ರಾಮನಗರ: ಇಲ್ಲಿನ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಮೇಶ್ ಅವರು, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಲ್ಲಿ ಈಗಾಗಲೇ ಬಳಸುತ್ತಿರುವ ಬಾಡಿಗೆ ಕಾರನ್ನು ತಾವೂ ಬಳಸುತ್ತಿರುವುದಾಗಿ ಬಿಲ್ ಸೃಷ್ಟಿಸಿ ಹಣವನ್ನು ಜೇಬಿಗಿಳಿಸಿರುವ ಆರೋಪ ಕೇಳಿ ಬಂದಿದೆ.
ಈ ಕುರಿತು ತಾಲ್ಲೂಕಿನ ಚೇತನ್ ಎಂಬುವರು ಜಿಲ್ಲಾಧಿಕಾರಿಗೆ ದೂರು ಕೊಟ್ಟಿದ್ದಾರೆ. ದೂರನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್, ಸರ್ಕಾರದ ಹಣ ದುರುಪಯೋಗಪಡಿಸಿಕೊಂಡ ಆರೋಪಕ್ಕೆ ಗುರಿಯಾಗಿರುವ ಯೋಜನಾ ನಿರ್ದೇಶಕರ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಲೋಕಾಯುಕ್ತ ಪೊಲೀಸ್ ಅಧೀಕ್ಷಕರಿಗೆ ದೂರು ಕೊಟ್ಟಿದ್ದಾರೆ.
ಏನಿದು ದುರುಪಯೋಗ?: ಜಿಲ್ಲಾ ನಗರಾಭಿವೃದ್ಧಿ ಕಚೇರಿ ಬಳಕೆಗಾಗಿ ರಾಮನಗರ ಮೆ. ಟೂರ್ಸ್ ಆ್ಯಂಡ್ ಟ್ರಾವೆಲ್ಸ್ ವತಿಯಿಂದ ಕೆಎ: 42 ಬಿ:4637 ಮತ್ತು ಕೆಎ:42 ಬಿ:5410 ಸ್ವಿಫ್ಟ್ ಡಿಜೈರ್ ಕಾರನ್ನು ಟೆಂಡರ್ ಮೂಲಕ ಬಾಡಿಗೆಗೆ ಪಡೆಯಲಾಗಿದೆ. ಈ ಪೈಕಿ, ಕೆಎ:42 ಬಿ:4637 ಕಾರನ್ನು ನಗರಾಭಿವೃದ್ಧಿ ಪ್ರಾಧಿಕಾರದ ಎಇಇ ಹಾಗೂ ಕೆಎ:42 ಬಿ:5410 ಕಾರನ್ನು ಯೋಜನಾ ನಿರ್ದೇಶಕರು ಬಳಸುತ್ತಿದ್ದಾರೆ.
ಆದರೆ, ಯೋಜನಾ ನಿರ್ದೇಶಕರು ಬಳಸುತ್ತಿದ್ದೇವೆ ಎಂದಿರುವ ಕಾರನ್ನು ಈಗಾಗಲೇ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಚೇರಿಯಲ್ಲಿ ₹35 ಸಾವಿರ ಬಾಡಿಗೆ ದರಕ್ಕೆ 2021 ಡಿ. 1ರಿಂದ ಉಪಯೋಸಲಾಗುತ್ತಿದೆ.
ಮಾಸಿಕ ₹41,198 ಬಾಡಿಗೆ: ಅಲ್ಪಸಂಖ್ಯಾತರ ನಿಗಮದ ಕಾರನ್ನೇ ಯೋಜನಾ ನಿರ್ದೇಶಕರು ₹41,198 ಬಾಡಿಗೆ ಮೊತಕ್ಕೆ ಬಳಸುತ್ತಿರುವುದಾಗಿ ಪ್ರತಿ ತಿಂಗಳು ಬಿಲ್ ಪಾವತಿಸಿಕೊಳ್ಳುತ್ತಿದ್ದಾರೆ. ವಾಸ್ತವದಲ್ಲಿ ಅವರು ತಮ್ಮ ಇನ್ನೋವಾ ಕಾರನ್ನೇ ಸರ್ಕಾರಿ ವಾಹನವಾಗಿ ಬಳಸುತ್ತಿದ್ದು, ಅದರ ನಿರ್ವಹಣೆಗೆ ಬಾಡಿಗೆ ಮೊತ್ತವನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
‘ಒಂದೇ ಕಾರಿಗೆ ಎರಡು ಕಡೆ ಬೇರೆ ಮೊತ್ತದ ಬಿಲ್ ಮಾಡಲಾಗುತ್ತಿದೆ. ಆದರೆ, ಕಾರು ಅಧಿಕೃತವಾಗಿ ಅಲ್ಪಸಂಖ್ಯಾತರ ನಿಗಮದಲ್ಲಿ ಬಳಕೆಯಾಗುತ್ತಿದೆ. ಈ ಕುರಿತು ನ. 21ರಂದು ದೂರು ಬಂದಿದೆ. ಆ ಮೇರೆಗೆ ಸಂಬಂಧಪಟ್ಟ ಇಲಾಖೆಗಳಿಂದ ದಾಖಲೆ ತರಿಸಿಕೊಂಡು ಪರಿಶೀಲಿಸಿ, ಯೋಜನಾ ನಿರ್ದೇಶಕರ ವಿರುದ್ಧ ಕ್ರಮಕ್ಕೆ ಲೋಕಾಯುಕ್ತಕ್ಕೆ ದೂರು ಕೊಟ್ಟಿದ್ದೇನೆ’ ಎಂದು ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ‘ಪ್ರಜಾವಾಣಿ’ಗೆ ತಿಳಿಸಿದರು.
ಬೇರೆ ಇಲಾಖೆಯವರು ಬಳಸುತ್ತಿರುವ ಕಾರಿಗೆ ಯೋಜನಾ ನಿರ್ದೇಶಕರು ಬಿಲ್ ಪಾವತಿಸಿಕೊಂಡು ಸರ್ಕಾರದ ಹಣ ದುರುಪಯೋಗಪಡಿಸಿಕೊಂಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಹಾಗಾಗಿ ಕ್ರಮಕ್ಕೆ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆಯಶವಂತ್ ವಿ. ಗುರುಕರ್ ಜಿಲ್ಲಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.