ADVERTISEMENT

ಒಕ್ಕಲಿಗರಿಗೆ ಪರ್ಯಾಯ ನಾಯಕತ್ವದ ಅಗತ್ಯವಿದೆ: ಸಿಪಿವೈ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2024, 14:28 IST
Last Updated 25 ನವೆಂಬರ್ 2024, 14:28 IST
ಸಿ.ಪಿ. ಯೋಗೇಶ್ವರ್, ಚನ್ನಪಟ್ಟಣ ಶಾಸಕ
ಸಿ.ಪಿ. ಯೋಗೇಶ್ವರ್, ಚನ್ನಪಟ್ಟಣ ಶಾಸಕ   

ಚನ್ನಪಟ್ಟಣ (ರಾಮನಗರ): ಜೆಡಿಎಸ್ ವರಿಷ್ಠ ಎಚ್‌.ಡಿ. ದೇವೇಗೌಡರು ಈಗಲಾದರೂ ರಾಜಕೀಯದಿಂದ ನಿವೃತ್ತಿಯಾಗಿ ಬೇರೆಯವರಿಗೆ ಅವಕಾಶ ಕೊಡಬೇಕು. ಯೋಗ ಮತ್ತು ಯೋಗ್ಯತೆ ಇರುವವರು ಸಮುದಾಯದ ನಾಯಕತ್ವ ವಹಿಸಿಕೊಳ್ಳಲಿ ಎಂದು ಶಾಸಕ ಸಿ.ಪಿ. ಯೋಗೇಶ್ವರ್ ಹೇಳಿದರು.  

ಒಕ್ಕಲಿಗರ ಸಮುದಾಯ ಈಗಲಾದರೂ ಎಚ್‌.ಡಿ. ದೇವೇಗೌಡರ ಕುಟುಂಬದ ನಾಯಕತ್ವ ಬಿಟ್ಟು, ಪರ್ಯಾಯ ಒಕ್ಕಲಿಗ ನಾಯಕತ್ವದ ಕುರಿತು ಯೋಚಿಸಬೇಕು ಎಂದು ಅವರು ಸಲಹೆ ಮಾಡಿದರು.

ಪಟ್ಟಣದಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಒಕ್ಕಲಿಗರ ಶಕ್ತಿಯನ್ನು ಗೌಡರ ಕುಟುಂಬದವರು ಸ್ವಂತಕ್ಕೆ ಬಳಸಿಕೊಳ್ಳುವುದು ಎಷ್ಟು ಸರಿ ಎಂದು ಅವರು ಪ್ರಶ್ನಿಸಿದರು. 

ADVERTISEMENT

ಗೌಡರ ಕುಟುಂಬದಲ್ಲಿ ಎಷ್ಟು ಜನ ಶಾಸಕರಿದ್ದಾರೆ ಎಂಬುದನ್ನು ಒಕ್ಕಲಿಗ ಸಮುದಾಯದವರು ಗಮನಿಸಬೇಕು. ಗೌಡರ ಕುಟುಂಬದ ರಾಜಕಾರಣ ಸ್ವಾರ್ಥದಿಂದ ಕೂಡಿದೆ ಎಂದರು.

ಉಪ ಚುನಾವಣೆಯಲ್ಲಿ ಮೊಮ್ಮಗನನ್ನು ಪಣಕ್ಕಿಟ್ಟ ದೇವೇಗೌಡರನ್ನು ಜನ ತಿರಸ್ಕರಿಸಿದ್ದಾರೆ. ಪ್ರಾದೇಶಿಕ ಪಕ್ಷದ ಹೆಸರಿನಲ್ಲಿ ಕುಟುಂಬ ರಾಜಕಾರಣ ಮಾಡಿಕೊಂಡು ಬಂದಿರುವ ಅವರು, ಸಮಾಜವನ್ನು ದಿಕ್ಕು ತಪ್ಪಿಸುವ ಕೆಲಸ ಮಾಡಿದ್ದಾರೆ. ದೇವೇಗೌಡರನ್ನು ಹಳೆ ಮೈಸೂರು ಭಾಗದ ಜನ ಒಪ್ಪುತ್ತಿಲ್ಲ ಎಂಬುದು ಉಪ ಚುನಾವಣೆಯಲ್ಲಿ ಸಾಬೀತಾಗಿದೆ ಎಂದರು.

‘ಮಗನನ್ನು ಯುದ್ಧ ಭೂಮಿಗೆ ಕಳಿಸಿದ ನೀನು ರಣಹೇಡಿ ಆಗಿಬಿಟ್ಟೆ’ ಎಂದು ಬಬ್ರುವಾಹನ ಅರ್ಜುನನಿಗೆ ಹೇಳುತ್ತಾನೆ. ಉಪ ಚುನಾವಣೆಯಲ್ಲೂ ಇದೇ ಪರಿಸ್ಥಿತಿ ಆಗಿದೆ. ಮಗನನ್ನೇ ಗೆಲ್ಲಿಸಿಕೊಳ್ಳಲಾಗದ ಎಚ್‌.ಡಿ. ಕುಮಾರಸ್ವಾಮಿ ಅವರು ಕೇಂದ್ರ ಸಚಿವರಾಗಿದ್ದು ಏನು ಪ್ರಯೋಜನ? ಅವರದ್ದು ಭಂಡತನ. ಇದ್ರೆ ಈ ಊರು, ಬಿಟ್ಟರೆ ಇನ್ನೊಂದು ಊರು ಎಂಬಂತಾಗಿದೆ’ ಎಂದು ವ್ಯಂಗ್ಯವಾಡಿದರು.

ನಾನು ಕಾಂಗ್ರೆಸ್‌ನಲ್ಲೇ ಇರುತ್ತೇನೆ. ಕುಮಾರಸ್ವಾಮಿ ಯಡಿಯೂರಪ್ಪ ಹಾಗೂ ವಿಜಯೇಂದ್ರ ಪಿತೂರಿಯಿಂದ ನಾನು ಬಿಜೆಪಿಯಿಂದ ಹೊರಬಂದೆ. ನಾನು ಪಕ್ಕಾ ಕಾಂಗ್ರೆಸ್ಸಿಗ. ಪಕ್ಷ ಬಿಡಲ್ಲ
ಸಿ.ಪಿ. ಯೋಗೇಶ್ವರ್ ಚನ್ನಪಟ್ಟಣ ಶಾಸಕ

‘ಜೆಡಿಎಸ್‌ನವರು ಬರುವುದಾದರೆ ಮಾತನಾಡುವೆ’

‘ಜೆಡಿಎಸ್‌ ನಶಿಸುತ್ತಿರುವುದರಿಂದ ಅಲ್ಲಿನ ಶಾಸಕರು ಬೇರೆಡೆಗೆ ಮುಖ ಮಾಡುವುದು ಸಹಜ. ನಾನು ಜೆಡಿಎಸ್‌ ಶಾಸಕರನ್ನು ಆಪರೇಷನ್ ಮಾಡುವುದಿಲ್ಲ. ಅವರೇ ಪಕ್ಷ ತೊರೆದು ಬರುವುದಾದರೆ ನಮ್ಮ ಹೈಕಮಾಂಡ್ ಜೊತೆ ಮಾತನಾಡುವೆ. ಜೆಡಿಎಸ್‌ನಲ್ಲಿ ಭವಿಷ್ಯವಿಲ್ಲ ಎಂಬುದನ್ನು ಅಲ್ಲಿನ ಶಾಸಕರು ಅರಿಯಬೇಕು. ಗೌಡರು ಹಳ್ಳಿ ಹಳ್ಳಿಗೆ ಬಂದು ಪ್ರಚಾರ ಮಾಡಿದರೂ ಸಮುದಾಯ ಗೌರವ ಕೊಡಲಿಲ್ಲ. ಕುಟುಂಬ ರಾಜಕಾರಣವನ್ನು ತಿರಸ್ಕರಿಸಿರುವುದು ಸ್ಪಷ್ಟವಾಗಿದೆ’ ಎಂದು ಯೋಗೇಶ್ವರ್ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.