ADVERTISEMENT

ಡಿಸಿಎಂ ಹುದ್ದೆ ಕುರಿತು ಬಹಿರಂಗ ಹೇಳಿಕೆಗೆ ಹೈಕಮಾಂಡ್ ಕಡಿವಾಣ ಅಗತ್ಯ: ಬಾಲಕೃಷ್ಣ

ಸಮುದಾಯದ ಅಭಿಲಾಷೆ ತಿಳಿಸಿರುವ ಸ್ವಾಮೀಜಿ ಮಾತು ತಪ್ಪಲ್ಲ

​ಪ್ರಜಾವಾಣಿ ವಾರ್ತೆ
Published 28 ಜೂನ್ 2024, 9:06 IST
Last Updated 28 ಜೂನ್ 2024, 9:06 IST
ಎಚ್‌.ಸಿ. ಬಾಲಕೃಷ್ಣ, ಮಾಗಡಿ ಶಾಸಕ
ಎಚ್‌.ಸಿ. ಬಾಲಕೃಷ್ಣ, ಮಾಗಡಿ ಶಾಸಕ   

ಮಾಗಡಿ (ರಾಮನಗರ): ‘ಒಕ್ಕಲಿಗರು ಮುಖ್ಯಮಂತ್ರಿಯಾಗಬೇಕು ಎಂಬ ಭಾವನೆ ಸಮುದಾಯದ ಪ್ರತಿಯೊಬ್ಬರಲ್ಲೂ ಇದೆ. ಆ ಅಭಿಲಾಷೆಯನ್ನೇ ಚಂದ್ರಶೇಖರನಾಥ ಸ್ವಾಮೀಜಿ ಅವರು ವ್ಯಕ್ತಪಡಿಸಿದ್ದಾರೆ. ಅದನ್ನು ತಪ್ಪು ಎಂದು ಯಾರೂ ಭಾವಿಸಬಾರದು’ ಎಂದು ಶಾಸಕ ಎಚ್‌.ಸಿ. ಬಾಲಕೃಷ್ಣ ಹೇಳಿದರು.

‘ಸಿದ್ದರಾಮಯ್ಯ ಅವರು ಡಿ.ಕೆ. ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟು ಕೊಡಬೇಕು’ ಎಂಬ ಸ್ವಾಮೀಜಿ ಹೇಳಿಕೆ ಕುರಿತು ತಮ್ಮ ಬೆಂಗಳೂರಿನ ನಿವಾಸದಲ್ಲಿ ಶುಕ್ರವಾರ ಮಾಧ್ಯಮದವರಿಗೆ ಅವರು ಪ್ರತಿಕ್ರಿಯಿಸಿದರು.

‘ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಬೇಕೆಂದು ಅವರ ಸಮುದಾಯದ ಸ್ವಾಮೀಜಿಗಳು ಸಹ ಹಿಂದೆ ಹೇಳಿದ್ದರು. ನಮ್ಮವರೂ ಸಿ.ಎಂ ಆಗಬೇಕೆಂದು ವೀರಶೈವ ಲಿಂಗಾಯತ ಸಮುದಾಯದ ಸ್ವಾಮೀಜಿಗಳು ಪ್ರಸ್ತಾಪಿಸಿದ್ದರು. ತಮ್ಮವರಿಗೆ ಮುಖ್ಯಮಂತ್ರಿ ಮತ್ತು ಸಚಿವ ಸ್ಥಾನ ಸಿಗಬೇಕೆಂದು ಆಯಾ ಸಮುದಾಯದ ಸ್ವಾಮೀಜಿಗಳು ಒತ್ತಾಯಿಸುವುದು ಸಹಜ’ ಎಂದು ಸ್ವಾಮೀಜಿ ಹೇಳಿಕೆಯನ್ನು ಸಮರ್ಥಿಸಿದರು.

ADVERTISEMENT

‘ಸ್ವಾಮೀಜಿ ಹೇಳಿದ ಮಾತ್ರಕ್ಕೆ ನಾಳೆಯೇ ಶಿವಕುಮಾರ್ ಅವರನ್ನು ಹೈಕಮಾಂಡ್ ಮುಖ್ಯಮಂತ್ರಿ ಮಾಡುತ್ತದೆಯೇ? ಕೆಪಿಸಿಸಿ ಅಧ್ಯಕ್ಷರಾಗಿ ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಅವರು ಶ್ರಮಿಸಿದ್ದಾರೆ. ಯಾರು, ಏನೇ ಅಭಿಪ್ರಾಯ ಮತ್ತು ಅಭಿಲಾಷೆ ವ್ಯಕ್ತಪಡಿಸಿದರೂ ಮುಖ್ಯಮಂತ್ರಿ ಹುದ್ದೆ ಕುರಿತು ಅಂತಿಮವಾಗಿ, ಪಕ್ಷದ ಹೈಕಮಾಂಡ್ ಮತ್ತು ಶಾಸಕರು ತೀರ್ಮಾನ ಮಾಡುತ್ತಾರೆ’ ಎಂದು ಹೇಳಿದರು.

‘ಸರ್ಕಾರಿ ಕಾರ್ಯಕ್ರಮದಲ್ಲಿ ಸ್ವಾಮೀಜಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರೆ ತಪ್ಪೇನು? ಹಾಗೆ ಕೇಳಬಾರದು ಅಂತ ಏನಾದರೂ ಇದೆಯಾ? ನೀವು ಹೀಗೆ ಮಾತನಾಡಬೇಕು ಎಂದು ಯಾರು, ಯಾರಿಗೂ ಕಡಿವಾಣ ಹಾಕುವಂತಿಲ್ಲ? ಸಿದ್ದರಾಮಯ್ಯ ಅವರ ನಂತರ ಶಿವಕುಮಾರ್ ಅವರಿಗೆ ಒಂದು ಅವಕಾಶ ಕೊಡಿ ಎಂದಷ್ಟೇ ಸ್ವಾಮೀಜಿ ಕೇಳಿದ್ದಾರೆ. ಅದು ತಪ್ಪಲ್ಲ’ ಎಂದರು.

ಕಡಿವಾಣ ಹಾಕಲಿ: ‘ಉಪ ಮುಖ್ಯಮಂತ್ರಿ ಹುದ್ದೆ ಕುರಿತು ಪಕ್ಷದ ಹಿರಿಯ ಶಾಸಕರು ಹಾದಿಬೀದಿಯಲ್ಲಿ ಬಹಿರಂಗ ಹೇಳಿಕೆ ನೀಡುವುದಕ್ಕೆ ಹೈಕಮಾಂಡ್ ಕಡಿವಾಣ ಹಾಕಬೇಕು. ಇಲ್ಲದಿದ್ದರೆ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ. ಹಿರಿಯ ಸಚಿವರು ಸಹ ಪಕ್ಷದ ವರ್ಚಸ್ಸಿಗೆ ಧಕ್ಕೆ ತರುವಂತೆ ಮಾತನಾಡಬಾರದು. ಬದಲಿಗೆ ನಾಲ್ಕ ಗೋಡೆಗಳ ಮಧ್ಯೆ ಮಾತನಾಡಿ, ಹೈಕಮಾಂಡ್‌ಗೆ ತಮ್ಮ ಒತ್ತಾಯವನ್ನು ತಿಳಿಸಲಿ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

‘ಸಚಿವ ಕೆ.ಎನ್. ರಾಜಣ್ಣ ಅವರು ಸ್ವಾಮೀಜಿ ಆಗುವುದಾದರೆ ಆಗಲಿ. ಪೀಠ ಬಿಡುವಂತೆ ನಾವು ಸ್ವಾಮೀಜಿ ಅವರ ಮನವೊಲಿಸುತ್ತೇವೆ’ ಎಂದು ರಾಜಣ್ಣ ಹೇಳಿಕೆಗೆ ವ್ಯಂಗ್ಯವಾಡಿದರು. ‘ಡಿ.ಕೆ. ಶಿವಕುಮಾರ್ ಅವರೇ ಸ್ವಾಮೀಜಿ ಅವರಿಗೆ ಹೇಳಿ ಹೀಗೆ ಮಾತನಾಡಿಸಿದ್ದಾರೆ’ ಎಂಬ ವಿರೋಧ ಪಕ್ಷದ ನಾಯಕ ಆರ್. ಅಶೋಕ ಹೇಳಿಕೆಗೆ ‘ಶಿವಕುಮಾರ್ ಅವರು ಯಾರಿಗೂ ಆ ರೀತಿ ಹೇಳುವುದಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.