ರಾಮನಗರ: ತಾಲ್ಲೂಕಿನ ಸುಗ್ಗನಹಳ್ಳಿಯಲ್ಲಿ ಕಲ್ಲುಗಣಿಗಾರಿಕೆ ನಡೆಸಲು ಕೋರಿರುವ ಜಾಗಕ್ಕೆ ಅನುಮತಿ ನೀಡಬಾರದೆಂದು ಸುಗ್ಗನಹಳ್ಳಿ ಮತ್ತು ಅಕ್ಕಪಕ್ಕದ ಗ್ರಾಮಸ್ಥರು ತಹಶೀಲ್ದಾರ್ ಅವರಿಗೆ ಒತ್ತಾಯಿಸಿದ್ದಾರೆ.
ಸುಗ್ಗನಹಳ್ಳಿ ಬಳಿಯ ಕಲ್ಲುಗಣಿಗಾರಿಕೆಗೆ ಗುರುತಿಸುವ ಸ್ಥಳ ಮಹಜರಿಗೆ ತಹಶೀಲ್ದಾರ್ ತೇಜಸ್ವಿನಿ ಮತ್ತು ಗಣಿ ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಆಗಮಿಸಿದ ವೇಳೆಯಲ್ಲಿ ಗ್ರಾಮಸ್ಥರು ಪ್ರತಿಭಟಿಸಿ ಸ್ಥಳದಲ್ಲಿನ ನೈಜ ವರದಿ ನೀಡುವಂತೆ ಒತ್ತಾಯಿಸಿದರು.
ಗಣಿಗಾರಿಕೆ ಸ್ಥಳದ ಸುತ್ತ 15 ಗ್ರಾಮಗಳಿವೆ. ಉದ್ದೇಶಿದ ಸ್ಥಳದಲ್ಲಿ ಸಮೀಪದಲ್ಲಿ 300 ರಿಂದ 400 ಎಕರೆ ಪ್ರದೇಶದಲ್ಲಿ ಮಾವು ಬೆಳೆಯಲಾಗಿದೆ. ಮಾವು ಬೆಳೆಯಿಂದ ಗ್ರಾಮ ಜನ ಆದಾಯ ಗಳಿಸುತ್ತಿದ್ದಾರೆ. 50 ರಿಂದ 60 ಎಕರೆ ಜಮೀನಿನಲ್ಲಿ ಅಡಿಕೆ, ಮತ್ತು ರೇಷ್ಮೆ ಬೆಳೆ ಬೆಳೆಯುತ್ತಿರುತ್ತಾರೆ. ಅಲ್ಲದೆ 30 ರಿಂದ 40 ಅಡಿಗಳಷ್ಟು ದೂರದಲ್ಲಿ ಎಂಟು ಮನೆಗಳಿವೆ. ಇಲ್ಲಿಂದ 10 ರಿಂದ 15 ಮಕ್ಕಳು ದಿನ ಶಾಲೆಗೆ ಓಡಾಡುತ್ತಿರುತ್ತಾರೆ ಎಂದು ತಿಳಿಸಿದರು.
ಇಲ್ಲಿ ಗಣಿಗಾರಿಕೆ ಅವಕಾಶ ನೀಡಿದರೆ ಧೂಳಿನಿಂದ, ಶಬ್ದ ಮತ್ತು ವಾಹನ ದಟ್ಟಣೆಯಿಂದ ವಾತಾವರಣ ಕಲುಷಿತಗೊಳ್ಳುತ್ತದೆ. ಮಾವು, ಮತ್ತು ರೇಷ್ಮೆ ಬೆಳೆಗಳು ಹಾಳಾಗುತ್ತವೆ. ಇಳುವರಿ ಬರುವುದಿಲ್ಲ. ವಾತಾವರಣ ಕಲುಷಿತಗೊಂಡು ಜನ ಹಾಗೂ ಜನವಾರುಗಳ ಆರೋಗ್ಯಕ್ಕೆ ಕುತ್ತು ಬರಲಿದೆ ಎಂದು ಹೇಳಿದರು.
ಗಣಿಗಾರಿಕೆ ಉದ್ದೇಶಿತ ಸ್ಥಳದ ಸನಿಹ ಪ್ರಸಿದ್ದ್ಧ ಣಹದ್ದು ಪಕ್ಷಿಧಾಮ ರಾಮದೇವರ ಬೆಟ್ಟ, ಮಂಚನಬೆಲೆ ಜಲಾಶಯಗಳಿವೆ. ಹುಲ್ತಾರ್ ರಾಜ್ಯ ಅರಣ್ಯ ಪ್ರದೇಶವಿದೆ. ಇದರಿಂದ ಕಾಡುಪ್ರಾಣಿಗಳು ಗಣಿಗಾರಿಕೆಯಿಂದ ತೊಂದರೆ ಅನುಭವಿಸಬೇಕಾಗುತ್ತದೆ ಎಂದರು.
ತಹಶೀಲ್ದಾರ್ ತೇಜಸ್ವಿನಿ ಅವರು ಗ್ರಾಮಸ್ಥರಿಂದ ಮನವಿ ಸ್ವೀಕರಿಸಿ, ವಾಸ್ತವ ವರದಿ ನೀಡುವ ಭರವಸೆ ನೀಡಿದರು.
ಗ್ರಾ.ಪಂ ಅಧ್ಯಕ್ಷೆ ಅರ್ಪಿತಾ, ಉಪಾಧ್ಯಕ್ಷ ಚಿಕ್ಕಸ್ವಾಮಿ, ವಕೀಲ ರವಿ, ಎಸ್.ಆರ್. ರಾಮಕೃಷ್ಣಯ್ಯ, ಲೋಕೇಶ್, ಬೈರಪ್ಪ, ಶಿವರಾಮು, ಸುರೇಶ್‍ಬಾಬು, ರವಿಚಂದ್ರೇಗೌಡ, ಗೋಪಾಲಕೃಷ್ಣ, ವೀರಬಸವಯ್ಯ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.