ADVERTISEMENT

ನರೇಗಾ ಯೋಜನೆಯಲ್ಲಿ ಅಕ್ರಮ: ವರದಿಯಲ್ಲಿ ಬಹಿರಂಗ

ವರದಿ

​ಪ್ರಜಾವಾಣಿ ವಾರ್ತೆ
Published 12 ಜೂನ್ 2024, 6:32 IST
Last Updated 12 ಜೂನ್ 2024, 6:32 IST
ಕನಕಪುರ ಟಿ.ಬೇಕುಪ್ಪೆ ಗ್ರಾಮ ಪಂಚಾಯಿತಿಯಲ್ಲಿ ನಡೆದ ಸಭೆಯಲ್ಲಿ ಪರಿಶೋಧನಾ ವರದಿಯನ್ನು ಕಮಲಮ್ಮ ಮಂಡಿಸಿದರು
ಕನಕಪುರ ಟಿ.ಬೇಕುಪ್ಪೆ ಗ್ರಾಮ ಪಂಚಾಯಿತಿಯಲ್ಲಿ ನಡೆದ ಸಭೆಯಲ್ಲಿ ಪರಿಶೋಧನಾ ವರದಿಯನ್ನು ಕಮಲಮ್ಮ ಮಂಡಿಸಿದರು   

ಕನಕಪುರ: ನರೇಗಾ ಯೋಜನೆಯಲ್ಲಿ ಕಾಮಗಾರಿ ಮಾಡಿ ಹಣ ಪಡೆದ ನಂತರ ಕಾಮಗಾರಿ ನಾಶ ಮಾಡಿರುವುದು, ಸತ್ತವರ ಹೆಸರಲ್ಲಿ ಕೂಲಿ ಹಣ ಪಡೆದಿರುವುದು, ನಿಗದಿಗಿಂತ ಹೆಚ್ಚು ಮಾನವ ದಿನಗಳನ್ನು ಬಳಕೆ ಮಾಡಿ ಯೋಜನೆಯನ್ನು ದುರ್ಬಳಕೆ ಮಾಡಿಕೊಂಡಿರುವುದು ಟಿ.ಬೇಕುಪ್ಪೆ ಗ್ರಾಮ ಪಂಚಾಯಿತಿ ಸಾಮಾಜಿಕ ಪರಿಶೋಧನಾ ಸಭೆಯಲ್ಲಿ ಬೆಳಕಿಗೆ ಬಂದಿದೆ.

ಮಂಗಳವಾರ ನಡೆದ 2023-24ನೇ ಸಾಲಿನ ಮೊದಲ ಸುತ್ತಿನ ಸಾಮಾಜಿಕ ಪರಿಶೋಧನಾ ಸಭೆಯಲ್ಲಿ ಈ ಮಾಹಿತಿ ಬಹಿರಂಗಗೊಂಡಿದೆ.

ಪಂಚಾಯಿತಿಯಲ್ಲಿ ಒಟ್ಟು 640 ಕಾಮಗಾರಿ ಅನುಷ್ಠಾನ ಮಾಡಲಾಗಿದೆ. ಇದರ ಕೂಲಿ ₹16,71,3000, ಸಾಮಗ್ರಿ ವೆಚ್ಚವಾಗಿ ₹5,58,1000 ಪಾವತಿಸಲಾಗಿದೆ. ಈ ಹಣದ ಬಳಕೆಯಲ್ಲಿ ಯಾವ ರೀತಿಯಲ್ಲಿ ಯೋಜನೆಯನ್ನು ಅನುಷ್ಠಾನವಾಗಿದೆ ಎಂದು ಸಾಮಾಜಿಕ ಪರಿಶೋಧನೆ ನಡೆಸಲಾಗಿತ್ತು.

ADVERTISEMENT

ಸಾಮಾಜಿಕ ಪರಿಶೋಧನೆ ಬಹಿರಂಗ ಸಭೆಯಲ್ಲಿ ಅಕ್ರಮ ಬಹಿರಂಗವಾಗುತ್ತಿದ್ದಂತೆ ಸಾಮಾಜಿಕ ಪರಿಶೋಧನೆ ಅಧಿಕಾರಿಗಳ ವಿರುದ್ಧವೇ ಲಂಚದ ಆರೋಪ ಕೇಳಿ ಬಂತು.

ಕಾಮಗಾರಿ ನಾಮಫಲಕ ಇಲ್ಲ. ತೋಟಗಾರಿಕೆ ಇಲಾಖೆಗೆ ಪುನಶ್ಚೇತನ ಕಾಮಗಾರಿಗೆ ನಿಯಮ ಮೀರಿ ಹಣ, ರೇಷ್ಮೆ ಇಲಾಖೆ ಅನುಷ್ಠಾನದಲ್ಲಿ ಕಡಿಮೆ ಸಸಿಗಳು, 15 ಕಾಮಗಾರಿಗಳಲ್ಲಿ ಸಾಮಗ್ರಿ ವೆಚ್ಚವನ್ನು ಫಲಾನುಭವಿಗಳಿಗೆ ನೀಡುವ ಬದಲು ವೆಂಡರ್ ಹಾಕಿ ಫಲಾನುಭವಿಗೆ ನೀಡದೆ ಅಕ್ರಮ ಎಸಗಲಾಗಿದೆ ಎಂದು ಸಭೆಯಲ್ಲಿ ಲೋಪದೋಷಗಳನ್ನು ಬಹಿರಂಗಪಡಿಸಿದರು.

ಸಭೆ ಅಧ್ಯಕ್ಷತೆಯನ್ನು ಶಿಕ್ಷಣ ಇಲಾಖೆ ಶಿಕ್ಷಕ ವಿರೇಂದ್ರನಾಯಕ್ ವಹಿಸಿದ್ದರು. ಸಭೆಯಲ್ಲಿ ವರದಿಯನ್ನು ಸಾಮಾಜಿಕ ಪರಿಶೋಧನೆ ಸಂಯೋಜಕಿ ಕಮಲಮ್ಮ ಹಾಗೂ ಸಿಬ್ಬಂದಿ ಸಭೆಯಲ್ಲಿ ಮಂಡಿಸಿದರು.

ಪಂಚಾಯಿತಿ ಅಧ್ಯಕ್ಷೆ ಶಿಲ್ಪ ಸೇರಿದಂತೆ ಪಂಚಾಯಿತಿ ಸದಸ್ಯರು, ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್, ಕಾರ್ಯದರ್ಶಿ ಮಹೇಶ್, ಪಂಚಾಯಿತಿ ಸಿಬ್ಬಂದಿ ಹಾಗೂ ಸಾರ್ವಜನಿಕರು ಸಭೆಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.