ಚನ್ನಪಟ್ಟಣ(ರಾಮನಗರ): ಉಪ ಚುನಾವಣೆ ಮತದಾನಕ್ಕೆ ಇನ್ನೂ ಎರಡು ದಿನ ಬಾಕಿ ಇರುವಾಗಲೇ ಪಟ್ಟಣದ ಅಲ್ಪಸಂಖ್ಯಾತರ ಪ್ರದೇಶದಲ್ಲಿ ಹಣ ಹಂಚಿಕೆ ಆರೋಪ ಕೇಳಿಬಂದಿದೆ.
ಉರ್ದು ಭಾಷೆಯಲ್ಲಿ ಮುದ್ರಿತವಾದ ಕವರ್‌ನಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಕರಪತ್ರದ ಜೊತೆ ₹500 ಮುಖಬೆಲೆಯ ಎರಡು ನೋಟುಗಳಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಎರಡೂ ಪಕ್ಷಗಳ ಕರಪತ್ರಗಳ ಜೊತೆಗಿರುವ ನೋಟಿನ ಚಿತ್ರ, ನೋಟಿನ ಸಂಖ್ಯೆ ಒಂದೇ ಆಗಿದೆ. ಈ ವಿಷಯ ಉಭಯ ಪಕ್ಷಗಳ ಕಾರ್ಯಕರ್ತರ ನಡುವೆ ಕೆಸರೆರಚಾಟಕ್ಕೂ ಕಾರಣವಾಗಿದೆ.
ಮತ್ತೊಂದೆಡೆ ವಸತಿ ಸಚಿವ ಜಮೀರ್ ಅಹಮದ್ ಖಾನ್ ಶನಿವಾರ ರಾತ್ರಿ ಪಟ್ಟಣದ ಅಲ್ಪಸಂಖ್ಯಾತರ ಪ್ರದೇಶಗಳಲ್ಲಿ ನಡೆಸಿದ ಪ್ರಚಾರದ ವೇಳೆ ಬಹಿರಂಗವಾಗಿ ಹಣ ನೀಡುವ ಮೂಲಕ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಪ್ರಚಾರದ ವೇಳೆ ಜಮೀರ್ ಹಣ ನೀಡುವ ವಿಡಿಯೊವನ್ನು ತನ್ನ ‘ಎಕ್ಸ್’ ಖಾತೆಯಲ್ಲಿ ಪೋಸ್ಟ್ ಮಾಡಿರುವ ಜೆಡಿಎಸ್, ‘ಕಾಂಗ್ರೆಸ್ ಸರ್ಕಾರ ತನ್ನ ಆಡಳಿತ ಯಂತ್ರ ಮತ್ತು ಅಧಿಕಾರ ದುರ್ಬಳಕೆ ಮಾಡಿಕೊಂಡು ಚುನಾವಣೆಯಲ್ಲಿ ಮತದಾರರಿಗೆ ಆಮಿಷವೊಡ್ಡುತ್ತಿದೆ. ಪ್ರಚಾರದ ವೇಳೆ ಸಾರ್ವಜನಿಕವಾಗಿ ಸಚಿವ ಜಮೀರ್ ಅಹಮದ್ ಗರಿ ಗರಿ ನೋಟುಗಳನ್ನು ಕೊಟ್ಟು ಜನರಿಗೆ ಮತ ಹಾಕುವಂತೆ ಒತ್ತಡ ಹೇರಿದ್ದಾರೆ’ ಎಂದು ಆರೋಪಿಸಿದೆ.
‘ಚುನಾವಣಾ ಆಯೋಗವು ಕಾಂಗ್ರೆಸ್ ನಾಯಕರ ಹಣ ಹಂಚಿಕೆಯನ್ನು ಗಂಭೀರವಾಗಿ ಪರಿಗಣಿಸಿ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡು ಸಚಿವರ ಮೇಲೆ ಸೂಕ್ತ ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿದೆ.
‘ಪಟ್ಟಣದ ಮೆಹದಿನಗರದಲ್ಲಿ ವ್ಯಕ್ತಿಯೊಬ್ಬ ಸ್ಥಳೀಯರೊಬ್ಬರಿಗೆ ₹500 ಮುಖಬೆಲೆಯ ಎರಡು ನೋಟುಗಳನ್ನು ಉರ್ದು ಭಾಷೆಯ ಕವರ್‌ನಲ್ಲಿ ಜೆಡಿಎಸ್ ಅಭ್ಯರ್ಥಿಯ ಕರಪತ್ರದೊಂದಿಗೆ ಕೊಟ್ಟು ಹೋಗಿರುವ ದೂರು ಬಂದಿದೆ. ಅದೇ ನೋಟು ಮತ್ತು ಕವರ್ ಕಾಂಗ್ರೆಸ್ ಅಭ್ಯರ್ಥಿಯ ಕರಪತ್ರದ ಜೊತೆಗಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಮಾಹಿತಿ ಬಂದಿದೆ. ಸಚಿವ ಜಮೀರ್ ಅವರು ಪ್ರಚಾರದ ವೇಳೆ ಹಣ ಹಂಚಿರುವ ದೂರು ಬಂದಿದೆ. ಎರಡೂ ಘಟನೆಗಳ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುವುದು’ ಎಂದು ಚುನಾವಣಾ ಅಧಿಕಾರಿಗಳು ಮತ್ತು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.