ಹಾರೋಹಳ್ಳಿ: ಪೆರಿಯಾರ್ ರಾಮಸ್ವಾಮಿ ನಾಯ್ಕರ್ ಅವರು ಸನಾತನ ಧರ್ಮ ಮತ್ತು ದೇವರನ್ನು ಸಂಪೂರ್ಣವಾಗಿ ತಿರಸ್ಕರಿಸಿ ಪ್ರತ್ಯೇಕ ದ್ರಾವಿಡ ನಾಡು ಕಟ್ಟಲು ಪ್ರತಿಪಾದಿಸಿದರು ಎಂದು ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ನಾಗೇಶ್ ಹೇಳಿದರು.
ಹಾರೋಹಳ್ಳಿ ತಾಲ್ಲೂಕಿನ ಬಳೆಚೆನ್ನವಲಸೆ ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಮತ್ತು ಸಾಮಾಜಿಕ ಪರಿವರ್ತನಾ ತರಬೇತಿ ಕೇಂದ್ರದಲ್ಲಿ ಭಾನುವಾರ ಪೆರಿಯಾರ್ ರಾಮಸ್ವಾಮಿ ನಾಯ್ಕರ್ ಅವರ ಪರಿನಿಬ್ಬಾಣ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸ್ವಾತಂತ್ರ್ಯ ಪೂರ್ವದಲ್ಲಿ ಜಾತಿ ಶೋಷಣೆ ವಿಪರೀತವಾಗಿತ್ತು. ಶೂದ್ರರಿಗೆ, ದಲಿತರಿಗೆ ದೇವಸ್ಥಾನದೊಳಗೆ ಪ್ರವೇಶ ಇರಲಿಲ್ಲ. ದೇವಸ್ಥಾನದ ಬೀದಿಗೂ ದಲಿತರು ಕಾಲಿಡುವಂತಿರಲಿಲ್ಲ. ಆಗ ಪೆರಿಯಾರ್ ರಾಮಸ್ವಾಮಿ ಹೋರಾಟ ಪ್ರಾರಂಭಿಸಿದರು. ಇದೇ ರೀತಿ ಹತ್ತು ಹಲವು ಹೋರಾಟಗಳನ್ನು ಮಾಡಿದ ಸಾಮಾಜಿಕ ನ್ಯಾಯದ ಹರಿಕಾರ, ವೈಚಾರಿಕ ಚಳವಳಿ ನೇತಾರ ಇಂದಿಗೂ ಕೂಡ ದಕ್ಷಿಣ ಭಾರತದ ಅಸ್ಮಿತೆಯ ಪ್ರಸ್ತಾವ ಬಂದಾಗಲೆಲ್ಲಾ ಅವರ ಹೆಸರು ಮತ್ತೆ ಮತ್ತೆ ನೆನಪಾಗುತ್ತದೆ ಎಂದರು.
ಸಾಮಾಜಿಕ ನ್ಯಾಯದ ಆಶಯ ಬಹಳ ದಿಟ್ಟವಾಗಿ ಹಲವು ರೀತಿಯಲ್ಲಿ ಪ್ರಸ್ತುತಪಡಿಸಿದರು. ಹಿಂದುಳಿದ ಶೋಷಿತ ವರ್ಗಗಳ ಸ್ವ ಗೌರವ ಚಳವಳಿಯನ್ನು ಪೆರಿಯಾರ್ ಮುಂದುವರಿಸಿದರು. ಮುಂದೆ ದ್ರಾವಿಡರ ಅಸ್ಮಿತೆ ಉಳಿವಿಗಾಗಿ ಪ್ರತ್ಯೇಕ ದ್ರಾವಿಡ ನಾಡು ರಾಷ್ಟ್ರವಾಗಬೇಕೆಂದು ಆಗ್ರಹಿಸಿದರು. ಪೆರಿಯಾರ್ ತಮ್ಮ ಜೀವಿತಾವಧಿಯಲ್ಲಿ ವಿಚಾರವಾದ, ಸ್ವಗೌರವ, ಮಹಿಳೆಯರ ಹಕ್ಕುಗಳು ಮತ್ತು ದ್ರಾವಿಡರ ಮೇಲಿನ ವೈದಿಕ ಪರಂಪರೆ ಹೇರಿಕೆ ವಿರುದ್ಧ ನಿರಂತರವಾಗಿ ಗಟ್ಟಿಧ್ವನಿ ಮೊಳಗಿಸಿದರು ಎಂದರು.
ವಕೀಲ ಮಹೇಶ್ ಕುಮಾರ್, ಬಿಎಸ್‌ಪಿ ಜಿಲ್ಲಾ ಉಪಾಧ್ಯಕ್ಷ ಮಹದೇವ್, ಜಿಲ್ಲಾ ಕಾರ್ಯದರ್ಶಿ ರಮೇಶ್, ತಾಲ್ಲೂಕು ಅಧ್ಯಕ್ಷ ಕಾಂತರಾಜ್, ಬೆಳಗೆರೆ ಬೈರಜ್, ಮುಡೆನಹಳ್ಳಿ ಬೈರಾಜ್, ಡಾ. ರಜಿನಿ, ಅಂದಾನಿ, ಗೋಪಿ, ಕೆಂಪಚೂಡಯ್ಯ , ನಾಗೇಶ್, ಗಂಗರಾಜು, ಶ್ರೀನಿವಾಸ್, ಪುನೀತ್, ಮಹದೇವ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.