ಮಾಗಡಿ: ಆಧುನಿಕ ಯುಗದಲ್ಲಿ ಮನುಷ್ಯನ ಮನಸ್ಸು ಚಂಚಲವಾಗಿದ್ದು, ನಾವೆಲ್ಲರೂ ಸದಾ ಕಾಲ ದೇವರ ಕಡೆ ಮನಸ್ಸನ್ನು ಒಯ್ಯಬೇಕಿದೆ ಎಂದು ಆದಿಚುಂಚನಗಿರಿ ಮಠಾಧ್ಯಕ್ಷ ಡಾ. ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು.
ತಾಲ್ಲೂಕಿನ ದೋಣಕುಪ್ಪೆ ಗ್ರಾಮದಲ್ಲಿ ಬುಧವಾರ ಚಾಮುಂಡೇಶ್ವರಿ ದೇವಿಯ ಜೀವನೋದ್ಧಾರ ಪ್ರತಿಷ್ಠಾಪನ ಮಂಡಲ ಪೂಜಾ ಮಹೋತ್ಸವದಲ್ಲಿ ಸಾನಿಧ್ಯ ವಹಿಸಿ ಅವರು ಮಾತನಾಡಿದರು,
ನಾವು ಯಾವುದೇ ರಂಗದಲ್ಲಿ ಇದ್ದರೂ ಕೂಡ ದೇವರ ಸ್ಮರಣೆಯನ್ನು ಮಾಡಬೇಕು. ಆಗ ಮಾತ್ರ ನಮಗೆ ಸುಖ ಪ್ರಾಪ್ತಿಯಾಗಲಿದೆ. ಸಂಸಾರದ ಜಂಜಾಟದಲ್ಲಿ ಮುಂದೆ ಹೋಗಲು ಆಗುತ್ತಿಲ್ಲ. ದೇವರು, ದೇಹವೆಂಬ ಹಣತೆಗೆ ಎಣ್ಣೆ ಹಾಕಿ, ದೀಪ ಹಚ್ಚಿ ಭೂಮಿಗೆ ಕಳಿಸಿದ್ದಾನೆ. ನಾವು ಅದನ್ನು ಸರಿಯಾದ ಕಡೆ ಇರುವ ರೀತಿ ನೋಡಿಕೊಳ್ಳಬೇಕು. ಅದನ್ನು ಬಿಟ್ಟು ಬೇರೆ ಕಡೆ ನಾವು ಹೋಗುತ್ತಿದ್ದು ದೇವರನ್ನು ಮರೆಯುತ್ತಿದ್ದೇವೆ. ಇದು ಒಳ್ಳೆಯದಲ್ಲ. ಜ್ಞಾನ ಎಂಬ ಶ್ರದ್ಧೆಯನ್ನು ಕೊಡುತ್ತಿರುವುದೇ ಮಠ ಮಾನ್ಯಗಳು. ಮಠಮಾನ್ಯಗಳಿಗೆ ಯಾವುದೇ ರೀತಿ ಕಳಂಕ ಬರದ ರೀತಿ ಭಕ್ತಾದಿಗಳು ನಡೆದುಕೊಂಡಾಗ ಮಾತ್ರ ಗುರುಗಳಿಗೆ ಹೆಸರು ಬರುತ್ತದೆ ಎಂದರು.
ಮನುಷ್ಯ ಜಾತಿ ತಾನೊಂದೇ ವಲಂ ಎಂಬ ಆದಿಕವಿ ಪಂಪನ ಆಶಯವನ್ನು ಸದಾ ನೆನೆಯಬೇಕು. ಸೌಹಾರ್ದ, ಏಕತೆಯ ಮೂಲಕ ದುಡಿಮೆಯಲ್ಲಿ ದೇವರನ್ನು ಕಾಣಬೇಕು. ದುಡಿದು, ಹಂಚಿ ತಿನ್ನುವುದರಿಂದ ಮನುಕುಲದ ಏಳಿಗೆಯಾಗಲಿದೆ. ಮೇಲುಕೀಳು ಎಂಬುದು ಸರಿಯಲ್ಲ ಎಂದು ಹೇಳಿದರು.
ಶಾಸಕ ಎಚ್.ಸಿ.ಬಾಲಕೃಷ್ಣ ಮಾತನಾಡಿ, ಒತ್ತಡದ ಜೀವನದಲ್ಲಿ ದೇವಸ್ಥಾನಗಳು ಅತ್ಯವಶ್ಯಕವಾಗಿ ಬೇಕಾಗಿದ್ದು ಮಾನಸಿಕ ನೆಮ್ಮದಿ ಸಿಗುವ ತಾಣ ಎಂದರೆ ಅದು ದೇವಸ್ಥಾನವಾಗಿದೆ. ಹಣ, ಅಧಿಕಾರ ಇದ್ದರೂ ಕೂಡ ನೆಮ್ಮದಿ ಇಲ್ಲದೆ ಇದ್ದರೆ ಜೀವನದಲ್ಲಿ ಸುಖಪಡಲು ಆಗುವುದಿಲ್ಲ ಎಂದರು.
ಮಂಡಲ ಪೂಜೆ ಅಂಗವಾಗಿ ಮಹಾಗಣಪತಿ ಪೂಜೆ, ಕಳಶಾರಾಧನೆ, ಗಣಪತಿ ಹೋಮ, ಕಳಶ ವೃದ್ಧಿ, ದೇವಿಯ ಮೂಲ ವಿಗ್ರಹಕ್ಕೆ ಪಂಚಾಮೃತ ಅಭಿಷೇಕ, ಪುಷ್ಪಲಂಕಾರ, ಮಹಾಪೂರ್ಣಾಹುತಿ ನಡೆಯಿತು.
ಸಿಎನ್‌ಎಸ್ ಶಾಲೆಯ ಮುಖ್ಯಶಿಕ್ಷಕ ಧನಂಜಯ, ಮುಖಂಡರಾದ ದೋಣಕುಪ್ಪೆ ರಾಮಣ್ಣ, ಮಲ್ಲಿಕಾರ್ಜುನ ಹಾಗೂ ಗ್ರಾಮಸ್ಥರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.