ADVERTISEMENT

ಕೋವಿಡ್‌ ನಿಯಮ ಸಡಿಲಿಕೆ: ಚಿತ್ರಮಂದಿರದತ್ತ ಸುಳಿಯದ ಪ್ರೇಕ್ಷಕ

ಕೋವಿಡ್‌ ನಿಯಮ ಸಡಿಲಿಕೆ ನಡುವೆಯೂ ಆಸನಗಳು ಖಾಲಿಖಾಲಿ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2021, 15:52 IST
Last Updated 5 ಫೆಬ್ರುವರಿ 2021, 15:52 IST
ರಾಮನಗರದ ಶಾನ್‌ ಚಿತ್ರಮಂದಿರ
ರಾಮನಗರದ ಶಾನ್‌ ಚಿತ್ರಮಂದಿರ   

ರಾಮನಗರ: ಚಿತ್ರಮಂದಿರಗಳ ಆಸನ ಸಾಮರ್ಥ್ಯದ ಸಂಪೂರ್ಣ ಬಳಕೆಗೆ ಸರ್ಕಾರ ಅವಕಾಶ ನೀಡಿದ್ದರೂ ಪ್ರೇಕ್ಷಕ ಮಾತ್ರ ಥಿಯೇಟರ್‌ನತ್ತ ಸುಳಿಯುತ್ತಿಲ್ಲ.

ಶುಕ್ರವಾರ ಕೆಲ ಚಿತ್ರಗಳು ತೆರೆ ಕಂಡಿದ್ದು, ಹೊಸ ಸಿನಿಮಾದ ನೆಪದಲ್ಲಿ ಆದರೂ ಪ್ರೇಕ್ಷಕರು ಸುಳಿಯಬಹುದು ಎನ್ನುವ ಲೆಕ್ಕಾಚಾರ ಚಿತ್ರಮಂದಿರಗಳ ಮಾಲೀಕರು ಹಾಗೂ ಸಿನಿಮಾ ಮಂದಿಯ ನಿರೀಕ್ಷೆ ಆಗಿತ್ತು. ಆದರೆ ಈ ದಿನವೂ ಹೆಚ್ಚಿನ ಮಂದಿ ಇತ್ತ ಹೆಜ್ಜೆ ಹಾಕಲಿಲ್ಲ.

ಕೋವಿಡ್ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈವರೆಗೆ ಕೇವಲ ಶೇ 50ರಷ್ಟು ಪ್ರೇಕ್ಷಕರ ಪ್ರವೇಶಕ್ಕೆ ಮಾತ್ರ ಅವಕಾಶ ನೀಡಿತ್ತು. ಆದರೆ ಈ ನಿರ್ಧಾರದ ವಿರುದ್ಧ ಚಿತ್ರರಂಗದ ಮಂದಿ ಸಿಡಿದೆದ್ದಿದ್ದು, ಸರ್ಕಾರದ ಈ ನಡೆಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಶೇ 100 ರಷ್ಟು ಪ್ರೇಕ್ಷಕರ ಪ್ರವೇಶಕ್ಕೆ ಸರ್ಕಾರ ಕೆಲ ದಿನದ ಹಿಂದಷ್ಟೇ ಹಸಿರು ನಿಶಾನೆ ತೋರಿತ್ತು.

ADVERTISEMENT

ಜಿಲ್ಲೆಯ ಚಿತ್ರಮಂದಿರಗಳು 500–600 ಆಸನ ಸಾಮರ್ಥ್ಯ ಹೊಂದಿವೆ. ಇವುಗಳ ಪೈಕಿ ಶುಕ್ರವಾರ ಹೆಚ್ಚಿನ ಚಿತ್ರಮಂದಿರಗಳಲ್ಲಿ ನೂರರಷ್ಟು ಜನರೂ ಇರಲಿಲ್ಲ. ಮೊದಲೆರಡು ಪ್ರದರ್ಶನಗಳಿಗೆ ಕಾಲೇಜು ವಿದ್ಯಾರ್ಥಿಗಳು ಬಂದಿದ್ದರು. ಆದರೆ ಸಂಜೆ ಪ್ರದರ್ಶನಗಳಲ್ಲಿ ಪ್ರೇಕ್ಷಕರ ಕೊರತೆ ಎದ್ದು ಕಂಡಿತು. ದೊಡ್ಡ ನಟರ ಚಿತ್ರಗಳು ಬಿಡುಗಡೆ ಆಗಿ ಜನರನ್ನು ಆಕರ್ಷಿಸಿದಲ್ಲಿ ಮಾತ್ರ ಜನರು ಇತ್ತ ಬರಬಹುದು ಎಂದು ಚಿತ್ರಮಂದಿರದ ಸಿಬ್ಬಂದಿ ಅಭಿಪ್ರಾಯ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.