ADVERTISEMENT

ಕಂಪ್ಲಿ ಶಾಸಕ ಗಣೇಶ್ ಗುಜರಾತ್‌ನಲ್ಲಿ ಸೆರೆ

ಶಾಸಕ ಆನಂದ್‌ ಸಿಂಗ್‌ ಮೇಲೆ ಹಲ್ಲೆ; ತಿಂಗಳಿನಿಂದ ತಲೆ ಮರೆಸಿಕೊಂಡಿದ್ದ ಶಾಸಕ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2019, 20:40 IST
Last Updated 20 ಫೆಬ್ರುವರಿ 2019, 20:40 IST
   

ರಾಮನಗರ: ಬಿಡದಿಯ ಈಗಲ್‌ಟನ್‌ ರೆಸಾರ್ಟಿನಲ್ಲಿ ಶಾಸಕ ಆನಂದ ಸಿಂಗ್‌ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದ ಕಂಪ್ಲಿ ಶಾಸಕ ಜೆ.ಎನ್. ಗಣೇಶ್‌ ಬುಧವಾರ ಗುಜರಾತ್‌ನಲ್ಲಿ ಬಂಧಿತರಾಗಿದ್ದಾರೆ. ಪೊಲೀಸರು ಆರೋಪಿಯನ್ನು ಅಲ್ಲಿಂದ ವಿಮಾನದ ಮೂಲಕ ರಾಮನಗರಕ್ಕೆ ಕರೆತರುತ್ತಿದ್ದಾರೆ.

ಗುಜರಾತ್‌ನ ಸೋಮನಾಥ ಪಟ್ಟಣದ ಸುಖಸಾಗರ್‌ ಹೋಟೆಲ್‌ ಬಳಿ ಮಧ್ಯಾಹ್ನ 2 ಗಂಟೆ ಸುಮಾರಿಗೆ ಪೊಲೀಸರ ತಂಡವು ಆರೋಪಿಯನ್ನು ವಶಕ್ಕೆ ಪಡೆಯಿತು. ಈ ಸಂದರ್ಭ ಗಣೇಶರ ಜೊತೆ ಇತರ ಮೂವರೂ ಇದ್ದರು. ಅವರಲ್ಲಿ ಇಬ್ಬರು ಕರ್ನಾಟಕದವರಾಗಿದ್ದು, ಉಳಿದ ಒಬ್ಬರು ಸ್ಥಳೀಯ ನಿವಾಸಿ. ಇವರನ್ನೂ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದು, ಅಗತ್ಯಬಿದ್ದಲ್ಲಿ ವಶಕ್ಕೆ ಪಡೆಯಲಿದ್ದಾರೆ.

ಆರೋಪಿಯನ್ನು ಮೊದಲು ಬಿಡದಿ ಪೊಲೀಸ್‌ ಠಾಣೆಗೆ ಕರೆ ತಂದು ವಿಚಾರಣೆಗೆ ಒಳಪಡಿಸಿ ಬಳಿಕ ರಾಮನಗರದ ಜಿಲ್ಲಾ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಿದ್ದಾರೆ.

ADVERTISEMENT

‘ಆರೋಪಿಯು ಗುಜರಾತ್‌ನಲ್ಲಿ ಇರುವ ಬಗ್ಗೆ ಮೂರು ದಿನದ ಹಿಂದೆ ಖಚಿತ ಮಾಹಿತಿ ಸಿಕ್ಕಿತ್ತು. ಅಲ್ಲಿ ಇಬ್ಬರು ಇನ್‌ಸ್ಪೆಕ್ಟರ್‌, ಒಬ್ಬ ಸಬ್‌ಇನ್‌ಸ್ಪೆಕ್ಟರ್ ಹಾಗೂ 12 ಸಿಬ್ಬಂದಿಯನ್ನು ಒಳಗೊಂಡ ಮೂರು ತಂಡಗಳು ಅವರನ್ನು ಹಿಂಬಾಲಿಸಿ ಬಂಧಿಸಿದವು’ ಎಂದು ರಾಮನಗರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಬಿ. ರಮೇಶ್‌ ಕಾರ್ಯಾಚರಣೆ ಕುರಿತು ಬುಧವಾರ ಮಾಹಿತಿ ನೀಡಿದರು.

‘ಸದ್ಯ ಆರೋಪಿಯು ವಿಚಾರಣೆಗೆ ಪೊಲೀಸರಿಗೆ ಸಹಕಾರ ನೀಡುತ್ತಿದ್ದಾರೆ. ಠಾಣೆಯಲ್ಲಿ ಪ್ರಾಥಮಿಕ ವಿಚಾರಣೆ ನಡೆಸಲಾಗುವುದು. ಅಗತ್ಯಬಿದ್ದಲ್ಲಿ ಪೊಲೀಸ್ ಕಸ್ಟಡಿಗೆ ನ್ಯಾಯಾಧೀಶರಿಗೆ ಮನವಿ ಮಾಡಲಾಗುವುದು’ ಎಂದು ತಿಳಿಸಿದರು.

‘ಬಂಧನದ ವಿಚಾರದಲ್ಲಿ ಯಾರಿಂದಲೂ ಒತ್ತಡ ಇರಲಿಲ್ಲ. ಆರೋಪಿಯು ಹೊರ ರಾಜ್ಯಗಳಿಗೆ ತೆರಳಿದ್ದು, ಪದೇ ಪದೇ ತನ್ನ ವಾಸಸ್ಥಳವನ್ನು ಬದಲಿಸುತ್ತಿದ್ದ ಕಾರಣ ತಡವಾಯಿತು’ ಎಂದು ಅವರು ಸಮಜಾಯಿಷಿ ನೀಡಿದರು.

ತಿಂಗಳ ಬಳಿಕ ಸೆರೆ: ಕಳೆದ ಜನವರಿ 18ರಂದು ಬಿಡದಿಯ ಈಗಲ್‌ಟನ್‌ ರೆಸಾರ್ಟಿನಲ್ಲಿ ಕಾಂಗ್ರೆಸ್‌ ಶಾಸಕರು ವಾಸ್ತವ್ಯ ಹೂಡಿದ್ದರು. 20ರಂದು ನಸುಕಿನಲ್ಲಿ ರೆಸಾರ್ಟಿನ ಒಳಗೆ ಆನಂದ್ ಸಿಂಗ್‌ ಹಾಗೂ ಗಣೇಶ್‌ ನಡುವೆ ಮಾರಾಮಾರಿ ನಡೆದಿತ್ತು. ಗಂಭೀರವಾಗಿ ಗಾಯಗೊಂಡ ಆನಂದ್‌ರನ್ನು ಬೆಂಗಳೂರಿನ ಶೇಷಾದ್ರಿಪುರಂನಲ್ಲಿರುವ ಅಪೋಲೊ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಗಣೇಶ್‌ ಆರಂಭದಲ್ಲಿ ಹಲ್ಲೆ ಸುದ್ದಿಯನ್ನು ತಳ್ಳಿಹಾಕಿದ್ದರು. ಆದರೆ ಪ್ರಕರಣವು ಗಂಭೀರ ಸ್ವರೂಪ ಪಡೆಯುತ್ತಲೇ ರೆಸಾರ್ಟಿನಿಂದ ಪರಾರಿ ಆಗಿದ್ದರು. ಒಂದು ತಿಂಗಳಾದರೂ ಆರೋಪಿಯು ಪತ್ತೆ ಆಗದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿತ್ತು.

ರಾಮನಗರ ಪೊಲೀಸರು ಮೂರು ತಂಡಗಳನ್ನು ರಚಿಸಿ ಬೆಂಗಳೂರು, ಬಳ್ಳಾರಿ, ಮೈಸೂರು ಕಡೆ ಹುಡುಕಾಡಿದ್ದರು. ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಅಂಡೋಮಾನ್ ನಿಕೋಬಾರ್ ಮೊದಲಾದ ರಾಜ್ಯಗಳಿಗೂ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

ಹಲ್ಲೆ ಪ್ರಕರಣವು ಕಾಂಗ್ರೆಸ್‌ ಹೈಕಮಾಂಡ್‌ಗೆ ತೀವ್ರ ಮುಜುಗರ ತಂದಿತ್ತು. ಗಣೇಶ್‌ರನ್ನು ಪಕ್ಷದಿಂದ ಅಮಾನತು ಮಾಡಿದ್ದ ಕೆಪಿಸಿಸಿ, ಪ್ರಕರಣದ ಆಂತರಿಕ ತನಿಖೆಯನ್ನೂ ಕೈಗೊಂಡಿತ್ತು.

**

ಶಾಸಕರ ವಿಚಾರಣೆ ಶೀಘ್ರ
ಹಲ್ಲೆಗೆ ಒಳಗಾಗಿರುವ ಆನಂದ ಸಿಂಗ್‌ ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲಿ ಶಾಸಕರಾದ ತನ್ವೀರ್ ಸೇಠ್‌, ರಘುಮೂರ್ತಿ ಹಾಗೂ ರಾಮಪ್ಪ ಅವರು ಘಟನೆ ಸಂದರ್ಭ ಸ್ಥಳದಲ್ಲಿ ಇದ್ದದ್ದಾಗಿ ಉಲ್ಲೇಖಿಸಿದ್ದರು. ಸದ್ಯದಲ್ಲಿಯೇ ಪೊಲೀಸರು ಮೂವರು ಶಾಸಕರ ಹೇಳಿಕೆಗಳನ್ನು ಪಡೆಯಲಿದ್ದಾರೆ.

**

ಸುಳಿವು ನೀಡಿತಾ ಫೋನ್‌ಕಾಲ್‌?
ಗಣೇಶ್‌ರ ಕುಟುಂಬದವರು ಹಾಗೂ ಅವರ ಆಪ್ತರ ಚಲನವಲನಗಳ ಮೇಲೆ ಪೊಲೀಸರು ನಿಗಾ ವಹಿಸಿದ್ದರು. ವಾರದ ಹಿಂದೆ ಗಣೇಶ್‌ ತಮ್ಮ ಪತ್ನಿಯ ಮೊಬೈಲ್‌ಗೆ ಕರೆ ಮಾಡಿ ಮಾತನಾಡಿದ್ದರು. ಅದರ ಜಾಡು ಹಿಡಿದ ಪೊಲೀಸರಿಗೆ ಆರೋಪಿಯು ಗುಜರಾತ್‌ನಲ್ಲಿ ಇರುವ ಬಗ್ಗೆ ಮಾಹಿತಿ ದೊರೆಯಿತು ಎನ್ನಲಾಗಿದೆ.

**

ಕೂದಲೆಳೆ ಅಂತರದಲ್ಲಿ ಪರಾರಿ
‘ಗಣೇಶ್‌ ಈ ಮೊದಲು ಮುಂಬೈನಲ್ಲಿ ಇರುವ ಕುರಿತು ಖಚಿತ ಸುಳಿವು ಲಭ್ಯವಾಗಿತ್ತು. ಅದರಂತೆ ನಮ್ಮ ಪೊಲೀಸರು ಅಲ್ಲಿಗೆ ತೆರಳಿದ್ದರು. ಆದರೆ ಸ್ಥಳೀಯ ಪೊಲೀಸರು ಸಹಕಾರ ನೀಡಲಿಲ್ಲ. ನಮ್ಮವರು ವಿಳಾಸ ಪತ್ತೆ ಹಚ್ಚಿ ಆರೋಪಿಯನ್ನು ಬಂಧಿಸುವ ಮೊದಲೇ ಅವರು ಅಲ್ಲಿಂದ ಪರಾರಿ ಆಗಿದ್ದರು’ ಎಂದು ಎಸ್ಪಿ ಬಿ. ರಮೇಶ್‌ ತಿಳಿಸಿದರು.

**

ಆರೋಪಿಯನ್ನು ವಿಚಾರಣೆಗೆ ಒಳಪಡಿಸಿ ರಾಮನಗರ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗುವುದು. ಪೊಲೀಸ್‌ ಕಸ್ಟಡಿಗೆ ಪಡೆಯುವ ಬಗ್ಗೆ ಇನ್ನೂ ನಿರ್ಧರಿಸಿಲ್ಲ.
–ಬಿ. ರಮೇಶ್‌,ಎಸ್ಪಿ, ರಾಮನಗರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.