ADVERTISEMENT

ಯಾರೊ, ಯಾವುದೋ ಕಾರಣಕ್ಕೆ ಜಿಲ್ಲೆ ಮಾಡಿದ್ರು: ಹುಸೇನ್

ರಾಮನಗರ ಜಿಲ್ಲೆಗೆ ಬೆಂಗಳೂರು ದಕ್ಷಿಣ ಮರು ನಾಮಕರಣಕ್ಕೆ ಸಿ.ಎಂ ಸಕಾರಾತ್ಮಕ ಸ್ಪಂದನೆ

​ಪ್ರಜಾವಾಣಿ ವಾರ್ತೆ
Published 9 ಜುಲೈ 2024, 16:09 IST
Last Updated 9 ಜುಲೈ 2024, 16:09 IST
ಎಚ್‌.ಎ. ಇಕ್ಬಾಲ್ ಹುಸೇನ್, ಶಾಸಕ
ಎಚ್‌.ಎ. ಇಕ್ಬಾಲ್ ಹುಸೇನ್, ಶಾಸಕ   

ರಾಮನಗರ: ‘ಜಿಲ್ಲಾ ಕೇಂದ್ರವನ್ನು ರಾಮನಗರದಲ್ಲೇ ಉಳಿಸಿಕೊಂಡು ಜಿಲ್ಲೆಯ ಹೆಸರು ಬದಲಾವಣೆ ಮಾಡುವ ಕುರಿತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಮುಖಂಡರು ಸಲ್ಲಿಸಿದ ಮನವಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ’ ಎಂದು ಶಾಸಕ ಎಚ್‌.ಎ. ಇಕ್ಬಾಲ್ ಹುಸೇನ್ ಹೇಳಿದರು.

ಈ ಕುರಿತು ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಹೆಸರು ಬದಲಾವಣೆಗೆ ಸಚಿವ ಸಂಪುಟದಲ್ಲಿ ಒಪ್ಪಿಗೆ ಪಡೆದು ಬದಲಾದ ಹೆಸರು ಘೋಷಣೆ ಮಾಡಲಿದ್ದಾರೆ. ನಾವು ಮೂಲತಃ ಬೆಂಗಳೂರು ಜಿಲ್ಲೆಯವರು. ಮಧ್ಯೆ ಯಾರೋ, ಯಾವುದೋ ಕಾರಣಕ್ಕಾಗಿ ರಾಮನಗರವನ್ನು ಜಿಲ್ಲೆ ಮಾಡಿದ್ರು. ಇದರಿಂದ ಯಾವುದೇ ಪ್ರಯೋಜನವಾಗಿಲ್ಲ’ ಎಂದರು.

‘ನಿಖಿಲ್ ಕುಮಾರಸ್ವಾಮಿ ಅವರಿಗೆ ಗ್ರೇಟರ್ ಬೆಂಗಳೂರು ಎಂಬುದರ ಅರ್ಥ ಗೊತ್ತಿಲ್ಲ. ಸ್ವಲ್ಪ ದಿನ ಕಾದು ನೋಡಿದರೆ ಅವರಿಗೆ ಅರ್ಥವಾಗುತ್ತದೆ. ಡಿ.ಕೆ. ಸಹೋದರರು ಸೇರಿದಂತೆ ನಾವೆಲ್ಲರೂ ಇದೇ ಜಿಲ್ಲೆಯವರು. ಜಿಲ್ಲೆ ಪರಿಸ್ಥಿತಿ ಬಗ್ಗೆ ನಮಗೆ ಗೊತ್ತು. ಈ ಜಿಲ್ಲೆಯವರಲ್ಲದ ನಿಖಿಲ್‌ಗೆ ಅಭಿವೃದ್ದಿಯ ಅರಿವಿಲ್ಲ. ಅದೆಲ್ಲಾ ಗೊತ್ತಿದ್ದರೆ ಈ ರೀತಿ ಮಾಡುತ್ತಿರಲಿಲ್ಲ’ ಎಂದು ಜಿಲ್ಲೆ ಹೆಸರು ಬದಲಾವಣೆ ಕುರಿತು ನಿಖಲ್ ಹೇಳಿಕೆಗೆ ತಿರುಗೇಟು ನೀಡಿದರು.

ADVERTISEMENT

‘ಜಿಲ್ಲೆಯು ಬೆಂಗಳೂರು ದಕ್ಷಿಣವೆಂದು ಮರು ನಾಮಕರಣವಾದ ಬಳಿಕ, ಸಾಕಷ್ಟು ಅಭಿವೃದ್ಧಿಗೆ ಅವಕಾಶಗಳು ತೆರೆದುಕೊಳ್ಳುತ್ತವೆ. ರಾಮನಗರ ಜಿಲ್ಲೆಯಾಗಿ 17 ವರ್ಷವಾದರೂ ಕಲುಷಿತ ನೀರು ಕುಡಿಯುತ್ತಿದ್ದೇವೆ. ಮೂಲಸೌಕರ್ಯಗಳಿಂದ ವಂಚಿತರಾಗಿದ್ದೇವೆ. ಜಿಲ್ಲೆ ಮಾಡಿದವರು ಇದುವರೆಗೆ ಏಕೆ ನಿವೇಶನ ಹಂಚಲಿಲ್ಲ’ ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರನ್ನು ಪರೋಕ್ಷವಾಗಿ ಪ್ರಶ್ನಿಸಿದರು.

‘ನಾವೆಲ್ಲಾ ರಾಮನ ಭಕ್ತರು ಎಂದು ಹಿಂದೆಯೂ ಹೇಳಿದ್ದೇರೆ, ಈಗಲೂ ಹೇಳುತ್ತಿದ್ದೇನೆ. ಇವರಿಗೆ ರಾಮ ಈಗ ಕಾಣುತ್ತಿನೆ. ನಾವು ಸಾವಿರಾರು ವರ್ಷಗಳಿಂದ ಪೂಜೆ ಮಾಡಿಕೊಂಡು ಬಂದಿದ್ದೇವೆ. ದೇವರು ಮತ್ತು ಧರ್ಮ ಇಟ್ಟುಕೊಂಡು ನಾವು ರಾಜಕಾರಣ ಮಾಡುತ್ತಿಲ್ಲ. ಧರ್ಮವೇ ಬೇರೆ, ರಾಜಕಾರಣವೇ ಬೇರೆ. ನಿಖಿಲ್ ಅವರು ರಾಮದೇವರ ಬೆಟ್ಟಕ್ಕೆ ಎಷ್ಟು ಬಾರಿ ಹೋಗಿದ್ದಾರೆ? ರಾಮನ ಆರಾಧನೆ ಮಾಡಿದ್ದಾರೆ? ಬೆಟ್ಟಕ್ಕೆ ಹೋಗಲು ಸರಿಯಾದ ರಸ್ತೆ ಇಲ್ಲ, ಶೌಚಾಲಯವಿಲ್ಲ. ಚುನಾವಣೆಯಲ್ಲಿ ಸೋತಿದ್ದೇನೆ ಎಂದು ಅವರು ಈ ರೀತಿ ಮಾತನಾಡುವುದು ತಪ್ಪು’ ಎಂದರು.

ನಿಖಿಲ್ ಕುಮಾರಸ್ವಾಮಿ

‘ಬದಲಾವಣೆ ಹಿಂದೆ ತುಷ್ಟೀಕರಣದ ಅಜೆಂಡಾ’

ರಾಮನಗರ: ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಹೆಸರು ಬದಲಿಸುವುದಕ್ಕೆ ವಿರೋಧ ವ್ಯಕ್ತಪಡಿಸಿರುವ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ‘ರಾಮನಗರವು ನಮ್ಮ ಹೆಮ್ಮೆ. ಆದರೆ ಕೆಲವರನ್ನು ತುಷ್ಟೀಕರಣ ಮಾಡಲಿಕ್ಕೆ ಕೆಲವರು ರಾಮನಗರ ಹೆಸರನ್ನು ಬದಲಾವಣೆ ಮಾಡಲು ಮುಂದಾಗಿದ್ದಾರೆ’ ಎಂದು ಕಿಡಿಕಾರಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ‘ಪುರಾಣ ಪ್ರಸಿದ್ಧವಾದ ರಾಮನಗರ ಹೆಸರನ್ನು ಕಿತ್ತುಹಾಕಿ ಅದನ್ನು ಬೆಂಗಳೂರು ದಕ್ಷಿಣ ಎಂದು ಮಾಡುವುದರಲ್ಲಿ ಯಾವ ಹಿಡೆನ್ ಅಜೆಂಡಾ ಅಡಗಿದೆಯೋ ಗೊತ್ತಿಲ್ಲ. ಯಾರನ್ನು ಓಲೈಸಲು ರಾಮನಗರ ಹೆಸರಿಗೆ ಗೇಟ್ ಪಾಸ್ ನೀಡಲಾಗುತ್ತಿದೆ ಎನ್ನುವ ಒಳಗುಟ್ಟು ಮಾತ್ರ ರಟ್ಟಾಗಿದೆ’ ಎಂದಿದ್ದಾರೆ. ‘ರಿಯಲ್ ಎಸ್ಟೇಟ್ ದಂಧೆಕೋರರಿಗೆ ಜಿಲ್ಲೆಯನ್ನು ಸ್ವರ್ಗವನ್ನಾಗಿ ಮಾಡುವುದು ಈ ಷಡ್ಯಂತ್ರ್ಯದ ಕರಾಳಮುಖ. ಕೆಲವರ ತುಷ್ಟೀಕರಣ ಮತ್ತೊಂದು ಮುಖ. ರಾಜಕೀಯವಾಗಿ ಬಹಳ ಎತ್ತರದ ಸ್ಥಾನದಲ್ಲಿರುವ ರಾಮನಗರ ಜಿಲ್ಲೆಯ ಹೆಗ್ಗುರುತನ್ನೇ ಸರ್ವನಾಶ ಮಾಡುವ ಹುನ್ನಾರ ನಡೆದಿದೆ. ವಿಧಾನಸೌಧದ ನಿರ್ಮಾತೃ ಕೆಂಗಲ್ ಹನುಮಂತಯ್ಯನವರು ದೇಶದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಎಚ್.ಡಿ. ಕುಮಾರಸ್ವಾಮಿ ಅವರು ರಾಮನಗರ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದ್ದರು. ಜಿಲ್ಲೆಯ ಹೆಸರು ಬದಲಿಸಲು ಹೊರಟವರು ಮೊದಲು ಈ ಇತಿಹಾಸ ಅರಿತರೆ ಒಳ್ಳೆಯದು’ ಎಂದು ಟೀಕಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.