ಕುದೂರು: ಹೋಬಳಿಯ ಮರೂರು ಹಾಲು ಉತ್ಪಾದಕ ಸಹಕಾರ ಸಂಘದ ನೂತನ ಕಟ್ಟಡವನ್ನು ಶಾಸಕ ಎಚ್.ಸಿ. ಬಾಲಕೃಷ್ಣ ಉದ್ಘಾಟಿಸಿದರು.
ಬೆಂಗಳೂರು ಒಕ್ಕೂಟ ವ್ಯಾಪ್ತಿಯ ಯಾವ ತಾಲ್ಲೂಕಿನಲ್ಲೂ ಇರದಷ್ಟು ಹಾಲು ಉತ್ಪಾದಕ ಸಹಕಾರ ಸಂಘಗಳು ಮಾಗಡಿ ತಾಲ್ಲೂಕಿನಲ್ಲಿ ಇದೆ. 35 ವರ್ಷಗಳಿಂದ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದ್ದ ಡೇರಿ ಈಗ ಸ್ವಂತ ಕಟ್ಟಡ ಹೊಂದಿದೆ. ಬಹುತೇಕ ಡೇರಿಗಳಿಗೆ ಸ್ವಂತ ಕಟ್ಟಡಗಳಿದ್ದು, ಉಳಿದ ಡೇರಿಗಳ ಕಟ್ಟಡ ನಿರ್ಮಾಣಕ್ಕೆ ಶಾಸಕರ ಅನುದಾನ ನೀಡುವುದಾಗಿ ಬಾಲಕೃಷ್ಣ ಹೇಳಿದರು.
ತಾಲ್ಲೂಕಿನಲ್ಲಿ ಹಾಲು ಉತ್ಪಾದಕ ಸಹಕಾರ ಸಂಘಗಳು ಉತ್ತಮವಾಗಿ ನಡೆಯುತ್ತಿದೆ. ಆಡಳಿತ ಮಂಡಳಿ ಉತ್ತಮವಾಗಿ ಕಾರ್ಯನಿರ್ವಹಿಸಿದರೆ ಆ ಸಂಘಗಳು ಅಭಿವೃದ್ದಿ ಹೊಂದಲು ಸಾಧ್ಯ. ಡೇರಿಗಳಲ್ಲಿ ರಾಜಕೀಯಕ್ಕೆ ಅವಕಾಶ ಕಲ್ಪಿಸದೆ ಡೇರಿ ದೇವಾಲಯ ಎಂದು ಭಾವಿಸಿದರೆ ಡೇರಿಯಲ್ಲಿ ಯಾವುದೇ ಅವ್ಯವಹಾರ ನಡೆಯುವುದಿಲ್ಲ ಎಂದು ಬಮೂಲ್ ನಿರ್ದೆಶಕ ನರಸಿಂಹಮೂರ್ತಿ ಹೇಳಿದರು.
ಪ್ರತಿ ದಿನ 16 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಇದರಿಂದ ಪ್ರತಿ ತಿಂಗಳು ಕೋಟ್ಯಾಂತರ ರೂಪಾಯಿ ಹಣ ಹಾಲು ಉತ್ಪಾದಕರ ಖಾತೆಗೆ ನೇರವಾಗಿ ಜಮಾವಾಗುತ್ತಿದೆ. ಇದರಲ್ಲಿ ಯಾವುದೇ ಮಧ್ಯವರ್ತಿಗಳ ಹಾವಳಿ ಇಲ್ಲ. ಉತ್ಪಾದಕರಿಗೆ ಸರ್ಕಾರ ಪ್ರತಿ ಲೀಟರ್ ಹಾಲಿಗೆ ವೈಜ್ಞಾನಿಕ ಬೆಲೆಯಾಗಿ ₹40 ನೀಡಬೇಕು ಎಂದರು.
ಕಾರ್ಯದರ್ಶಿ ಸಂಜೀವಯ್ಯ ಮಾತನಾಡಿ, ಪ್ರತಿ ದಿನ 950 ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಇದರಿಂದ ₹23 ಲಕ್ಷ ಲಾಭಾಂಶ ಬಂದಿದ್ದು, ನೂತನ ಕಟ್ಟಡಕ್ಕೆ ₹19 ಲಕ್ಷ ವಿನಿಯೋಗಿಸಲಾಗಿದೆ ಎಂದರು.
ಮಾಜಿ ಶಾಸಕ ಎ.ಮಂಜುನಾಥ್, ಬಮೂಲ್ ನಿರ್ದೆಶಕ ಕೆಇಬಿ ರಾಜಣ್ಣ, ಡೇರಿ ಅಧ್ಯಕ್ಷ ರಾಜಣ್ಣ, ಉಪಾಧ್ಯಕ್ಷ ಎಂ.ನಂಜೇಗೌಡ, ನಿರ್ದೇಶಕರಾದ ಕೆ. ಹನುಮಂತಯ್ಯ, ಶಿವಣ್ಣ, ರಂಗಸ್ವಾಮಯ್ಯ, ಶಶಿಧರ್, ಕೆಂಚಯ್ಯ, ಹೊನ್ನಮ್ಮ, ಟಿಎಪಿಸಿಎಂಎಸ್ ಮಾಜಿ ಉಪಾಧ್ಯಕ್ಷ ಎಂ.ಆರ್. ಮಂಜುನಾಥ್, ವೆಂಕಟೇಶಪ್ಪ, ಮರಿಗೌಡ, ಸಾಗರ್ ಗೌಡ, ಕಾಳೇಗೌಡ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.