ರಾಮನಗರ: ಸೂರ್ಯ ಉದಯಿಸುವ ಮೊದಲೇ, ಮುಂಜಾನೆಯ ಬಿಸಿ ಬಿಸಿ ಚಹಾ ಸೇವಿಸುವ ಮುನ್ನವೇ ಬಹುತೇಕ ಓದುಗರಿಗೆ ದಿನಪತ್ರಿಕೆ ತಲುಪಿಸಬೇಕು. ಇದು ಸುಲಭದ ಕೆಲಸವಲ್ಲದಿದ್ದರೂ, ಪತ್ರಿಕೆ ಮುಟ್ಟಿಸುವ ಕಾಯಕವನ್ನು ಚಾಚೂ ತಪ್ಪದೆ ನಡೆಸುತ್ತಿರುವ ವರ್ಗವೊಂದಿದೆ. ಅದೇ ಪತ್ರಿಕಾ ವಿತರಕರ ವರ್ಗ.
ಇಬ್ಬನಿಯ ಹನಿ ಇನ್ನೂ ನಿಲ್ಲದ ಹೊತ್ತಿನ ಚುಮು ಚುಮು ಚಳಿ, ಮಳೆ–ಗಾಳಿ, ಬೀದಿ ನಾಯಿಗಳ ಹಾವಳಿ ಸೇರಿದಂತೆ ಹಲವು ಸವಾಲುಗಳನ್ನು ಮೆಟ್ಟಿ ಪತ್ರಿಕೆ ತಲುಪಿಸುವ ವಿತರಕರು, ನಮ್ಮ ನಡುವಣ ಕಾಯಕಯೋಗಿಗಳು. ಅವರಿಗೆ ವರ್ಷದಲ್ಲಿ ನಾಲ್ಕೇ ದಿನ ರಜೆ. ಓದುಗರು ಹಾಗೂ ಸುದ್ದಿಮನೆಯ ಕೊಂಡಿಯಾಗಿ ಕಾರ್ಯನಿರ್ವಹಿಸುವ ಪತ್ರಿಕಾ ವಿತರಕರ ಕೆಲಸವನ್ನು ಸ್ಮರಿಸುವ ‘ಪತ್ರಿಕಾ ವಿತರಕರ ದಿನ’ (ಸೆ. 4) ಇಂದು.
ಮಧ್ಯರಾತ್ರಿ ಮುದ್ರಣಾಲಯದಿಂದ ವಾಹನಗಳಲ್ಲಿ ಹೊರಡುವ ಪತ್ರಿಕೆಗಳು ಬೆಳಗಿನ ಜಾವ ನಗರ, ಪಟ್ಟಣ ಹಾಗೂ ಹಳ್ಳಿಗಳನ್ನು ತಲುಪುತ್ತವೆ. ನಸುಕಿನಲ್ಲಿ ತಮ್ಮೂರಿಗೆ ಬರುವ ಪತ್ರಿಕೆಗಳನ್ನು ಇಳಿಸಿಕೊಳ್ಳುವ ವಿತರಕರು ಬಸ್ ನಿಲ್ದಾಣ, ಅಂಗಡಿಗಳ ಎದುರು, ರಸ್ತೆ ಬದಿಯ ಬೀದಿ ದೀಪದ ಬೆಳಕಿನ ಕೆಳಗೆ ಪತ್ರಿಕೆಗಳ ಬಂಡಲ್‌ಗಳನ್ನು ಬಿಚ್ಚಿ ಜೋಡಿಸಿಕೊಳ್ಳುತ್ತಾರೆ.
ವಿತರಣೆಗೆ ಅನುಕೂಲವಾಗುವಂತೆ ಬಡಾವಣೆ ಮತ್ತು ಒಂದೊಂದು ರಸ್ತೆಯಲ್ಲಿರುವ ಓದುಗರ ಸಂಖ್ಯೆಗೆ ತಕ್ಕಂತೆ, ಪತ್ರಿಕೆಗಳನ್ನು ಸಣ್ಣ ಬಂಡಲ್‌ಗಳನ್ನಾಗಿ ಮಾಡಿಕೊಂಡು ತಮ್ಮ ಸೈಕಲ್ ಮತ್ತು ದ್ವಿಚಕ್ರ ವಾಹನಗಳಲ್ಲಿ ಇಟ್ಟುಕೊಂಡು, ಮನೆ–ಮನೆಗೆ ತಲುಪಿಸುತ್ತಾರೆ. ಮನೆ ಮಂದಿ ಕಣ್ಣುಜ್ಜಿಕೊಂಡು ಬಾಗಿಲು ತೆರೆದಾಗ, ಅವರಿಗೆ ಲೋಕದ ಸಮಾಚಾರಗಳನ್ನು ಹೊತ್ತ ಪತ್ರಿಕೆಗಳ ದರ್ಶನವಾಗುತ್ತದೆ.
‘ಬೆಳಗ್ಗಿನ ಸಿಹಿ ನಿದ್ರೆ ಬಿಟ್ಟು ಎದ್ದು ಕಾಯಕ ಶುರು ಮಾಡುವ ನಮಗೆ ಒಂದು ರೀತಿ ಹೆಮ್ಮೆ ಎನಿಸುತ್ತದೆ. ಜೊತೆಗೆ, ಒಂದಿಷ್ಟು ಸಮಸ್ಯೆಗಳೂ ಇವೆ. ಭದ್ರತೆ ಇಲ್ಲದ ಹಾಗೂ ರಜೆಯೇ ಇಲ್ಲದ ವೃತ್ತಿ ನಮ್ಮದು. ಕೆಲವೊಮ್ಮೆ ಮನೆಯಲ್ಲಿ ಯಾರಿಗಾದರೂ ಅನಾರೋಗ್ಯವಾದರೆ, ಊರಲ್ಲಿ ಸಾವು ಸಂಭವಿಸಿದರೂ, ನಮ್ಮ ಕಾಯಕ ನಿಲ್ಲಿಸುವಂತಿಲ್ಲ’ ಎನ್ನುತ್ತಾರೆ ರಾಮನಗರದ ಪತ್ರಿಕಾ ಏಜೆಂಟರಾದ ತ್ರಿಮೂರ್ತಿ.
‘ನಮ್ಮೆಲ್ಲ ದುಃಖ–ದುಮ್ಮಾನವನ್ನು ಅದುಮಿಟ್ಟುಕೊಂಡು ಪತ್ರಿಕೆ ತಲುಪಿಸುವ ಬದ್ಧತೆಗೆ ಕಾರಣ ನಮ್ಮ ಬಳಿ ಕೆಲಸ ಮಾಡುವ ಹುಡುಗರು. ಅವರೇ ನಮ್ಮ ನರನಾಡಿಗಳು. ಗಲ್ಲಿ ಗಲ್ಲಿ ತಿರುಗಿ ಪತ್ರಿಕೆಯನ್ನು ಮನೆಗೆ ಹಾಕುತ್ತಾರೆ. ಮಳೆ, ಗಾಳಿ, ಚಳಿ ಎನ್ನದೇ ಮನೆ ಮನೆಗೆ ಪತ್ರಿಕೆ ಹಂಚುವ ನಮಗೆ ಕೆಲ ಗ್ರಾಹಕರು ನಿಗದಿತ ಸಮಯಕ್ಕೆ ಹಣ ನೀಡದೆ ಸತಾಯಿಸುವವರೂ ಇದ್ದಾರೆ. ಕೆಲವರು ಗೌರವದಿಂದ ಕಂಡು ಹಣ ಕೊಟ್ಟು, ಪ್ರೀತಿಯ ಮಾತುಗಳನ್ನಾಡುತ್ತಾರೆ’ ಎಂದು ಪತ್ರಿಕಾ ವಿತರಣೆಯಯಲ್ಲಿ 24 ವರ್ಷಗಳ ಅನುಭವ ಹೊಂದಿರುವ ತ್ರಿಮೂರ್ತಿ ಅನುಭವ ಹಂಚಿಕೊಂಡರು.
ಜಗತ್ತಿನ ಸುದ್ದಿಗಳನ್ನು ಹೊತ್ತ ಪತ್ರಿಕೆಯನ್ನು ಓದುಗರಿಗೆ ತಲುಪಿಸುವುದರಲ್ಲಿ ತೃಪ್ತಿ ಇದೆ. 25 ವರ್ಷದಿಂದ ಈ ಕೆಲಸ ಮಾಡುತ್ತಿರುವ ನನ್ನನ್ನು ಜನ ಪೇಪರ್‌ನವರು ಎಂದು ಗುರುತಿಸುವಾಗ ಹೆಮ್ಮೆ ಎನಿಸುತ್ತದೆಶಿವಶಂಕರ್ ಕುದೂರು, ಪತ್ರಿಕಾ ವಿತರಕ ಮಾಗಡಿ ತಾಲ್ಲೂಕು
ಪತ್ರಿಕೆ ವಿತರಣೆ ಕೆಲಸ ಪವಿತ್ರವಾದುದು. ಬೆಳಗ್ಗಿನ ಜಾವ ಮನೆ ಮನೆಗೆ ಪತ್ರಿಕೆ ತಲುಪಿಸಿ ಮುಗಿಸಿದಾಗ ಜಗತ್ತಿನ ಸುದ್ದಿಯನ್ನು ಜನರಿಗೆ ಒದಗಿಸಿದ ಸಾರ್ಥಕ ಭಾವ ಮನಸ್ಸಿನಲ್ಲಿ ಮೂಡುತ್ತದೆ.ಎಸ್. ದರ್ಶನ್, ಪತ್ರಿಕಾ ವಿತರಕ ಚನ್ನಪಟ್ಟಣ
ಬೆಳಿಗ್ಗೆಯೇ ಎದ್ದು ಮನೆ ಮನೆಗೆ ಪೇಪರ್ ಹಾಕುವ ಕೆಲಸವು ನನ್ನನ್ನು ದೈಹಿಕವಾಗಿಯಷ್ಟೇ ಅಲ್ಲದೆ ಮಾನಸಿಕವಾಗಿಯೂ ಚನ್ನಾಗಿಟ್ಟಿದೆ. ‘ಪ್ರಜಾವಾಣಿ’ ವಿತರಕ ಎನ್ನಿಸಿಕೊಳ್ಳಲು ಖುಷಿಯಾಗುತ್ತದೆ.ಶಿವಪ್ರಸಾದ್, ಪತ್ರಿಕಾ ವಿತರಕ ದಾಳಿಂಬ ಕನಕಪುರ ತಾಲ್ಲೂಕು
ಪತ್ರಿಕೆ ತಲುಪಿಸುವ ವಿತರಕರು ಸುದ್ದಿ ವಾಹಕರಿದ್ದಂತೆ. ಸರ್ಕಾರ ನಮ್ಮ ಸೇವೆಯನ್ನು ಗುರುತಿಸಿ ವಿಮೆ ಸೌಲಭ್ಯ ಕಲ್ಪಿಸಬೇಕು. ಸರ್ಕಾರಿ ಬಸ್‌ನಲ್ಲಿ ಉಚಿತವಾಗಿ ಪ್ರಯಾಣಿಸಲು ಪಾಸ್ ನೀಡಬೇಕು.ಕಿರಣ್ ಕುಮಾರ್, ಪತ್ರಿಕಾ ವಿತರಕ ಹಾರೋಹಳ್ಳಿ
ಹುಡುಗರೇ ನರನಾಡಿಗಳು
ಏಜೆಂಟರಿಗೆ ಪೂರಕವಾಗಿ ಕೆಲಸ ಮಾಡುವವರು ಹುಡುಗರು. ಅವರಲ್ಲಿ ಬಹುತೇಕರು ವಿದ್ಯಾರ್ಥಿಗಳು. ಬೆಳಿಗ್ಗೆ ವ್ಯಾನ್ ಮೂಲಕ ನಿಗದಿತ ಸ್ಥಳಕ್ಕೆ ಪತ್ರಿಕೆಯ ಬಂಡಲ್ ಬರುತ್ತಿದ್ದಂತೆಯೇ ಅದನ್ನು ತೆಗೆದುಕೊಂಡು ರಸ್ತೆ ಬದಿ ಕೂತು ಪತ್ರಿಕೆಗಳನ್ನು ಪುರವಣಿಗಳ ಸಮೇತ ಜೋಡಿಸಿಟ್ಟುಕೊಳ್ಳುತ್ತಾರೆ. ಬ್ಯಾಗುಗಳಲ್ಲಿ ಪತ್ರಿಕೆಗಳನ್ನು ತುಂಬಿಕೊಂಡು ಸೈಕಲ್‌ಗೆ ನೇತು ಹಾಕಿಕೊಂಡು ಒಬ್ಬೊಬ್ಬರು ಒಂದೊಂದು ದಿಕ್ಕಿಗೆ ಹೊರಟು ಓದುಗರ ಮನೆ ತಲುಪಿಸುತ್ತಾರೆ.
‘ಬೆಳಿಗ್ಗೆ 4.30ರ ವೇಳೆಗೆ ಎದ್ದು ಬೆಳಗಿನ ಕರ್ಮಗಳನ್ನು ಮುಗಿಸಿ ಸೈಕಲ್‌ಗೆ ಬ್ಯಾಗ್ ನೇತು ಹಾಕಿಕೊಂಡು ಮನೆ ಬಿಟ್ಟರೆ ಪತ್ರಿಕಾ ವಾಹನ ಬರುವ ಸ್ಥಳಕ್ಕೆ ಸರಿಯಾಗಿ ಬಸ್ ನಿಲ್ದಾಣದಲ್ಲಿರುತ್ತೇವೆ. ಅಷ್ಟೊತ್ತಿಗಾಗಲೇ ನಮ್ಮ ಏಜೆಂಟ್ ಪತ್ರಿಕೆಗಳ ಬಂಡಲ್ ಇಳಿಸಿಕೊಂಡು ಪ್ರತ್ಯೇಕಿಸಿ ಇಟ್ಟಿರುತ್ತಾರೆ. ನಮ್ಮ ರೂಟ್‌ನ ಪತ್ರಿಕೆಗಳನ್ನು ಬ್ಯಾಗ್‌ಗೆ ಹಾಕಿಕೊಂಡು ಮನೆಗಳಿಗೆ ಹಾಕುತ್ತೇವೆ. ಮಳೆಗಾಲದಲ್ಲಿ ಪತ್ರಿಕೆಗಳು ನೆನೆಯದಂತೆ ಪ್ಲಾಸ್ಟಿಕ್‌ನಲ್ಲಿ ಸುತ್ತಿ ಜೋಪಾನ ಮಾಡಿಕೊಂಡು ಮನೆಗಳಿಗೆ ತಲುಪಿಸುತ್ತೇವೆ’ ಎನ್ನುತ್ತಾರೆ ಪತ್ರಿಕೆ ಹಾಕುವ ರಾಮನಗರ ಶಾನು ಕುಮಾರ್.
‘ಹೆಮ್ಮೆಯ ಕಾಯಕವೆಂಬ ತೃಪ್ತಿ’
‘ಜನಮನದ ವಾಣಿಯಾಗಿ ನಾಡಿನ ಸಾಕ್ಷಿಪ್ರಜ್ಞೆಯಾಗಿರುವ ‘ಪ್ರಜಾವಾಣಿ’ ಜೊತೆಗಿನ ನನ್ನ ನಂಟು ಶುರುವಾಗಿ 24 ವರ್ಷಗಳಾಗಿವೆ. ಜನರನ್ನು ಬೌದ್ಧಿಕವಾಗಿ ಶ್ರೀಮಂತರನ್ನಾಗಿಸುವ ಹಾಗೂ ಚಿಂತನೆಗೆ ಹಚ್ಚುವ ಈ ಪತ್ರಿಕೆಯ ವಿತರಣೆ ಕೆಲಸ ಮಾಡುತ್ತಿರುವುದಕ್ಕೆ ಹೆಮ್ಮೆಯ ಜೊತೆಗೆ ತೃಪ್ತಿಯ ಭಾವವಿದೆ. ಈ ವೃತ್ತಿಗೆ ಪೂರಕವಾಗಿ ಜೊತೆಗಿರುವ ಹುಡುಗರು ನರನಾಡಿಗಳಾಗಿ ಕೆಲಸ ಮಾಡುತ್ತಾರೆ. ಎಂತಹ ಕಠಿಣ ಪರಿಸ್ಥಿತಿಯಲ್ಲೂ ಅವರು ದಿನಪತ್ರಿಕೆಯನ್ನು ಮನೆಗೆ ತಲುಪಿಸುವ ಕಾಯಕ ತಪ್ಪಿಸುವುದಿಲ್ಲ. ನಿತ್ಯ ಒಂದು ರೀತಿಯಲ್ಲಿ ತಪಸ್ಸಿನಂತೆ ನಾವೆಲ್ಲರೂ ತಂಡವಾಗಿ ಪತ್ರಿಕಾ ವಿತರಣೆ ಮಾಡಿಕೊಂಡು ಬರುತ್ತಿದ್ದೇವೆ. ಪತ್ರಿಕೆ ವಿತರಿಸುವ ಹಾಗೂ ಮನೆ ಮನೆಗೆ ತಲುಪಿಸುವ ಹುಡುಗರ ಬದುಕಿಗೆ ಸರ್ಕಾರ ಭದ್ರತೆ ಒದಗಿಸುವಂತಹ ಸೌಲಭ್ಯಗಳನ್ನು ಕಲ್ಪಿಸಬೇಕು’. - ತ್ರಿಮೂರ್ತಿ ಪತ್ರಿಕಾ ವಿತರಕ ರಾಮನಗರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.