆಗೆ ಗೊತ್ತಿದೆ’ ಎಂದರು.
ಬಿಜೆಪಿ ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್ ಸಾಥ್ ನೀಡಿದರು.
ಇಂಡಿಯಾ ಮೈತ್ರಿಕೂಟದಲ್ಲಿ ಪ್ರಧಾನಿಯಾಗಬಲ್ಲ ನಾಯಕ ಯಾರಾದಾರೂ ಇದ್ದಾರೆಯೇ? ಸ್ಟಾಲಿನ್ ಅಥವಾ ಮಮತಾ ಬ್ಯಾನರ್ಜಿ ಪ್ರಧಾನಿ ಆಗಬಹುದೇ?ಎಚ್.ಡಿ. ದೇವೇಗೌಡ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ
ನಾವು ಕಡಲೆಕಾಯಿ ಗಿಡ ಕೀಳುತ್ತೇವೆ ಎಂದಿಲ್ಲ. ಸರ್ಕಾರವನ್ನೇ ಕಿತ್ತೊಗೆಯುತ್ತೇವೆ ಎಂದಿರೋದು. ಈ ಭ್ರಷ್ಟ ಸರ್ಕಾರವನ್ನು ಕಿತ್ತೊಗೆಯಬೇಕು ಎಂಬುದು ಜನರ ಭಾವನೆಯಾಗಿದೆ. ಅದನ್ನೇ ದೇವೇಗೌಡರು ಹೇಳಿದ್ದಾರೆಎಚ್.ಡಿ. ಕುಮಾರಸ್ವಾಮಿ ಕೇಂದ್ರ ಸಚಿವ
ನೀರಾವರಿ ಸೇರಿದಂತೆ ತಾಲ್ಲೂಕಿನ ಸಮಗ್ರ ನೀರಾವರಿಗಾಗಿ ನಾನು ಹೋರಾಟ ಮಾಡುತ್ತಿದ್ದರೆ ಜೆಡಿಎಸ್ ನಾಯಕರು ತಮ್ಮ ಕುಟುಂಬದ ಕುಡಿಯ ಪಟ್ಟಾಭಿಷೇಕ್ಕಕ್ಕಾಗಿ ಹೋರಾಡುತ್ತಿದ್ದಾರೆ. ಯಾರು ಹಿತವರು ಎಂದು ನೀವೆ ಯೋಚಿಸಿ ಮತ ಚಲಾಯಿಸಿಸಿ.ಪಿ. ಯೋಗೇಶ್ವರ್ ಕಾಂಗ್ರೆಸ್ ಅಭ್ಯರ್ಥಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.