ADVERTISEMENT

ಕೋಲಾರ: ಮತದಾನ ಜಾಗೃತಿಗೆ ‘ನಂದಿನಿ’ ಆಸರೆ

‘ಸ್ವೀಪ್ ಕೋಲಾರ’ ವಿನೂತನ ಹೆಜ್ಜೆ– ಮತದಾನ ಸ್ನೇಹಿ ನಂದಿನಿ, ನರೇಗಾ ಕಾರ್ಡ್‌ ಮೇಲೂ ಸಂದೇಶ

ಕೆ.ಓಂಕಾರ ಮೂರ್ತಿ
Published 13 ಏಪ್ರಿಲ್ 2023, 4:57 IST
Last Updated 13 ಏಪ್ರಿಲ್ 2023, 4:57 IST
ಪೋಸ್ಟರ್‌ ಮೂಲಕ ವಿನೂತನವಾಗಿ ಮತದಾನ ಜಾಗೃತಿ ಮೂಡಿಸಲಾಗುತ್ತಿದೆ(ಎಡಚಿತ್ರ). ನಂದಿನಿ ಹಾಲಿನ ಪೊಟ್ಟಣದ ಮೇಲೆ ಮುದ್ರಿಸಲಾಗಿರುವ ಮತದಾನ ಜಾಗೃತಿ ಸಂದೇಶ
ಪೋಸ್ಟರ್‌ ಮೂಲಕ ವಿನೂತನವಾಗಿ ಮತದಾನ ಜಾಗೃತಿ ಮೂಡಿಸಲಾಗುತ್ತಿದೆ(ಎಡಚಿತ್ರ). ನಂದಿನಿ ಹಾಲಿನ ಪೊಟ್ಟಣದ ಮೇಲೆ ಮುದ್ರಿಸಲಾಗಿರುವ ಮತದಾನ ಜಾಗೃತಿ ಸಂದೇಶ   

ಕೋಲಾರ: ಅಮೂಲ್‌ ಜೊತೆ ನಂದಿನಿ ವಿಲೀನಗೊಳಿಸುವ ಪ್ರಯತ್ನಕ್ಕೆ ರಾಜ್ಯದಾದ್ಯಂತ ಭಾರಿ ವಿರೋಧ ವ್ಯಕ್ತವಾಗುತ್ತಿದ್ದರೆ, ಇತ್ತ ಕೋಲಾರ ಜಿಲ್ಲೆಯಲ್ಲಿ ‘ನಂದಿನಿ’ ಮೂಲಕ ಮತದಾನ ಜಾಗೃತಿ ಮೂಡಿಸಲಾಗುತ್ತಿದೆ.

ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ವಿನೂತನ ಹೆಜ್ಜೆಯಾಗಿ ‘ಸ್ವೀಪ್ ಕೋಲಾರ’ ತಂಡ ‘ಮತದಾನ ಸ್ನೇಹಿ ನಂದಿನಿ' ಘೋಷವಾಕ್ಯ
ಮೊಳಗಿಸುತ್ತಿದೆ.

ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದಲ್ಲಿ ಉತ್ಪಾದಿಸುವ ನಂದಿನಿ ಉತ್ಪನ್ನಗಳಾದ ಹಾಲು, ತುಪ್ಪ, ಮೊಸರು, ಮಜ್ಜಿಗೆ, ಸಿಹಿ ತಿನಿಸುಗಳ ಪೊಟ್ಟಣಗಳ ಮೇಲೆ ಎರಡು ದಿನಗಳಿಂದ ಮತದಾನ ಜಾಗೃತಿ ಸಂದೇಶ ಹಾಗೂ ಮತದಾನ ದಿನಾಂಕ ಮುದ್ರಿಸಲಾಗುತ್ತಿದೆ.

ADVERTISEMENT

ನಂದಿನಿ ಉತ್ಪನ್ನ ಬಳಸುವ ಜಿಲ್ಲೆಯ ಸುಮಾರು 55 ಸಾವಿರ ಕುಟುಂಬಗಳಿಗೆ ಮತದಾನ ಜಾಗೃತಿಯ ಸಂದೇಶ ತಲುಪಿಸುವ ಪ್ರಯತ್ನ ಇದಾಗಿದೆ.

‘ನನ್ನ ಮತ ನನ್ನ ಭವಿಷ್ಯ’. ‘ನಾನು ಮೇ 10ರಂದು ಮತ ಚಲಾಸುವೆ’, ‘ಮತದಾನಕ್ಕಿಂತ ಇನ್ನೊಂದಿಲ್ಲ, ನಾನು ಖಚಿತವಾಗಿ ಮತದಾನ ಮಾಡುವೆ’ ಎಂಬ ಸಂದೇಶಗಳನ್ನು ಪೊಟ್ಟಣಗಳ ಮೇಲೆ ಮುದ್ರಿಸಲಾಗಿದೆ.

‘ಪ್ರಮುಖವಾಗಿ ಯುವಕರು, ಹೊಸ ಮತದಾರರು, ಅಂಗವಿಕಲರು, ತೃತೀಯ ಲಿಂಗಿಗಳನ್ನು ಗುರಿಯಾಗಿಸಿ ಜಾಗೃತಿ ರೂಪಿಸಿದ್ದೇವೆ. ಅವರನ್ನೂ ಪಾಲುದಾರರಾಗಿಸಿಕೊಂಡಿದ್ದೇವೆ. ಮತದಾರರ ಪಟ್ಟಿಯಲ್ಲಿರುವ ಯಾರೊಬ್ಬರೂ ಹೊರಗುಳಿಯಬಾರದು. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸಲು ಜಿಲ್ಲೆಯಲ್ಲಿ ವೈವಿಧ್ಯಮಯ ಕಾರ್ಯಕ್ರಮ ರೂಪಿಸಿದ್ದೇವೆ’ ಎಂದು ಜಿಲ್ಲಾ ಸ್ವೀಪ್‌ ಸಮಿತಿ ಅಧ್ಯಕ್ಷರೂ ಆಗಿರುವ ಜಿಲ್ಲಾ ಪಂಚಾಯಿತಿ ಸಿಇಒ ಯುಕೇಶ್ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಕಚೇರಿ ಸುತ್ತೋಲೆ, ಕೆಎಸ್‌ಆರ್‌ಟಿಸಿ ಬಸ್‌ ಟಿಕೆಟ್‌, ನರೇಗಾ ಉದ್ಯೋಗ ಕಾರ್ಡ್‌, ಆಸ್ಪತ್ರೆ ಚೀಟಿ, ಸ್ವಚ್ಛತಾ ವಾಹನಗಳ ಮೇಲು ಸಂದೇಶ ಮುದ್ರಿಸಿ ಮತದಾನ ಜಾಗೃತಿ ನಡೆದಿದೆ.

‘ಮತದಾನ ಅತಿ ಮುಖ್ಯ ಎನಿಸಿದಾಗ ಮಂಗಳ ಗ್ರಹವು ದೂರವೆನಿಸುವುದಿಲ್ಲ, ನಿಮ್ಮ ಹಕ್ಕು ಚಲಾಯಿಸಲು ನಿಮ್ಮ ವಿಧಾನಸಭಾ ಕ್ಷೇತ್ರಗಳಿಗೆ ತೆರಳಿ ತಪ್ಪದೇ ಮತದಾನ ಮಾಡಿ’ ಎಂಬ ಸಂದೇಶದ ಪೋಸ್ಟರ್‌ ಹಾಕಿ ಪ್ರಚಾರ ಮಾಡಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.