ADVERTISEMENT

ಕುದೂರು: ಅವಧಿ ಮುಗಿದ ಅಂಗಡಿ ಮಳಿಗೆ ಹರಾಜಿಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 4 ಜುಲೈ 2024, 14:21 IST
Last Updated 4 ಜುಲೈ 2024, 14:21 IST
ಕುದೂರು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಈಚೆಗೆ ಪಂಚಾಯಿತಿ ಸದಸ್ಯರ ಸಾಮಾನ್ಯ ಸಭೆ ನಡೆಯಿತು
ಕುದೂರು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಈಚೆಗೆ ಪಂಚಾಯಿತಿ ಸದಸ್ಯರ ಸಾಮಾನ್ಯ ಸಭೆ ನಡೆಯಿತು   

ಕುದೂರು: ಇಲ್ಲಿನ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಈಚೆಗೆ ಪಂಚಾಯಿತಿ ಸದಸ್ಯರ ಸಾಮಾನ್ಯ ಸಭೆ ನಡೆಯಿತು.

ಈ ವೇಳೆ ಪಿಡಿಒ ಪುರುಷೋತ್ತಮ್ ಮಾತನಾಡಿ, ಸರ್ಕಾರದ ಆದೇಶದಂತೆ ಮೂರು ವರ್ಷ ಅವಧಿ ಮುಗಿದಿರುವ ಗ್ರಾಮ ಪಂಚಾಯಿತಿ ಮಳಿಗೆಗಳನ್ನು ಹರಾಜು ಹಾಕಬೇಕು. ಪಂಚಾಯಿತಿ ಮಳಿಗೆಗಳನ್ನು ಕೆಲವರು ಹರಾಜು ಕೂಗಿ ಬೇರೆಯವರಿಗೆ ಮೂರು ಪಟ್ಟು ಹೆಚ್ಚು ಬಾಡಿಗೆಗೆ ನೀಡುತ್ತಿದ್ದಾರೆ ಎಂಬ ದೂರುಗಳು ಬಂದಿವೆ. ಅಂತಹ ಮಳಿಗೆ ಹಾಗೂ ಬಾಡಿಗೆ ಹಣವನ್ನು ಸರಿಯಾಗಿ ನೀಡದ ಮಳಿಗೆಗಳನ್ನು ಹರಾಜು ಹಾಕಿ ಎಂದು ಸೂಚಿಸಿದರು.

ಶವ ಸಾಗಿಸುವ ವಾಹನಕ್ಕೆ ಯಾವುದೇ ದಾಖಲೆಗಳು ಇಲ್ಲ. ದಾಖಲೆ ಸರಿಯಾಗುವವರೆಗೂ ಶವ ಸಂಸ್ಕಾರದ ವಾಹನವನ್ನು ಚಲಾಯಿಸಬಾರದು. ನಾಗರಿಕರು ತ್ಯಾಜ್ಯ ವಿಲೇವಾರಿಯಲ್ಲಿ ಹಸಿ ಕಸ, ಒಣ ಕಸ ವಿಂಗಡಿಸದೆ ಕಸದ ವಾಹನಕ್ಕೆ ನೀಡಿದರೆ ಅದನ್ನು ಇನ್ನು ಮುಂದೆ ತೆಗೆದುಕೊಳ್ಳದಂತೆ ವಾಹನ ಚಾಲಕರಿಗೆ ತಿಳಿಸಿದರು.

ADVERTISEMENT

ಕಸ ವಿಲೇವಾರಿ ಮಾಡಲು ಇನ್ನು ಮುಂದೆ ಪ್ರತಿ ಮನೆಗೆ ₹30, ಅಂಗಡಿಗಳಿಗೆ ₹100 ಹಣ ಪಡೆಯಬೇಕು. ಒಂದು ತಿಂಗಳಲ್ಲಿ ಎಲ್ಲಾ ವಾರ್ಡ್‌ಗಳ ಚರಂಡಿ ಸ್ವಚ್ಛಗೊಳಿಸದಿದ್ದರೆ ಟೆಂಡರ್ ಕೊಡಲಾಗುವುದು ಎಂದು ಪೌರಕಾರ್ಮಿಕರಿಗೆ ತಿಳಿಸಿದರು.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರಮ್ಯಾ ಜ್ಯೋತಿ ಮಾತನಾಡಿ, ಗ್ರಾಮ ಪಂಚಾಯಿತಿ ಮಳಿಗೆಗಳಿಂದ ಒಟ್ಟು ₹12 ಲಕ್ಷ ಬಾಡಿಗೆ ಬಾಕಿ ಇದೆ. ಅಂತವರಿಗೆ ನೋಟಿಸ್ ನೀಡಿ ಒಮದು ತಿಂಗಳೊಳಗೆ ಬಾಡಿಗೆ ಹಣ ಕಟ್ಟಬೇಕು. ಇಲ್ಲದಿದ್ದರೆ ಅಂತಹ ಮಳಿಗೆಗಳನ್ನು ಹರಾಜು ಹಾಕಲಾಗುವುದು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.

ಗ್ರಾಮ ಪಂಚಾಯಿತಿ ಸದಸ್ಯೆ ಲತಾ ಮಾತನಾಡಿ, ಗ್ರಂಥಾಲಯದ ಸಿಬ್ಬಂದಿ ಸರಿಯಾದ ಸಮಯಕ್ಕೆ ಬೀಗ ತೆರೆಯುತ್ತಿಲ್ಲ. ಅದರ ಬಗ್ಗೆ ಕ್ರಮವಹಿಸಿ. ಕೆಲ ಶುದ್ಧ ಕುಡಿಯುವ ನೀರಿನ ಘಟಕಗಳು ಬೇಗ ಬಾಗಿಲು ಹಾಕುತ್ತಾರೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಹಾಗಾಗಿ ಘಟಕಗಳಲ್ಲಿ ಟೈಮಿಂಗ್ಸ್ ಬರೆಯಿಸಿ, ಸರಿಯಾಗಿ ಕಾರ್ಯನಿರ್ವಹಿಸಲು ತಿಳಿಸಲು ಸೂಚಿಸಿದರು.

ಕುಸುಮಾ, ವೆಂಕಟೇಶ್, ಹನುಮಂತರಾಯಪ್ಪ, ಬಾಲರಾಜು, ಗಿರೀಶ್, ರಮೇಶ್, ಅನಂತ್ ನಾರಾಯಣ, ಜಯರಾಮ್ ಸೇರಿದಂತೆ ಗ್ರಾಮ ಪಂಚಾಯಿತಿ ಸದಸ್ಯರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.