ADVERTISEMENT

ಮೂಕಜ್ಜಿಯ ಕನಸುಗಳು ಚಲನಚಿತ್ರ ಪ್ರದರ್ಶನಕ್ಕೆ ಪಿ.ಶೇಷಾದ್ರಿ ಚಾಲನೆ

ಕನ್ನಡ ಭಾಷೆಯ ಅಸ್ಮಿತೆ ಉಳಿಸಿ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2019, 13:15 IST
Last Updated 6 ಡಿಸೆಂಬರ್ 2019, 13:15 IST
ಮಾಗಡಿ ಬಾಲಾಜಿ ಚಿತ್ರಮಂದಿರದಲ್ಲಿ ಮೂಕಜ್ಜಿಯ ಕನಸುಗಳು ಕಾದಂಬರಿಯ 50ನೇ ವರ್ಷಾಚರಣೆ ಸಂಭ್ರಮದ ಅಂಗವಾಗಿ ಪಿ.ಶೇಷಾದ್ರಿ ಕಾರಂತರ ಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ಮಾಗಡಿ ಬಾಲಾಜಿ ಚಿತ್ರಮಂದಿರದಲ್ಲಿ ಮೂಕಜ್ಜಿಯ ಕನಸುಗಳು ಕಾದಂಬರಿಯ 50ನೇ ವರ್ಷಾಚರಣೆ ಸಂಭ್ರಮದ ಅಂಗವಾಗಿ ಪಿ.ಶೇಷಾದ್ರಿ ಕಾರಂತರ ಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.   

ಮಾಗಡಿ: ಮೂಕಜ್ಜಿಯ ಕನಸು ಒಂದು ಸದಭಿರುಚಿಯ ಸಿನಿಮಾ ಆಗಿದ್ದು ಮಕ್ಕಳೆಲ್ಲರಿಗೂ ತೋರಿಸುವ ಮೂಲಕ ಕನ್ನಡದ ಅಸ್ಮಿತೆ ಉಳಿಸಲು ಪೋಷಕರು ಮುಂದಾಗಬೇಕು ಎಂದು ಚಿತ್ರ ನಿರ್ದೇಶಕ ಪಿ. ಶೇಷಾದ್ರಿ ತಿಳಿಸಿದರು.

ಪಟ್ಟಣದ ಬಾಲಾಜಿ ಚಿತ್ರಮಂದಿರದಲ್ಲಿ ಶುಕ್ರವಾರ ಮೂಕಜ್ಜಿಯ ಕನಸುಗಳು ಕಾದಂಬರಿಯ 50ನೇ ವರ್ಷಾಚರಣೆ ಸಂಭ್ರಮದ ಅಂಗವಾಗಿ ‘ಮೂಕಜ್ಜಿಯ ಕನಸು’ ಚಿತ್ರ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕನ್ನಡ ಸಾಹಿತ್ಯ ಪರಿಷತ್‌ ಮೂಕಜ್ಜಿಯ ಕನಸುಗಳು ಕಾದಂಬರಿಯ 50ನೇ ವರ್ಷಾಚರಣೆ ಆಚರಿಸದೆ, ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

ಪ್ರೇಕ್ಷಕರ ಸಂಖ್ಯೆ ಕಡಿಮೆ ಇದ್ದುದನ್ನು ಗಮನಿಸಿದ ಪಿ.ಶೇಷಾದ್ರಿ ಅವರು, ವೇದಿಕೆ ಇದೆ; ಆದರೆ, ಪ್ರೇಕ್ಷಕರಿಲ್ಲ. ಮಾಧ್ಯಮದ ಮೂಲಕ ಪ್ರೇಕ್ಷಕರನ್ನು ತಲುಪಲಾಗುವುದು. ರಾಜ್ಯದಲ್ಲಿ ಮೊದಲ ಬಾರಿಗೆ ತಾಲ್ಲೂಕು ಕೇಂದ್ರದಲ್ಲಿ ಸದಭಿರುಚಿಯ ಚಿತ್ರ ಬಿಡುಗಡೆಯಾಗುತ್ತಿದೆ. ಇಂದು ಬರುತ್ತಿರುವ ಸಿನಿಮಾಗಳ ಹೊಡಿ ಬಡಿಯ ದೃಶ್ಯಗಳು ಅಸಹ್ಯ ಹುಟ್ಟಿಸುತ್ತಿವೆ ಎಂದರು.

‘ಡಾ.ಕೆ. ಶಿವರಾಮ ಕಾರಂತರು ವೈಚಾರಿಕ ಕೃತಿ ರಚಿಸಿದ್ದಾರೆ. ಕಾರಂತರ ವೈಚಾರಿಕ ನಿಲುವು ಮಕ್ಕಳಿಗೆ ತಲುಪಲಿ ಎಂಬ ಉದ್ದೇಶದಿಂದ ಸಿನಿಮಾ ಮಾಡಿದ್ದೇನೆ. ಒಳ್ಳೆಯ ಚಿತ್ರಗಳು ಇದ್ದರೆ, ಪ್ರೇಕ್ಷಕರು ಸಿನಿಮಾ ಮಂದಿರದತ್ತ ಬರುತ್ತಾರೆ. ಎರಡು ಸಾವಿರ ವರ್ಷಗಳಿಂದ ಉಳಿದು ಬೆಳೆದು ಬಂದಿರುವ ಕನ್ನಡ ಭಾಷೆ ಅಷ್ಟು ಸುಲಭವಾಗಿ ಸಾಯೋಲ್ಲ’ ಎಂದು ತಿಳಿಸಿದರು.

‘ನಾವೆಲ್ಲರೂ ಕನ್ನಡ ಭಾಷೆಯನ್ನು ಬಳಸಿ, ಉಳಿಸಿ ಬೆಳೆಸಬೇಕಿದೆ. ಸಿನಿಮಾ ನೋಡಿ ಹಾರೈಸಿ. ಕನ್ನಡ ಸಿನಿಮಾ ಮತ್ತು ಚಲನಚಿತ್ರರಂಗವನ್ನು ಉಳಿಸಿ. ಮುಂದೆ ಇನ್ನೂ ಹೆಚ್ಚಿನ ಸದಭಿರುಚಿಯ ಚಿತ್ರಗಳನ್ನು ಮಾಡಲು ಪ್ರೇರೇಪಿಸಿ’ ಎಂದು ಮನವಿ ಮಾಡಿದರು.

ವೈಚಾರಿಕಾ ನೆಲೆಗಟ್ಟು, ಮಾನವೀಯ ಮೌಲ್ಯಗಳನ್ನು ಮೂಕಜ್ಜಿಯ ಕನಸು ಒಳಗೊಂಡಿದೆ. ರಾಜ್ಯದ ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗಾಗಿ ಪ್ರದರ್ಶಿಸಲಾಗುವುದು. ಕನ್ನಡಿಗರ ಅಸ್ಮಿತೆಯನ್ನು ಉಳಿಸುವ ಕೆಲಸ ಸಿನಿಮಾ ಮೂಲಕ ಮಾಡುತ್ತಿದ್ದೇವೆ. ಏಳು ದಿನಗಳ ಕಾಲ ಪ್ರದರ್ಶನವಿರುತ್ತದೆ. ಪ್ರೇಕ್ಷಕರು ಸದಭಿರುಚಿಯ ಕನ್ನಡ ಚಿತ್ರಗಳನ್ನು ವೀಕ್ಷಿಸುವ ಮೂಲಕ ಚಲನಚಿತ್ರ ರಂಗಕ್ಕೆ ಪ್ರೋತ್ಸಾಹ ನೀಡಬೇಕು ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದೇಶ್ವರ.ಎಸ್.ಮಾತನಾಡಿ, ಮಕ್ಕಳು ಕಥೆ, ಕಾದಂಬರಿ, ನಾಟಕ ಕೃತಿಗಳನ್ನು ಓದುವ ಹವ್ಯಾಸ ಕಡಿಮೆ ಮಾಡಿದ್ದಾರೆ. ಪಠ್ಯ ಪುಸ್ತಕ ಓದಿ ಪಾಸಾದರೆ ಸಾಕು ಎನ್ನುವಂತಾಗಿದೆ. ಕಾದಂಬರಿ ಸಿನಿಮಾ ಮಕ್ಕಳಿಗೆ ಅರ್ಥವಾಗುವುದು ಕಡಿಮೆ’ ಎಂದರು. ಪ್ರಾಥಮಿಕ ಶಾಲಾ ಮಕ್ಕಳಿಗೆ ಈ ಸಿನಿಮಾ ಪ್ರದರ್ಶನ ಏರ್ಪಡಿಸಲಾಗುವುದು ಎಂದರು.

ತಾಲ್ಲೂಕು ದೈಹಿಕ ಶಿಕ್ಷಣ ಅಧಿಕಾರಿ ಸಿ.ಬಿ.ಅಶೋಕ್‌, ಬಾಲಾಜಿ ಚಿತ್ರಮಂದಿರದ ಮಾಲೀಕ ಬಿ.ಆರ್.ರಂಗನಾಥ್, ಕನ್ನಡ ಅಧ್ಯಯನ ಕೇಂದ್ರದ ಮುಖ್ಯಸ್ಥ ಪ್ರೊ.ಪಿ.ನಂಜುಂಡ, ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷೆ ಕಲ್ಪನಾ ಶಿವಣ್ಣ, ಪ್ರಗತಿಪರ ಚಿಂತಕ ಮಾಡಬಾಳ್ ಜಯರಾಮ್, ಲೇಖಕಿ ವಸಂತಲಕ್ಷ್ಮೀ ಸುರೇಂದ್ರನಾಥ್, ಚಿತ್ರಕಲಾವಿದ ನೀಲಕಂಠ ಶೆಟ್ಟಿ, ‘ಹೊಸಚಿಗುರು ಹಳೆಬೇರು ವೇದಿಕೆ’ಯ ಪ್ರಶಾಂತ್, ಶಂಕರ್, ನವೀನ್‌, ಮಧು, ಆನಂದ್‌, ಉಮೇಶ್‌, ದಿನೇಶ್‌ ಶಿಕ್ಷಣ ಸಂಯೋಜಕ ಶಿವಲಿಂಗಯ್ಯ, ಬಿ.ಆರ್.ಪಿಗಳಾದ ಅಶೋಕ್, ಮುನಿಯಪ್ಪ, ಕನ್ನಡ ಸಾಹಿತ್ಯ ಪರಿಷತ್‌ ಸದಸ್ಯೆ ಜಯಲಕ್ಷ್ಮೀ ಮಹಾಬಲೇಶ್ವರ ರಾವ್, ರಂಗಕರ್ಮಿ ಚಿಕ್ಕವೀರಯ್ಯ, ಗಂಗಾಧರೇಶ್ವರ ಪ್ರೌಢಶಾಲೆ ಶಿಕ್ಷಕರಾದ ಪಿ.ಟಿ.ರಂಗಯ್ಯ, ಆರ್‌.ರಜನಿ, ಕಿರಣ್‌, ವಿವಿಧ ಪ್ರೌಢಶಾಲೆಗಳ ವಿದ್ಯಾರ್ಥಿಗಳು ಇದ್ದರು.

ಚಿತ್ರ ನಿರ್ದೇಶಕ ಪಿ.ಶೇಷಾದ್ರಿ ಅವರನ್ನು ಸನ್ಮಾನಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.