ADVERTISEMENT

ನನಗೊಂದು ಅವಕಾಶ ಕೊಡಿ: ಕೊನೆಯ ಉಸಿರು ಇರೋವರೆಗೂ ಜೊತೆಗಿರುವೆ; ನಿಖಿಲ್‌

ಹಳ್ಳಿಗಳಲ್ಲಿ ನಿಖಿಲ್ ಭರ್ಜರಿ ಪ್ರಚಾರ; ಹೊತ್ತು ಕುಣಿದ ಕಾರ್ಯಕರ್ತರು

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2024, 16:18 IST
Last Updated 27 ಅಕ್ಟೋಬರ್ 2024, 16:18 IST
ಚನ್ನಪಟ್ಟಣ ತಾಲ್ಲೂಕಿನ ಮಾಕಳಿ ಗ್ರಾಮದಲ್ಲಿ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಮತ ಯಾಚಿಸಿದರು
ಚನ್ನಪಟ್ಟಣ ತಾಲ್ಲೂಕಿನ ಮಾಕಳಿ ಗ್ರಾಮದಲ್ಲಿ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಮತ ಯಾಚಿಸಿದರು   

ಚನ್ನಪಟ್ಟಣ: ‘ಈ ಉಪ ಚುನಾವಣೆ ಕುಮಾರಣ್ಣನ ನಾಯಕತ್ವದ ಅಗ್ನಿಪರೀಕ್ಷೆ. ಇಲ್ಲಿ ನಿಖಿಲ್‌ ನೆಪವಷ್ಟೆ. ಹಿಂದಿನಂತೆ ಈಗಲೂ ನೀವು ನಮಗೆ ಆಶೀರ್ವಾದ ಮಾಡಬೇಕು. ನಿಮಗೆ ಕೈ ಜೋಡಿಸಿ ಪಾದ ಮುಟ್ಟಿ ಬೇಡಿಕೊಳ್ಳುವೆ. ನನಗೊಂದು ಅವಕಾಶ ಕೊಡಿ. ಕೊನೆಯ ಉಸಿರಿರುವವರೆಗೆ ನಿಮ್ಮ ಜೊತೆಗಿರುತ್ತೇನೆ....’

ತಾಲ್ಲೂಕಿನ ವಿವಿಧ ಹಳ್ಳಿಗಳಲ್ಲಿ ಭಾನುವಾರ ಪ್ರಚಾರ ನಡೆಸಿದ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರು, ಮತದಾರರಿಗೆ ಮಾಡಿದ ಮನವಿ ಇದು. ಬೆಳಿಗ್ಗೆಯಿಂದ ಸಂಜೆವರೆಗೆ ಶಾಸಕರು ಮತ್ತು ಮುಖಂಡರ ದಂಡಿನೊಂದಿಗೆ ಹಳ್ಳಿಗಳಲ್ಲಿ ತಿರುಗಾಡಿ ಪ್ರಚಾರ ಮಾಡಿ ಅವರು ಮತ ಯಾಚಿಸಿದರು.

‘ನಾನು ಈ ಜಿಲ್ಲೆಯಲ್ಲಿ ಜನಿಸದಿದ್ದರೂ, ತಾತ ಮತ್ತು ತಂದೆ ಮೂಲಕ ಹಲವು ವರ್ಷಗಳ ನಂಟಿದೆ. ರಾಜ್ಯ ಸುತ್ತಿ ಪಕ್ಷ ಸಂಘಟನೆ ಮಾಡಿಕೊಂಡಿರುವೆ ಎನ್ನುತ್ತಿದ್ದ ನಾನು, ಕಳೆದೆರಡು ಚುನಾವಣೆಯಲ್ಲಿ ಸೋತರೂ ನಿಮ್ಮ ಒತ್ತಡಕ್ಕಾಗಿ ಬಂದು ಸ್ಪರ್ಧಿಸಿದ್ದೇನೆ. ನನಗೆ ಕುತಂತ್ರದ ರಾಜಕಾರಣ ಗೊತ್ತಿಲ್ಲ. ನೀವೇ ಕೈ ಹಿಡಿದು ಮುನ್ನಡೆಸಬೇಕು’ ಎಂದು ಮನವಿ ಮಾಡಿದರು.

ADVERTISEMENT

‘ಇಗ್ಗಲೂರು ಜಲಾಶಯ ನಿರ್ಮಿಸಿದ ದೇವೇಗೌಡರು ಶಾಶ್ವತ ನೀರಾವರಿಯ ಕೊಡುಗೆ ನೀಡಿದರು. ಕುಮಾರಣ್ಣ ಸಾಕಷ್ಟು ಅನುದಾನ ತಂದು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಿದರು. ನಮ್ಮ ಕುಟುಂಬದವರು ಕಣ್ಣೀರು ಹಾಕೋದು ಬಡವರು, ರೈತರು ಹಾಗೂ ಈ ನಾಡಿನ ಪರವಾಗಿಯೇ ಹೊರತು ಸ್ವಂತಕ್ಕಲ್ಲ. ಕಷ್ಟಕ್ಕೆ ಮಿಡಿಯುವವರಿಗೆ ಕಣ್ಣೀರು ಬರುತ್ತದೆ’ ಎಂದರು.

‘ಕುಮಾರಣ್ಣನನ್ನು ಎರಡನೇ ಸಲ ಮುಖ್ಯಮಂತ್ರಿ ಮಾಡಿದ ಕೀರ್ತಿ ಚನ್ನಪಟ್ಟಣ ಜನತೆಗೆ ಸಲ್ಲಬೇಕು. ಕಾಂಗ್ರೆಸ್‌ನಿಂದ ಸ್ಪರ್ಧಿಸಿರುವ ವ್ಯಕ್ತಿ ಚುನಾವಣೆಗೆ ನಿಲ್ಲಬೇಕೆಂದು ಮುಂಚೆ ನಮ್ಮನ್ನು ಕೇಳಿಕೊಂಡಾಗ, ನಮ್ಮ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ. ಆಮೇಲೆ ರಾಷ್ಟ್ರೀಯ ನಾಯಕರ ಜೊತೆ ಮಾತನಾಡೋಣ ಎಂದಿದ್ದರು. ನಂತರ ಬೆಳವಣಿಗೆ ಎಲ್ಲರಿಗೂ ಗೊತ್ತಿದೆ. ಚುನಾವಣೆ ಬೇಡ ಅನ್ನುತ್ತಿದ್ದ ನಾನು, ನಿಮ್ಮ ಒತ್ತಾಯಕ್ಕಾಗಿ ಬಂದಿದ್ದೇನೆ’ ಎಂದು ಹೇಳಿದರು.

ಮಾಜಿ ಶಾಸಕ ಎಂ.ಸಿ. ಅಶ್ವಥ್ ಊರಾದ ತಾಲ್ಲೂಕಿನ ಮಾಕಳಿ ಸೇರಿದಂತೆ ನಾಯಿದೊಳ್ಳೆ, ಎನ್‌.ಆರ್. ಪುರ, ಹೊಸಹಳ್ಳಿ, ಪಟೇಲರದೊಡ್ಡಿ, ಅಬ್ಬೂರು, ನಾಗಾವರ ಸೇರಿದಂತೆ ಸುಮಾರು 15 ಹಳ್ಳಿಗಳಲ್ಲಿ ನಿಖಿಲ್ ಪ್ರಚಾರ ಮಾಡಿದರು. ಶಾಸಕರಾದ ಎ. ಮಂಜು, ವಿಧಾನ ಪರಿಷತ್ ಸದಸ್ಯ ಜವರಾಯಿಗೌಡ, ಮಾಜಿ ಶಾಸಕ ಸುರೇಶ್ ಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ಎ. ಮಂಜುನಾಥ್, ಬಿಜೆಪಿ ಜಿಲ್ಲಾಧ್ಯಕ್ಷ ಆನಂದಸ್ವಾಮಿ ಸೇರಿ ಸ್ಥಳೀಯ ಮುಖಂಡರು ನಿಖಿಲ್ ಪ್ರಚಾರಕ್ಕೆ ಸಾಥ್ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.