ADVERTISEMENT

ಚನ್ನಪಟ್ಟಣ ಉಪ ಚುನಾವಣೆ | ಕಾರ್ಯಕರ್ತರ ‘ಸಮನ್ವಯ’ದತ್ತ ನಾಯಕರ ಚಿತ್ತ

ಮೈತ್ರಿ– ಪಕ್ಷಾಂತರದಿಂದ ಬದಲಾದ ಚಿತ್ರಣ; ಚುನಾವಣೆಗೆ ಅಣಿಗೊಳಿಸಲು ಸರಣಿ ಸಭೆ

ಓದೇಶ ಸಕಲೇಶಪುರ
Published 27 ಅಕ್ಟೋಬರ್ 2024, 3:47 IST
Last Updated 27 ಅಕ್ಟೋಬರ್ 2024, 3:47 IST
ಕಾಂಗ್ರೆಸ್, ಜೆಡಿಎಸ್, ಬಿಜೆಪಿ
ಕಾಂಗ್ರೆಸ್, ಜೆಡಿಎಸ್, ಬಿಜೆಪಿ   

ರಾಮನಗರ: ಚನ್ನಪಟ್ಟಣ ಉಪ ಚುನಾವಣೆಯ ನಾಮಪತ್ರ ಸಲ್ಲಿಕೆ ಮುಗಿಯುತ್ತಿದ್ದಂತೆ, ಕಾಂಗ್ರೆಸ್ ಮತ್ತು ಜೆಡಿಎಸ್–ಬಿಜೆಪಿ ನಾಯಕರು ಇದೀಗ, ಕಾರ್ಯಕರ್ತರ ನಡುವೆ ಸಮನ್ವಯತೆ ಸಾಧಿಸುವತ್ತ ಚಿತ್ತ ಹರಿಸಿದ್ದಾರೆ. ಜಿಲ್ಲಾ ಪಂಚಾಯಿತಿ ಕ್ಷೇತ್ರದ ಮಟ್ಟದಲ್ಲಿ ಸರಣಿ ಸಮನ್ವಯ ಸಭೆಗಳನ್ನು ನಡೆಸುತ್ತಾ ಚುನಾವಣೆಗೆ ಅಣಿಗೊಳಿಸುತ್ತಿದ್ದಾರೆ.

ಹಿಂದಿನ ಎರಡು ವಿಧಾನಸಭಾ ಚುನಾವಣೆಗಳಲ್ಲಿರದ ಮೈತ್ರಿ ಹಾಗೂ ಪಕ್ಷಾಂತರವು, ಕಾರ್ಯಕರ್ತರ ನಡುವೆ ಸಮನ್ವಯ ಸಾಧಿಸಿ ಚುನಾವಣೆ ಎದುರಿಸಬೇಕಾದ ಅನಿವಾರ್ಯತೆಗೆ ಅಭ್ಯರ್ಥಿಗಳನ್ನು ಸಿಲುಕಿಸಿದೆ. ಅದಕ್ಕಾಗಿ ತಮ್ಮ ಪಕ್ಷದ ನಾಯಕರು, ಜನಪ್ರತಿನಿಧಿಗಳು ಹಾಗೂ ಮುಖಂಡರನ್ನು ಅಖಾಡಕ್ಕಿಳಿಸಿದ್ದಾರೆ.

ಪರಿಸ್ಥಿತಿ ಭಿನ್ನ: 2018 ಮತ್ತು 2023ರ ಚುನಾವಣೆಯಲ್ಲಿ ಬಿಜೆಪಿಯಿಂದ ಕಣಕ್ಕಿಳಿದಿದ್ದ ಸಿ.ಪಿ. ಯೋಗೇಶ್ವರ್ ಮತ್ತು  ಜೆಡಿಎಸ್‌ನ ಎಚ್‌.ಡಿ. ಕುಮಾರಸ್ವಾಮಿ ನಡುವಣ ನೇರ ಹಣಾಹಣಿಯಲ್ಲಿ ಕುಮಾರಸ್ವಾಮಿ ಗೆದ್ದಿದ್ದರು. ಕಾಂಗ್ರೆಸ್ ಅಭ್ಯರ್ಥಿ ನೆಪಮಾತ್ರಕ್ಕೆ ಇರುತ್ತಿದ್ದರು.

ADVERTISEMENT

ಉಪ ಚುನಾವಣೆಯು ಕಳೆದರಡು ಚುನಾವಣೆಗಳಿಗಿಂತ ಭಿನ್ನವಾಗಿದೆ. ಯೋಗೇಶ್ವರ್ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರೆ, ಜೆಡಿಎಸ್ ಅಭ್ಯರ್ಥಿ ನಿಖಿಲ್‌ ಜೊತೆಗೆ ಬಿಜೆಪಿ ಸಖ್ಯವಿದೆ.

ಮುಖಂಡರಲ್ಲಿ ಆತಂಕ: ‘ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಡಿ.ಕೆ ಸಹೋದರರು ಸ್ಥಳೀಯ ಬಿಜೆಪಿ– ಜೆಡಿಎಸ್‌ ಮುಖಂಡರ ದೊಡ್ಡ ದಂಡನ್ನು ಕಾಂಗ್ರೆಸ್‌ಗೆ ಕರೆತಂದಿದ್ದರು. ಅವರಲ್ಲಿ ಹಲವರು ಯೋಗೇಶ್ವರ್ ವಿರುದ್ಧ ಚುನಾವಣೆ ಮಾಡಿದವರು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಸಿಪಿವೈ ಕಾಂಗ್ರೆಸ್‌ಗೆ ಬಂದಿರುವುದರಿಂದ, ‘ಪಕ್ಷದೊಳಗೆ ಮುಂದೆ ನಮ್ಮ ಗತಿ ಏನು?’ ಎಂಬ ಆತಂಕ ಅವರನ್ನು ಕಾಡುತ್ತಿದೆ’ ಎನ್ನುತ್ತಾರೆ ಪಕ್ಷದ ಸ್ಥಳೀಯ ಮುಖಂಡರೊಬ್ಬರು.

‘ಯೋಗೇಶ್ವರ್ ಕಾಂಗ್ರೆಸ್‌ ಸೇರ್ಪಡೆ ಅನಿರೀಕ್ಷಿತ. ಕಡೆ ಗಳಿಗೆವರೆಗೆ ಯಾರಿಗೂ ಸುಳಿವು ಬಿಡದೆ ಪಕ್ಷಕ್ಕೆ ಸೇರಿಸಿಕೊಂಡಿರುವುದಕ್ಕೆ ಕಾಂಗ್ರೆಸ್ಸಿನ ಕೆಲವರಿಗೆ ಬೇಸರವಿದ್ದು, ಅಸಮಾಧಾನವನ್ನೂ ಹೊರಹಾಕಿದ್ದಾರೆ. ಈಗ ಅವರೆಲ್ಲರ ಜೊತೆ ಸಮನ್ವಯ ಸಾಧಿಸಿ ಚುನಾವಣೆ ಎದುರಿಸಲು ಡಿ.ಕೆ. ಸುರೇಶ್ ನೇತೃತ್ವದಲ್ಲಿ ನಾಯಕರು ಸಭೆ ನಡೆಸುತ್ತಾ, ಮುಖಂಡರು ಮತ್ತು ಕಾರ್ಯಕರ್ತರ ಮನಸ್ಸುಗಳನ್ನು ಜೋಡಿಸುತ್ತಿದ್ದಾರೆ’ ಎಂದರು.

ಮತ ಕೈ ತಪ್ಪದಂತೆ ಎಚ್ಚರ: ಜೆಡಿಎಸ್‌ನಿಂದ ಸ್ಪರ್ಧಿಸಿರುವ ನಿಖಿಲ್‌ಗೆ ಈ ಚುನಾವಣೆಯಲ್ಲಿ ಸಿಕ್ಕಿರುವ ಸಖ್ಯವು ಅನುಕೂಲದ ಜೊತೆಗೆ, ಅನಾನುಕೂಲವೂ ಆಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಬಿಜೆಪಿ ಕಾರಣಕ್ಕಾಗಿ ಅಹಿಂದ ಮತಗಳು ತಮಗೆ ಕೈ ಕೊಡುವ ಆತಂಕವಿದೆ. ಅದಕ್ಕಾಗಿ, ಈ ಸಮುದಾಯಗಳ ನಾಯಕರನ್ನು ಅಖಾಡಕ್ಕಿಳಿಸಿ ಅವರೊಂದಿಗೆ ಸಮನ್ವಯ ಸಾಧಿಸುವ ಕೆಲಸ ನಡೆಯುತ್ತಿದೆ.

‘ಅತಿ ಕಡಿಮೆ ಇರುವ ತನ್ನ ಸಾಂಪ್ರದಾಯಿಕ ಮತಗಳ ಜೊತೆಗೆ ಹಿಂದುಳಿದ ವರ್ಗಗಳ ಮತಗಳನ್ನು ಸೆಳೆದು, ನಿಖಿಲ್‌ಗೆ ಶಕ್ತಿ ತುಂಬುವಲ್ಲಿ ಪಕ್ಷ ಕಾರ್ಯೋನ್ಮುಖವಾಗಿದೆ. ಯೋಗೇಶ್ವರ್ ವಿರುದ್ಧ ಪಕ್ಷದ್ರೋಹ, ಪಕ್ಷಾಂತರದ ಟೀಕೆಗಳ ಜೊತೆಗೆ ಹಿಂದುತ್ವ ವಿಷಯವನ್ನು ಸಹ ಮುನ್ನೆಲೆಗೆ ತರುವ ಸಾಧ್ಯತೆ ಇದೆ’ ಎಂದು ಬಿಜೆಪಿ ಮುಖಂಡರೊಬ್ಬರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.