ರಾಮನಗರ: ಕರ್ನಾಟಕ ಜಾನಪದ ಪರಿಷತ್ತು ಪ್ರತಿ ವರ್ಷ ನೀಡುವ ‘ನಾಡೋಜ ಎಚ್. ಎಲ್. ನಾಗೇಗೌಡ ರಾಷ್ಟ್ರೀಯ ಪ್ರಶಸ್ತಿ’ಗೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಹೊಸೂರಿನ ಕಿನ್ನರಿ ಜೋಗಿ ಕಲಾವಿದ ಕೆ. ಗುಡ್ಡಪ್ಪ ಜೋಗಿ ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು ₹1 ಲಕ್ಷ ನಗದು ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದೆ.
ಕರ್ನಾಟಕದ ಗಾಯನ ಪರಂಪರೆಯ ಕಲಾಪ್ರಕಾರ ‘ಕಿನ್ನರಿ ಜೋಗಿ ಮೇಳ’ ಕಥಾ ಪರಂಪರೆಯ ಕಲಾವಿದರಾದ 72 ವರ್ಷದ ಗುಡ್ಡಪ್ಪ ಅವರು, 12ನೇ ವಯಸ್ಸಿನಿಂದಲೇ ಈ ಕಲೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇವರ ಕಲಾ ಪ್ರತಿಭೆಗೆ ‘ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ’, ‘ಸಂದೇಶ ಪ್ರಶಸ್ತಿ’, ‘ಕೀರ್ತನಾಚಾರ್ಯ ಪ್ರಶಸ್ತಿ, ‘ನಾಥಪಂಥ ಜೋಗಿ ಸಾಧಕ ಪ್ರಶಸ್ತಿ’ ಹಾಗೂ ಪರಿಷತ್ತಿನ ‘ದೊಡ್ಡಮನೆ ಲಿಂಗೇಗೌಡ ಪ್ರಶಸ್ತಿ’ಗಳು ಸಂದಿವೆ.
ನ. 22ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಬೆಳಿಗ್ಗೆ 10.30ಕ್ಕೆ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದೆ. ಸಾಹಿತಿ ಹಂ.ಪ. ನಾಗರಾಜಯ್ಯ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ಎಸ್. ತಂಗಡಗಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಪುರುಷೋತ್ತಮ ಬಿಳಿಮಲೆ ಹಾಗೂ ಇಲಾಖೆಯ ನಿರ್ದೇಶಕಿ ಡಾ. ಧರಣಿದೇವಿ ಮಾಲಗತ್ತಿ ಭಾಗವಹಿಸಲಿದ್ದಾರೆ ಎಂದು ಪರಿಷತ್ತಿನ ಅಧ್ಯಕ್ಷ ಪ್ರೊ. ಹಿ.ಚಿ. ಬೋರಲಿಂಗಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.