ಮಾಗಡಿ: ‘ಭಾರತದ ಭೂಪಟದಿಂದ ಜಮ್ಮು ಮತ್ತು ಕಾಶ್ಮೀರವನ್ನು ತೆಗೆಯಲು ಹೇಗೆ ಸಾಧ್ಯವಿಲ್ಲವೊ, ಅದೇ ರೀತಿ ಮಾಗಡಿ ತಾಲ್ಲೂಕಿನಿಂದ ಸೋಲೂರು ಹೋಬಳಿಯನ್ನು ಕೈ ಬಿಡಲು ಸಾಧ್ಯವಿಲ್ಲ. ಪಕ್ಕದ ನೆಲಮಂಗಲ ತಾಲ್ಲೂಕಿಗೆ ಹೋಬಳಿಯನ್ನು ಸೇರಿಸುವ ಪ್ರಶ್ನೆಯೇ ಬರುವುದಿಲ್ಲ’ ಎಂದು ಶಾಸಕ ಎಚ್.ಸಿ. ಬಾಲಕೃಷ್ಣ ಹೇಳಿದರು.
ಸೋಲೂರು ಹೋಬಳಿಯನ್ನು ನೆಲಮಂಗಲ ತಾಲ್ಲೂಕಿಗೆ ಸೇರಿಸುವ ಕುರಿತು ತಾಲ್ಲೂಕಿನಲ್ಲಿ ಕಾವೇರಿರುವ ಚರ್ಚೆ ಕುರಿತು ಸೋಮವಾರ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಮೌನ ಮುರಿದ ಅವರು, ‘ಯಾವ ಕಾರಣಕ್ಕೆ ಸೋಲೂರನ್ನು ನೆಲಮಂಗಲಕ್ಕೆ ಸೇರಿಸಬೇಕು ಎಂದು ಅಲ್ಲಿನ ಶಾಸಕ ಶ್ರೀನಿವಾಸ್ ಹೇಳುತ್ತಿದ್ದಾರೊ ಗೊತ್ತಿಲ್ಲ. ತಾವರೆಕೆರೆ ಹೋಬಳಿಯವರಾದ ಅವರಿಗೆ ಸೋಲೂರು ಹೋಬಳಿಯು ಮಾಗಡಿಯೊಂದಿಗೆ ಹೊಂದಿರುವ ಭಾವನಾತ್ಮಕ ಸಂಬಂಧದ ಬಗ್ಗೆ ಗೊತ್ತಿಲ್ಲ’ ಎಂದರು.
‘ನೆಲಮಂಗಲ ವಿಧಾನಸಭಾ ಕ್ಷೇತ್ರಕ್ಕೆ ತಾವರೆಕೆರೆ ಹೋಬಳಿಯನ್ನು ಸೇರಿಸಿದರೆ ಅವರಿಗೆ ಅನುಕೂಲವಾಗುತ್ತದೆ. ಶ್ರೀನಿವಾಸ್ ಅಲ್ಲಿಯವರೇ ಆಗಿರುವುದರಿಂದ, ನೆಲಮಂಗಲ ಮತ್ತು ತಾವರೆಕೆರೆಯೊಂದಿಗೆ ಹೆಚ್ಚಿನ ಒಡನಾಟ ಇರುವುದರಿಂದ ನೆಲಮಂಗಲಕ್ಕೆ ಸೇರಿಸಿಕೊಳ್ಳಲು ಕ್ರಮ ವಹಿಸಲಿ’ ಎಂದು ಸಲಹೆ ನೀಡಿದರು.
ದಂಗೆ ಸ್ಥಿತಿ ಬರಲಿದೆ: ‘ಹೋಬಳಿಗಳ ಸಮಸ್ಯೆಯು ಒಂದು ವಿಧಾನಸಭಾ ಕ್ಷೇತ್ರದ ಸಮಸ್ಯೆಯಾಗಿಲ್ಲ. ಇಡೀ ರಾಜ್ಯದಲ್ಲಿ ಸಮಸ್ಯೆ ಇದೆ. ಒಂದು ಹೋಬಳಿಯನ್ನು ಈ ರೀತಿ ಸೇರ್ಪಡೆ ಮಾಡಿದರೆ, ರಾಜ್ಯದಲ್ಲಿ ದಂಗೆ ಹೇಳುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ರಾಮನಗರ ಜಿಲ್ಲೆಯಾಗುವ ಮೊದಲೇ ಕ್ಷೇತ್ರ ಪುನರ್ ವಿಂಗಡಣೆಯಾಗಿದ್ದು, ಆಗ ಸೋಲೂರನ್ನು ನೆಲಮಂಗಲ ಕ್ಷೇತ್ರಕ್ಕೆ ಬದಲಾವಣೆ ಮಾಡಲಾಗಿತ್ತು’ ಎಂದು ಹೇಳಿದರು.
‘ಎಚ್.ಡಿ. ಕುಮಾರಸ್ವಾಮಿ ಅವರು ರಾಮನಗರವನ್ನು ಜಿಲ್ಲೆ ಮಾಡಿದರು. ಮೊದಲೇ ಜಿಲ್ಲೆಯಾಗಿದ್ದರೆ ಸೋಲೂರು ಹೋಬಳಿಯು ಮಾಗಡಿ ತಾಲ್ಲೂಕಿನಲ್ಲೇ ಉಳಿಯುತ್ತಿತ್ತು. ಇನ್ನು ಕೆಲವೇ ವರ್ಷಗಳಲ್ಲಿ ಕ್ಷೇತ್ರ ಪುನರ್ ವಿಂಗಡಣೆಯಾಗಲಿದೆ. ಆಗ ಸೋಲೂರು ಹೋಬಳಿ ಮಾಗಡಿಗೆ ಸೇರುವುದರಿಂದ ಈಗಿನ ಗೊಂದಲಕ್ಕೆ ತೆರೆ ಎಳೆಯಲಾಗುತ್ತದೆ’ ಎಂದು ತಿಳಿಸಿದರು.
‘ಹೋಬಳಿಯನ್ನು ನೆಲಮಂಗಲ ತಾಲ್ಲೂಕಿಗೆ ಸೇರಿಸುವ ಪ್ರಸ್ತಾವ ವಿರೋಧಿಸಿ, ಸೋಲೂರು ಹೋಬಳಿಯ ಹಲವು ಮುಖಂಡರು ನನಗೆ ಮನವಿ ಸಲ್ಲಿಸಿದ್ದಾರೆ. ನಾವು ದೊಡ್ಡಪಳ್ಳಾಪುರ ಮತ್ತು ಚಿಕ್ಕಬಳ್ಳಾಪುರಕ್ಕೆ ಹೋಗಲು ಸಾಧ್ಯವಿಲ್ಲ. ನಮ್ಮನ್ನು ರಾಮನಗರ ಜಿಲ್ಲೆಯಲ್ಲಿ ಉಳಿಸಿಕೊಳ್ಳುವಂತೆ ಕೋರಿದ್ದಾರೆ’ ಎಂದು ಹೇಳಿದರು.
ಮುಂದೆ ಕ್ಷೇತ್ರ ಪುನರ್ ವಿಂಗಡಣೆಯಾದರೆ ಮಾಗಡಿ ವಿಧಾನಸಭಾ ಕ್ಷೇತ್ರಕ್ಕೆ ಸೋಲೂರು ಸೇರುತ್ತದೆ. ಹಾಗಾಗಿ ನೆಲಮಂಗಲಕ್ಕೆ ಸೇರಿಸುವ ಪ್ರಶ್ನೆಯೇ ಬರುವುದಿಲ್ಲ. ನೆಲಮಂಗಲ ಶಾಸಕರು ಈ ವಿಚಾರವನ್ನು ಇಲ್ಲಿಗೆ ಕೈ ಬಿಡಬೇಕುಎಚ್.ಸಿ. ಬಾಲಕೃಷ್ಣ ಮಾಗಡಿ ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.