ಬಿಡದಿ (ರಾಮನಗರ): ಪಟ್ಟಣದ ಛತ್ರ ಬೀದಿಯಲ್ಲಿರುವ ಬಿಜಿಎಸ್ ಪಿಯು ಕಾಲೇಜಿನಲ್ಲಿ ‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್’ ದಿನಪತ್ರಿಕೆಗಳ ಸಹಯೋಗದಲ್ಲಿ ಗುರುವಾರ ‘ದಿನಪತ್ರಿಕೆಗಳ ಮಹತ್ವ’ ಕುರಿತು ಕಾರ್ಯಾಗಾರ ಜರುಗಿತು.
ಕಾಲೇಜಿನ ಪ್ರಾಂಶುಪಾಲ ಮುತ್ತುರಾಜು ಮಾತನಾಡಿ, ‘ವಿದ್ಯಾರ್ಥಿಗಳು ನಿತ್ಯ ದಿನಪತ್ರಿಕೆಗಳನ್ನು ಓದುವುದರಿಂದ ಪಠ್ಯ ಮೀರಿದ ಸಾಮಾನ್ಯಜ್ಞಾನ ವೃದ್ಧಿಯಾಗಲಿದೆ. ದಿನಪತ್ರಿಕೆಗಳನ್ನು ಯಾರು ತಪ್ಪದೆ ಓದುತ್ತಾರೊ, ಅವರು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಉತ್ತಮವಾಗಿ ಎದುರಿಸಿ ಯಶಸ್ವಿಯಾಗುತ್ತಾರೆ’ ಎಂದು ಅಭಿಪ್ರಾಯಪಟ್ಟರು.
‘ದಿನಪತ್ರಿಕೆಗಳಿಂದ ಮಾತ್ರ ಲೋಕದ ಆಗುಹೋಗುಗಳ ನಿಖರ ಮಾಹಿತಿ ಪಡೆಯಲು ಸಾಧ್ಯ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಪಠ್ಯದ ಜ್ಞಾನದ ಜೊತೆಗೆ ಸಾಮಾನ್ಯ ಜ್ಞಾನವೂ ಅತ್ಯವಶ್ಯಕ. ಹಾಗಾಗಿ, ವಿದ್ಯಾರ್ಥಿಗಳು ದಿನಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ತಮ್ಮ ಮನೆಗೆ ದಿನಪತ್ರಿಕೆ ತರಿಸಿಕೊಳ್ಳಲು ಸಾಧ್ಯವಾಗದಿದ್ದರೆ, ಕಾಲೇಜಿನ ಗ್ರಂಥಾಲಯ ಅಥವಾ ಸಾರ್ವಜನಿಕ ಗ್ರಂಥಾಲಯಕ್ಕೆ ಹೋಗಿ ಪತ್ರಿಕೆ ಓದಬೇಕು’ ಎಂದು ಸಲಹೆ ನೀಡಿದರು.
‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್’ ಪ್ರಸರಣ ವಿಭಾಗದ ಡಿಜಿಎಂ ಜಗನ್ನಾಥ ಜೋಯಿಸ್ ಮಾತನಾಡಿ, ‘ವಿದ್ಯಾರ್ಥಿಗಳು ಕೇವಲ ಪಠ್ಯಕ್ಕೆ ಸೀಮಿತವಾಗದೆ, ಪಠ್ಯೇತರ ಜ್ಞಾನವನ್ನು ಬೆಳೆಸಿಕೊಳ್ಳಬೇಕು. ಅದಕ್ಕೆ ದಿನಪತ್ರಿಕೆ ಓದುವುದನ್ನು ಬಿಟ್ಟರೆ ಬೇರೆ ಆಯ್ಕೆ ಇಲ್ಲ. ಅದರಲ್ಲೂ ನಿಖರ ಹಾಗೂ ವಿಶ್ವಾಸಾರ್ಹ ಸುದ್ದಿಗೆ ಹೆಸರಾಗಿರುವ ಕನ್ನಡದ ‘ಪ್ರಜಾವಾಣಿ’ ಮತ್ತು ಇಂಗ್ಲಿಷ್‌ನ ‘ಡೆಕ್ಕನ್ ಹೆರಾಲ್ಡ್’ ಪತ್ರಿಕೆಗಳನ್ನು ಓದಬೇಕು. ಇವೆರಡೂ ಪತ್ರಿಕೆಗಳು ಸ್ಪರ್ಧಾತ್ಮಕ ಪರೀಕ್ಷೆ ಆಕಾಂಕ್ಷಿಗಳ ನೆಚ್ಚಿನ ಸಂಗಾತಿಗಳಾಗಿವೆ’ ಎಂದರು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಎರಡೂ ಪತ್ರಿಕೆಗಳನ್ನು ವಿತರಿಸಲಾಯಿತು. ಪ್ರಸರಣ ವಿಭಾಗದ ಶಂಕರ ಹಿರೇಮಠ, ಕಾಲೇಜಿನ ಬೋಧಕರು, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.