ADVERTISEMENT

ರಾಮನಗರ: ಜಿಂದಾಲ್‌ಗೆ ಜಮೀನು ನೀಡದಂತೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2021, 5:52 IST
Last Updated 30 ಏಪ್ರಿಲ್ 2021, 5:52 IST
ಜಿಲ್ಲಾಧಿಕಾರಿ ಕಚೇರಿ ಮುಂಭಾಗ ವಾಟಾಳ್ ನಾಗರಾಜ್ ಪ್ರತಿಭಟನೆ ನಡೆಸಿದರು
ಜಿಲ್ಲಾಧಿಕಾರಿ ಕಚೇರಿ ಮುಂಭಾಗ ವಾಟಾಳ್ ನಾಗರಾಜ್ ಪ್ರತಿಭಟನೆ ನಡೆಸಿದರು   

ರಾಮನಗರ: ಜಿಂದಾಲ್ ಕಂಪನಿಗೆ ಜಮೀನು ಮಾರಾಟ ಮಾಡದಂತೆ ಒತ್ತಾಯಿಸಿ ಕನ್ನಡಪರ ಹೋರಾಟಗಾರ ವಾಟಾಳ್‌ ನಾಗರಾಜ್‌ ಬೆಂಬಲಿಗರೊಂದಿಗೆ ಗುರುವಾರ ಜಿಲ್ಲಾ ಕಚೇರಿ ಸಂಕೀರ್ಣದ ಮುಂಭಾಗ ಪ್ರತಿಭಟನೆ ನಡೆಸಿದರು.

ಈ ಸಂದರ್ಭ ಮಾತನಾಡಿದ ವಾಟಾಳ್, ‘ಕೋವಿಡ್ ಸೋಂಕಿತರಿಗೆ ಬೆಡ್ ಹಾಗೂ ಆಮ್ಲಜನಕ ವ್ಯವಸ್ಥೆ ಮಾಡಿ ಪ್ರಾಣ ಉಳಿಸಬೇಕು. ಜತೆಗೆ ಬಳ್ಳಾರಿ ಜಿಲ್ಲೆ ತೋರಣಗಲ್‌ನಲ್ಲಿರುವ 3,677 ಎಕರೆ ಜಮೀನನ್ನು ಜಿಂದಾಲ್ ಕಂಪನಿಗೆ ಯಾವ ಕಾರಣಕ್ಕೂ ಮಾರಾಟ ಮಾಡಬಾರದು’ ಎಂದು ಒತ್ತಾಯಿಸಿದರು.

‘ನಾಡಿನ ಜನರಲ್ಲಿ ಧೈರ್ಯ ಬರಬೇಕಾದರೆ ಮುಖ್ಯಮಂತ್ರಿ ಅವರು ಪ್ರತಿ ಜಿಲ್ಲೆಗೂ ಭೇಟಿ ನೀಡಬೇಕು. ರಸ್ತೆ ಸಂಚಾರದ ಬದಲು ಹೆಲಿಕಾಪ್ಟರ್‌‌ನಲ್ಲಿಯೇ ಜಿಲ್ಲೆಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಬೇಕು. ಸೋಂಕಿನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರ ನೆರವೇರಿಸಲು ಸಹ ಜಾಗ ಸಿಗುತ್ತಿಲ್ಲ. ಕರ್ನಾಟಕಕ್ಕೆ ಬೆಂಕಿ ಬಿದ್ದು ಹೊತ್ತಿ ಉರಿಯುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಜಿಂದಾಲ್ ಕಂಪನಿಗೆ ಭೂಮಿ ಮಾರಾಟ ಮಾಡುವ ಅಗತ್ಯ ಏನಿತ್ತು. ಸರ್ಕಾರ ಎಷ್ಟು ಕೋಟಿ ಲೂಟಿ ಹೊಡೆದಿರಬಹುದು’ ಎಂದು ಪ್ರಶ್ನಿಸಿದರು.

ADVERTISEMENT

ಈ ಹಿಂದೆ ಜಿಂದಾಲ್ ಕಂಪನಿಗೆ ಭೂಮಿ ಮಾರಿದರೆ ಸತ್ಯಾಗ್ರಹ ಕೂರುತ್ತೇವೆಂದು ಯಡಿಯೂರಪ್ಪ ಹೇಳುತ್ತಿದ್ದರು. ಆದರೀಗ ಅವರೇ ಜಮೀನು ಮಾರಾಟ ಮಾಡುತ್ತಿದ್ದಾರೆ. ಜಿಂದಾಲ್‌ಗೆ ಭೂಮಿ ಮಾರಿದರೆ ಅರ್ಧ ಬಳ್ಳಾರಿಯನ್ನೇ ಮಾರಿದಂತೆ ಆಗುತ್ತದೆ. ಇದರ ವಿರುದ್ಧ ತೀವ್ರ ಹೋರಾಟ ನಡೆಸುತ್ತೇವೆ ಎಂದು ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದರು.

ಸಚಿವ ಉಮೇಶ್ ಕತ್ತಿ ನಿಜವಾಗಲು ಹುಚ್ಚ. ಅಂತಹ ವ್ಯಕ್ತಿಯನ್ನು ಸಚಿವರನ್ನಾಗಿ ಮಾಡಿಕೊಂಡಿದ್ದಾರೆ. ಅವರು ತಮ್ಮ ಹೇಳಿಕೆಗೆ ಕ್ಷಮಾಪಣೆ ಕೇಳಿದಷ್ಟಕ್ಕೆ ಬಿಡಲಾಗದು. ಸಚಿವ ಸ್ಥಾನದಿಂದ ರಾಜೀನಾಮೆ ಪಡೆಯಬೇಕು ಎಂದು ಒತ್ತಾಯಿಸಿದರು.
ಕರುನಾಡ ಸೇನೆ ರಾಜ್ಯ ಉಪಾಧ್ಯಕ್ಷ ಎಂ. ಜಗದೀಶ್ , ಜಿಲ್ಲಾ ಅಧ್ಯಕ್ಷ ಜಯಕುಮಾರ್, ಕೆ. ಜಯರಾಮು, ಎಂ.ಡಿ. ಶಿವಕುಮಾರ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.