ಚನ್ನಪಟ್ಟಣ: ‘ಕಳೆದ ಆರು ವರ್ಷಗಳಲ್ಲಿ ನಗರದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಆಗಿಲ್ಲ. ಅಭಿವೃದ್ಧಿ ರಥ ನಿಂತಲ್ಲಿಯೇ ನಿಂತಿದೆ. ಈಗ ಪ್ರತಿದಿನ ಒಂದು ವಾರ್ಡ್‍ನ ಸಮಸ್ಯೆ ಬಗೆಹರಿಸೋಣ. ಅಧಿಕಾರಿಗಳು ಇದಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳಬೇಕು’ ಎಂದು ಶಾಸಕ ಸಿ.ಪಿ. ಯೋಗೇಶ್ವರ್ ಸೂಚಿಸಿದರು.
ನಗರಸಭೆಯ ಸಭಾಂಗಣದಲ್ಲಿ ಸೋಮವಾರ ನಗರಸಭೆ ಸದಸ್ಯರು ಹಾಗೂ ಅಧಿಕಾರಿಗಳ ಜೊತೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ‘ನಗರದ ವ್ಯಾಪ್ತಿಯಲ್ಲಿರುವ ರಸ್ತೆ, ಚರಂಡಿ, ಯುಜಿಡಿ ಸೇರಿದಂತೆ ಮೂಲಸೌಕರ್ಯದ ಸಮಸ್ಯೆಗಳನ್ನು ಪಟ್ಟಿಮಾಡಿ ಆದ್ಯತೆ ಮೇರೆಗೆ ಎಲ್ಲವನ್ನೂ ಸರಿಪಡಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗೋಣ’ ಎಂದರು.
‘ಪಂಕ್ಚರ್ ಆಗಿರುವ ಚಕ್ರಕ್ಕೆ ಗಾಳಿ ತುಂಬಿ ನಾವು ಚಲಾಯಿಸಬೇಕಿದೆ. ಇದಕ್ಕೆ ಅಧಿಕಾರಿಗಳು ಹಾಗೂ ಸದಸ್ಯರು ಸಹಕಾರ ನೀಡಬೇಕು. ನಗರದಲ್ಲಿ ಹಲವಾರು ವರ್ಷಗಳಿಂದ ಕುಂಟುತ್ತಾ ಸಾಗಿರುವ ಒಳಚರಂಡಿ (ಯುಜಿಡಿ) ಸಮಸ್ಯೆ ಪರಿಹಾರವಾಗಲು ಸುಮಾರು ₹300 ಕೋಟಿ ಅನುದಾನದ ಅವಶ್ಯಕತೆ ಇದೆ’ ಎಂದು ಹೇಳಿದರು.
‘ಹಿಂದೆ ಮಾಡಿರುವ ಯುಜಿಡಿ ಕೆಲಸ ಪ್ರಯೋಜನವಿಲ್ಲ. ಅಂದಿನ ಜನಸಂಖ್ಯೆ ಆಧಾರದಲ್ಲಿ ಯೋಜನೆ ರೂಪಿಸಲಾಗಿತ್ತು. ಹಿಂದೆ ಅಳವಡಿಸಿರುವ ಪೈಪ್‌ಲೈನ್ ತೆಗೆದು ಹೊಸದಾಗಿ ಅಳವಡಿಸಬೇಕು. ಇದಕ್ಕಾಗಿ ಹೊಸದಾಗಿಯೇ ಯೋಜನೆ ಮಾಡಬೇಕಿದೆ. ಹಾಗಾಗಿ ಹೊಸ ಯೋಜನೆ ತಯಾರಿಸಿ ಅದಕ್ಕೆ ಬೇಕಾದ ಅನುದಾನ ತರುತ್ತೇನೆ’ ಎಂದು ಭರವಸೆ ನೀಡಿದರು.
‘ನಗರದ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ’ ಎಂದು ಕೆಲವು ಸದಸ್ಯರು ಸಭೆಯಲ್ಲಿ ಗಮನ ಸೆಳೆದರು. ಅದಕ್ಕೆ ಪ್ರತಿಕ್ರಿಯಿಸಿದ ಯೋಗೇಶ್ವರ್, ‘ನಗರಕ್ಕೆ ಕಾವೇರಿ ನೀರು ಯಥೇಚ್ಛವಾಗಿ ಸರಬರಾಜಾಗುತ್ತಿದೆ. ಆದರೆ ಅದನ್ನು ಸಮರ್ಪಕವಾಗಿ ಬಳಸಿಕೊಳ್ಳದ ಕಾರಣ ಸಮಸ್ಯೆ ಎದುರಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ಅಮೃತ ಯೋಜನೆಯಡಿ ನಗರದ 8 ವಾರ್ಡ್‌ಗಳಿಗೆ ಹೊಸ ಪೈಪ್‌ಲೈನ್, ಓವರ್ ಹೆಡ್ ಟ್ಯಾಂಕ್ ಸೇರಿದಂತೆ ಅವಶ್ಯವಿರುವ ಎಲ್ಲ ವ್ಯವಸ್ಥೆ ಕಲ್ಪಿಸಲು ಅನುದಾನ ಬಿಡುಗಡೆಯಾಗಿದೆ. ಅದನ್ನು ಎಲ್ಲ ವಾರ್ಡ್‌ಗಳಿಗೂ ವಿಸ್ತರಿಸಲಾಗುವುದು’ ಎಂದು ತಿಳಿಸಿದರು.
ಸಭೆಯಲ್ಲಿ ಹಾಜರಿದ್ದ ನಗರಸಭೆ ಸದಸ್ಯರು ತಮ್ಮ ತಮ್ಮ ವಾರ್ಡ್‍ಗಳಲ್ಲಿರುವ ಸಮಸ್ಯೆಗಳ ಬಗ್ಗೆ ತಿಳಿಸಿ, ಅವುಗಳ ಪರಿಹಾರಕ್ಕೆ ನೂತನ ಶಾಸಕರಲ್ಲಿ ಮನವಿ ಮಾಡಿದರು. ಅದಕ್ಕೆ ಯೋಗೇಶ್ವರ್, ‘ನಿಮ್ಮ ವಾರ್ಡ್‍ಗಳಲ್ಲಿರುವ ಸಮಸ್ಯೆಗಳೆಲ್ಲವನ್ನೂ ಪಟ್ಟಿ ಮಾಡಿ ಕೊಡಿ. ಅವುಗಳನ್ನು ಆದ್ಯತೆಯ ಮೆರೆಗೆ ಸರಿಪಡಿಸೋಣ’ ಎಂದು ಭರವಸೆ ನೀಡಿದರು.
ನಗರಸಭೆ ಪೌರಾಯುಕ್ತ ಮಹೇಂದ್ರ ಹಾಗೂ ಅಧಿಕಾರಿಗಳು ಹಾಜರಿದ್ದರು.
‘ಡಿ. 5ರಿಂದ ಖಾತಾ ಆಂದೋಲನ’ ‘ಚನ್ನಪಟ್ಟಣದ 31 ವಾರ್ಡ್‍ಗಳಲ್ಲಿಯೂ ಖಾತೆಗಳ ಸಮಸ್ಯೆ ಇದೆ. ಪ್ರತಿನಿತ್ಯ ಜನ ಖಾತೆ ಕಾರಣಕ್ಕೆ ಅಲೆದಾಡುತ್ತಿದ್ದಾರೆ. ಅದನ್ನು ತಪ್ಪಿಸಲು ನಗರ ವ್ಯಾಪ್ತಿಯಲ್ಲಿ ಡಿ. 5ರಿಂದ ಖಾತಾ ಆಂದೋಲನ ಆರಂಭಿಸಲಾಗುವುದು. ನಗರಸಭೆ ಅಧಿಕಾರಿಗಳು ಖಾತಾ ಆಂದೋಲನಕ್ಕೆ ಅವಶ್ಯವಿರುವ ಸಿದ್ಧತೆ ಮಾಡಿಕೊಳ್ಳಬೇಕು. ಸಿಬ್ಬಂದಿ ಕೊರತೆ ಇದ್ದರೆ ಖಾಸಗಿ ಏಜೆನ್ಸಿಯವರ ಸಹಕಾರ ಪಡೆದು ಆಂದೋಲನ ಯಶಸ್ವಿಗೊಳಿಸಬೇಕು. ಎರಡು ತಿಂಗಳೊಳಗೆ ನಗರದ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಬೇಕು’ ಎಂದು ಅಧಿಕಾರಿಗಳಿಗೆ ಯೋಗೇಶ್ವರ್ ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.