ಕನಕಪುರ (ರಾಮನಗರ): ಬಾಕಿ ವೇತನ ನೀಡುವಂತೆ ಒತ್ತಾಯಿಸಿ ಪೌರ ಕಾರ್ಮಿಕರಿಬ್ಬರು ಮೈ ಮೇಲೆ ಮಲ ಸುರಿದುಕೊಂಡು ಪ್ರತಿಭಟನೆ ನಡೆಸಿದ ಎರಡು ದಿನಗಳ ನಂತರ ಕಲ್ಲಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಎ. ಶ್ರೀನಿವಾಸ್ ಅವರನ್ನು ಗುರುವಾರ ಅಮಾನತು ಮಾಡಲಾಗಿದೆ.
ಈ ಘಟನೆ ಕುರಿತು ವರದಿ ನೀಡುವಂತೆ ಜಿಲ್ಲಾ ಪಂಚಾಯಿತಿ ಸಿಇಒ ದಿಗ್ವಿಜಯ್ ಬೋಡ್ಕೆ ಅವರು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗೆ ಸೂಚನೆ ನೀಡಿದ್ದರು. ಗುರುವಾರ ವರದಿ ಕೈ ಸೇರಿದ ಬೆನ್ನಲ್ಲೇ ಈ ಆದೇಶ ಹೊರಬಿದ್ದಿದೆ.
ಬಾಕಿ ವೇತನ ಪಾವತಿಸದೆ ನಿರ್ಲಕ್ಷ್ಯ ತೋರಿ, ಕಾರ್ಮಿಕರನ್ನು ಸತಾಯಿಸಿದ ಆರೋಪದ ಮೇಲೆ ಪಿಡಿಒ ಶ್ರೀನಿವಾಸ್ ಅವರನ್ನು ಅಮಾನತುಗೊಳಿಸಿರುವುದಾಗಿ ಸಿಇಒ ತಿಳಿಸಿದ್ದಾರೆ.
ಪಂಚಾಯಿತಿಯಲ್ಲಿ ಐದು ವರ್ಷದಿಂದ ಸ್ವಚ್ಛತೆ ಕೆಲಸ ಮಾಡುತ್ತಿದ್ದ ಪೌರ ಕಾರ್ಮಿಕರಾದ ಎನ್. ಸುರೇಶ್ ಮತ್ತು ವಿ. ರಂಗಯ್ಯ ಅವರ 14 ತಿಂಗಳ ವೇತನ ಬಾಕಿ ಉಳಿಸಿಕೊಳ್ಳಲಾಗಿತ್ತು.
ವೇತನಕ್ಕಾಗಿ ಪಿಡಿಒಗಳಿಗೆ ಮನವಿ ಮಾಡಿ ಹೈರಾಣಾಗಿದ್ದ ಕಾರ್ಮಿಕರು ಮಂಗಳವಾರ ಗ್ರಾಮ ಪಂಚಾಯಿತಿ ಕಚೇರಿ ಎದುರು ಮೈಮೇಲೆ ಮಲ ಸುರಿದುಕೊಂಡು ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆ ನಂತರ ಬಾಕಿ ವೇತನ ಪಾವತಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.