ADVERTISEMENT

ಸಚಿವ ಸ್ಥಾನ ಮುಳ್ಳಿನ ಹಾಸಿಗೆ ಇದ್ದಂತೆ: ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ

​ಪ್ರಜಾವಾಣಿ ವಾರ್ತೆ
Published 15 ಜೂನ್ 2024, 19:24 IST
Last Updated 15 ಜೂನ್ 2024, 19:24 IST
ಕನಕಪುರ ದೇಗುಲಮಠದಲ್ಲಿ ನಡೆದ ಅಭಿನಂಧನಾ ಸಮಾರಂಭದಲ್ಲಿ ಕೇಂದ್ರ ಸಚಿವ ವಿ.ಸೋಮಣ್ಣ ಮಾತನಾಡಿದರು
ಕನಕಪುರ ದೇಗುಲಮಠದಲ್ಲಿ ನಡೆದ ಅಭಿನಂಧನಾ ಸಮಾರಂಭದಲ್ಲಿ ಕೇಂದ್ರ ಸಚಿವ ವಿ.ಸೋಮಣ್ಣ ಮಾತನಾಡಿದರು   

ಕನಕಪುರ: ‘ರಾಜ್ಯದ ತಮಿಳುನಾಡು ಗಡಿ ಪ್ರದೇಶದ ಕಾಡಂಚಿನ ಕುಗ್ರಾಮದಲ್ಲಿ ಜನಿಸಿದ ನಾನು ವಿಶ್ವನಾಯಕ ಪ್ರಧಾನಿ ಮೋದಿ ಸಂಪುಟದಲ್ಲಿ ಅವಕಾಶ ಸಿಕ್ಕಿದೆ. ಇದರ ಸದ್ಬಳಕೆ ಮಾಡಿಕೊಳ್ಳುವುದಾಗಿ’ ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದರು.

ಇಲ್ಲಿನ ದೇಗುಲಮಠದಲ್ಲಿ ಹಿರಿಯ ವಿದ್ಯಾರ್ಥಿಗಳು ಮತ್ತು ಮಠದ ಹಿತೈಷಿಗಳ ಸಂಘದಿಂದ  ಶನಿವಾರ ಏರ್ಪಡಿಸಿದ್ದ ಅಭಿನಂಧನಾ ಸಮಾರಂಭದಲ್ಲಿ ಮಾತನಾಡಿದರು.

ಪ್ರಧಾನಿ ಮೋದಿ ಅವರ ಕಾರ್ಯವೈಖರಿ ವಿಶೇಷವಾಗಿದೆ. ಅವರ ಆಲೋಚನೆ, ಚಿಂತನೆ ತುಂಬಾ ವೇಗವಾಗಿದೆ. ನಾವು ಇನ್ನೂ ಪ್ರಾಥಮಿಕ ಹಂತದಲ್ಲಿದ್ದೇವೆ. ಪ್ರಮಾಣ ವಚನ ಸ್ವೀಕಾರಕ್ಕೂ ಮುನ್ನ 1ಗಂಟೆ ಸಭೆ ನಡೆಸಿ 71 ಮಂತ್ರಿಗಳಿಗೂ ದೇಶದ ಸಮಸ್ಯೆ ಮತ್ತು ಸವಾಲು ಬಗ್ಗೆ ಪ್ರಧಾನಿ ತಿಳಿಸಿದರು ಎಂದು ಮಾಹಿತಿ ಹಂಚಿಕೊಂಡರು.

ADVERTISEMENT

‘ಸಚಿವ ಸ್ಥಾನ ನನಗೆ ಮುಳ್ಳಿನ ಹಾಸಿಗೆಯಂತೆ. ಅದನ್ನು ಮೋದಿ ಅವರ ಆಶಯದಂತೆ ನಿರ್ವಹಿಸುವುದಾಗಿ’ ಹೇಳಿದರು.  

‘10ವರ್ಷದಲ್ಲಿ 40 ಸಾವಿರ ಕಿ.ಲೋ ಮೀಟರ್‌ ರೈಲ್ವೆ ಮಾರ್ಗ ಡಬಲ್‌ ಲೈನ್‌ ಮತ್ತು ವಿದ್ಯುತ್‌ ಮಾರ್ಗ ಮಾಡಲಾಗಿದೆ. ಇಂಗ್ಲಿಷ್‌ ಮತ್ತು ಹಿಂದಿ ಕಲಿತು ಅತ್ಯುತ್ತಮವಾಗಿ ಕೆಲಸ ಮಾಡುತ್ತೇನೆ’ ಎಂದು ತಿಳಿಸಿದರು.

‘ರೈಲ್ವೆ ಹಳಿಗಳಿಗೆ ಸಿಲುಕಿ ಮೂಕ ಪ್ರಾಣಿಗಳು ಸಾವನ್ನಪ್ಪುತ್ತಿವೆ. ಅದನ್ನು ತಪ್ಪಿಸಬೇಕೆಂಬುದು ಮೋದಿ ಅವರ ಆಶಯ. ಲೆವಲ್‌ ಕ್ರಾಸಿಂಗ್‌ನಲ್ಲಿ ಪ್ರಾಣಿಗಳು ಸಿಲುಕಿಕೊಳ್ಳದಂತೆ ಕಾಪಾಡಲು ಯೋಜನೆ ರೂಪಿಸಲಾಗುವುದು’ ಎಂದು ಹೇಳಿದರು.

’ನನಗೆ ಜಲಶಕ್ತಿ ಖಾತೆ ಕೊಟ್ಟಿರುವುದಕ್ಕೆ ತಮಿಳುನಾಡು ವಿರೋಧ ಮಾಡಿದೆ. ನಾನು ರಾಜ್ಯಕ್ಕೆ ಮಾತ್ರ ಮಂತ್ರಿ ಆಗಿಲ್ಲ. ದೇಶಕ್ಕೆ ಮಂತ್ರಿ. ಎಲ್ಲ ರಾಜ್ಯಗಳು ಒಂದೇ. ನನಗೆ ನೀಡಿರುವ ಅಧಿಕಾರಕ್ಕೆ ಚ್ಯುತಿ ಆಗದಂತೆ ಕಾರ್ಯ ನಿರ್ವಹಿಸುತ್ತೇನೆ’ ಎಂದರು.

ಇಲ್ಲಿನ ಸತ್ತೆಗಾಲ ರೈಲು ಮಾರ್ಗ ಇಲ್ಲಿನ ಕನಸು. ಪ್ರಧಾನಿ ಅವರು ನೂರು ದಿನಗಳ ಕಾರ್ಯಕ್ರಮ ನೀಡಿದ್ದಾರೆ. ಅದರಂತೆ ಎಲ್ಲ ಇಲಾಖೆಗಳಲ್ಲೂ ಅಭಿವೃದ್ಧಿ ಕೆಲಸ ಪ್ರಾರಂಭ ಆಗಲಿದೆ ಎಂದರು.

ದೇಗುಲ ಮಠದ ಮಹಾಲಿಂಗಸ್ವಾಮೀಜಿ, ತುಮುಕೂರು ಶಿವಕುಮಾರಸ್ವಾಮೀಜಿ, ಆದಿ ಚುಂಚನಗಿರಿ ಬಾಲಗಂಗಾಧರನಾಥ ಸ್ವಾಮೀಜಿ ಅವರನ್ನು ಸೋಮಣ್ಣ ಸ್ಮರಿಸಿದರು.

ದೇಗುಲಮಠದ ಕಿರಿಯ ಚನ್ನಬಸವ ಸ್ವಾಮಿಜಿ ಮಾತನಾಡಿದರು, ಹಿರಿಯ ಮುಮ್ಮಡಿ ನಿರ್ವಾಣಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು.

ರೈಲ್ವೆ ಮೇಕೆದಾಟು ಯೋಜನೆಗೆ ಒತ್ತು

ಕನಕಪುರ ತಾಲ್ಲೂಕಿನ ಮೂಲಕ ಆಗಬೇಕಿರುವ ರೈಲ್ವೆ ಯೋಜನೆಗೆ ರಾಜ್ಯ ಸರ್ಕಾರ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿ ಸಂಪೂರ್ಣ ಸಹಕಾರ ನೀಡಿದರೆ ರೈಲ್ವೆ ಯೋಜನೆ ಮಾಡಲಾಗುವುದು. ಮೇಕೆದಾಟು ಯೋಜನೆಯನ್ನು ಎರಡು ರಾಜ್ಯಗಳೊಂದಿಗೆ ಮಾತುಕತೆ ನಡೆಸಿ ಯೋಜನೆ ಪ್ರಾರಂಭಿಸಲಾಗುವುದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.