ADVERTISEMENT

ಹೇಮಾವತಿ ಎಕ್ಸ್‌ಪ್ರೆಸ್ ಕೆನಾಲ್‌ಗೆ ವಿರೋಧಪಕ್ಷದವರು ಕೈಜೋಡಿಸಲಿ: ಬಾಲಕೃಷ್ಣ

​ಪ್ರಜಾವಾಣಿ ವಾರ್ತೆ
Published 17 ಮೇ 2024, 6:20 IST
Last Updated 17 ಮೇ 2024, 6:20 IST
<div class="paragraphs"><p>ಎಚ್.ಸಿ. ಬಾಲಕೃಷ್ಣ</p></div>

ಎಚ್.ಸಿ. ಬಾಲಕೃಷ್ಣ

   

ಮಾಗಡಿ (ಕುದೂರು): ‘ಮಾಗಡಿ ನನ್ನ ಒಂದು ಕಣ್ಣು ಎನ್ನುವ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರು ಆ ಕಣ್ಣನ್ನು ತೆರೆಯಲಿ’ ಎಂದು ಶಾಸಕ ಎಚ್.ಸಿ. ಬಾಲಕೃಷ್ಣ ಸವಾಲು ಹಾಕಿದರು.

ಪಟ್ಟಣಕ್ಕೆ ಮಂಗಳವಾರ ಖಾಸಗಿ ಕಾರ್ಯಕ್ರಮಕ್ಕೆ ಭೇಟಿ ನೀಡಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ‘ಹೇಮಾವತಿ ಎಕ್ಸ್‌ಪ್ರೆಸ್‌ ಕೆನಾಲ್ ನಿರ್ಮಾಣಕ್ಕೆ ತುಮಕೂರಿನ ಬಿಜೆಪಿ ಶಾಸಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಮಾಗಡಿ ನನ್ನದೊಂದು ಕಣ್ಣು ಎನ್ನುವ ಎಚ್.ಡಿ.ಕುಮಾರಸ್ವಾಮಿ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು, ಮಾಜಿ ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ, ಮಾಜಿ ಶಾಸಕ ಎ.ಮಂಜುನಾಥ್ ಅವರಿಗೆ ತಾಲ್ಲೂಕಿನ ಬಗ್ಗೆ ಬದ್ದತೆ ಇದ್ದರೆ ಎಕ್ಸ್‌ಪ್ರೆಸ್‌ ಕೆನಾಲ್ ಕಾಮಗಾರಿ ಪ್ರಾರಂಭಕ್ಕೆ ನಮ್ಮೊಂದಿಗೆ ಸಹಕರಿಸಿ ಮಾಗಡಿಗೆ ಹೇಮಾವತಿ ನೀರು ತರಲು ಕೈಜೋಡಿಸಲಿ. ತಮ್ಮ ಶಕ್ತಿ ತೋರಿಸಿ ವಿರೋಧ ವ್ಯಕ್ತಪಡಿಸುವ ಬಿಜೆಪಿ ನಾಯಕರ ಬಾಯಿ ಮುಚ್ಚಿಸಿ ಸುಮ್ಮನಿರುವಂತೆ ಹೇಳಲಿ’ ಎಂದು ಜೆಡಿಎಸ್, ಬಿಜೆಪಿ ನಾಯಕರಿಗೆ ಸವಾಲು ಹಾಕಿದರು.

ADVERTISEMENT

‘ಮಾಗಡಿಗೆ ನಿಗದಿ ಪಡಿಸಿರುವ ಹೇಮಾವತಿ ನೀರನ್ನು ಪಡೆಯಲು ತುಮಕೂರಿನ ನಾಯಕರು ಏಕೆ ಕಾಮಗಾರಿಗೆ ತೊಂದರೆ ನೀಡುತ್ತಿದ್ದಾರೆ. ಬಿಜೆಪಿ ಹೈಕಮಾಂಡ್ ಮೇಲೆ ಜೆಡಿಎಸ್-ಬಿಜೆಪಿ ನಾಯಕರು ಒತ್ತಡ ಹೇರಿ ಸುಮ್ಮನಿರಿಸಿದರೆ ಆಗ ಮಾಗಡಿ ಬಗ್ಗೆ ಅವರಿಗೆ ಗೌರವ, ಅಭಿಮಾನ, ಇಚ್ಛಾಶಕ್ತಿ ಇದೆ ಎಂದು ತೋರಿಸುತ್ತದೆ’ ಎಂದರು.

ಎಚ್.ಡಿ. ದೇವೆಗೌಡ, ಎಚ್.ಡಿ. ಕುಮಾರಸ್ವಾಮಿ, ಡಾ.ಸಿ.ಎನ್. ಆಶ್ವತ್ಥ ನಾರಾಯಣ, ಎ.ಮಂಜುನಾಥ್ ಅವರು ವಿಧಾನ ಪರಿಷತ್ ಪದವಿ ಕ್ಷೇತ್ರದ ಸೀಟು ಬಿಡಿಸಿಕೊಂಡಂತೆ, ಹೇಮಾವತಿ ಎಕ್ಸ್‌ಪ್ರೆಸ್‌ ಕೆನಾಲ್ ವಿಚಾರದ ಬಗ್ಗೆ ಮೌನವಹಿಸದೆ ದೆಹಲಿಯ ಹೈಕಮಾಂಡ್‌ಗೆ ಒತ್ತಡ ಹಾಕಿ ಶಕ್ತಿ ಪ್ರದರ್ಶನ ತೋರಿಸಲಿ. ಲೋಕಸಭೆ ಚುನಾವಣೆಯಲ್ಲಿ ಹೊಂದಾಣಿಕೆ ಮಾಡಿಕೊಂಡಂತೆ ಎರಡೂ ಪಕ್ಷಗಳ ನಾಯಕರು ತಮ್ಮ ಪ್ರಭಾವ ತೋರಿಸಬೇಕು. ಇಲ್ಲದಿದ್ದರೆ ಅವರ ಗೋಸುಂಬೆತನ ಜನರಿಗೆ ಗೊತ್ತಾಗಲಿದೆ ಎಂದು ಕುಟುಕಿದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಂಸದ ಡಿ.ಕೆ.ಸುರೇಶ್ ಹಾಗೂ ನನಗೆ ಮಾಗಡಿ ಬಗ್ಗೆ ಇಚ್ಛಾಶಕ್ತಿ ಇರುವುದರಿಂದ ಎಲ್ಲರೂ ಸೇರಿ ಹೇಮಾವತಿ ಎಕ್ಸ್‌ಪ್ರೆಸ್‌ ಕೆನಾಲ್ ಕಾಮಗಾರಿ ಆರಂಭಿಸಿದ್ದೇವೆ. ಜೆಡಿಎಸ್-ಬಿಜೆಪಿ ನಾಯಕರಿಗೆ ತಾಕತ್ತಿದ್ದರೆ ಎಕ್ಸ್‌ಪ್ರೆಸ್‌ ಕೆನಾಲ್ ಉಳಿಸಲಿ. ಇಲ್ಲದಿದ್ದರೆ ನಾವು ಉಳಿಸಿಕೊಳ್ಳುತ್ತೇವೆ. ಆಗ ಜೆಡಿಎಸ್, ಬಿಜೆಪಿ ನಾಯಕರು ರಾಜಕೀಯ ನಿವೃತ್ತಿ ಹೊಂದಲಿ ಎಂದು ಬಾಲಕೃಷ್ಣ ಸವಾಲು ಹಾಕಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.