ರಾಮನಗರ: ಸಾಮಾಜಿಕ ಜಾಲತಾಣಗಳಲ್ಲಿ ಇಷ್ಟು ದಿನ ನಿಖಿಲ್ ಎಲ್ಲಿದ್ದೀಯಪ್ಪಾ? ಎಂಬುದು ಹೆಚ್ಚು ಟ್ರೋಲ್ ಆಗಿತ್ತು. ಇದೀಗ ನೆಟ್ಟಿಗರ ಕಣ್ಣು ಅವರ ತಾಯಿ, ರಾಮನಗರ ಕ್ಷೇತ್ರದ ಶಾಸಕಿ ಅನಿತಾ ಕುಮಾರಸ್ವಾಮಿ ಅವರ ಮೇಲೆ ಬಿದ್ದಿದೆ.
ರಾಮನಗರದಲ್ಲಿ ಸದ್ಯ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಜನರ ಸಮಸ್ಯೆಗೆ ಶಾಸಕಿ ಅನಿತಾ ಕುಮಾರಸ್ವಾಮಿ ಸ್ಪಂದಿಸುತ್ತಿಲ್ಲ. ಕ್ಷೇತ್ರಕ್ಕೆ ಭೇಟಿ ನೀಡಿ ಸಮಸ್ಯೆ ಪರಿಹರಿಸುತ್ತಿಲ್ಲ ಎಂಬುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣ. ಇದನ್ನೇ ಬಳಸಿಕೊಂಡು ಬಿಜೆಪಿ ಕಾರ್ಯಕರ್ತರಾದ ರುದ್ರದೇವರು ಹಾಗೂ ವಿನೋದ್ ಭಗತ್ ಎಂಬುವರು ವೀಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ಕ್ಷೇತ್ರಕ್ಕೆ ಅಪರೂಪ
ಶಾಸಕಿ ಅನಿತಾ ಅವರು ಈಚೆಗೆ ಕ್ಷೇತ್ರಕ್ಕೆ ಅಪರೂಪವಾಗಿದ್ದಾರೆ. ಕಳೆದ ಲೋಕಸಭೆ ಚುನಾವಣೆ ಸಂದರ್ಭ ಅವರು ಮಂಡ್ಯದಲ್ಲಿ ಪುತ್ರನ ಪರ ಪ್ರಚಾರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ನಂತರದಲ್ಲಿಯೂ ಕ್ಷೇತ್ರಕ್ಕೆ ಬಂದಿಲ್ಲ. ಸಭೆ–ಸಮಾರಂಭಗಳಲ್ಲಿ ಪಾಲ್ಗೊಂಡಿಲ್ಲ. ಇದು ಜನರ ಸಿಟ್ಟಿಗೆ ಕಾರಣವಾಗಿದೆ. ಮತ್ತೊಂದೆಡೆ ಚನ್ನಪಟ್ಟಣದ ಶಾಸಕ, ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕೂಡ ಕ್ಷೇತ್ರಕ್ಕೆ ಅಪರೂಪವಾಗಿದ್ದಾರೆ. ಬರ, ಕುಡಿಯುವ ನೀರಿನ ಪರಿಸ್ಥಿತಿ ನಿರ್ವಹಣೆ ಸಂಬಂಧ ಜಿಲ್ಲೆಯಲ್ಲಿ ಈವರೆಗೆ ಒಂದೇ ಒಂದು ಸಭೆ ನಡೆಸಿಲ್ಲ. ಇದು ಸಾರ್ವಜನಿಕರ ಅಸಮಾಧಾನಕ್ಕೂ ಕಾರಣವಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.