ADVERTISEMENT

ಸಸಿ ವಿತರಣೆಗೆ ಅರಣ್ಯ ಇಲಾಖೆ ಸಿದ್ಧ

ಜಿಲ್ಲೆಯ ವಿವಿಧ ನರ್ಸರಿಗಳಲ್ಲಿ 10 ಲಕ್ಷದಷ್ಟು ಗಿಡಗಳು ಲಭ್ಯ

​ಪ್ರಜಾವಾಣಿ ವಾರ್ತೆ
Published 3 ಜೂನ್ 2019, 14:30 IST
Last Updated 3 ಜೂನ್ 2019, 14:30 IST
ಜಾನಪದ ಲೋಕ ಬಳಿ ಇರುವ ಸಸ್ಯಕ್ಷೇತ್ರದಲ್ಲಿ ಬೆಳೆಸಲಾದ ಸಸ್ಯಗಳು
ಜಾನಪದ ಲೋಕ ಬಳಿ ಇರುವ ಸಸ್ಯಕ್ಷೇತ್ರದಲ್ಲಿ ಬೆಳೆಸಲಾದ ಸಸ್ಯಗಳು   

ರಾಮನಗರ: ಜಾನಪದ ಲೋಕದ ಬಳಿ ಇರುವ ಸಾಮಾಜಿಕ ಅರಣ್ಯ ಇಲಾಖೆಯ ಸಸ್ಯಕ್ಷೇತ್ರದಲ್ಲಿ ಲಕ್ಷಾಂತರ ಸಸಿಗಳು ನಳನಳಿಸುತ್ತಿದ್ದು, ವಿತರಣೆಗೆ ಸಿದ್ಧವಾಗಿವೆ.

ಹೆಬ್ಬೇವು, ತೇಗ, ಹೊನ್ನೆ, ಶ್ರೀಗಂಧ, ರಕ್ತಚಂದನ, ಸಿಲ್ವರ್, ಮಹಾಘನಿ ಹೀಗೆ ನಾನಾ ಜಾತಿಯ, ನಾನಾ ಎತ್ತರದ ಗಿಡಗಳನ್ನು ಬೆಳೆಸಲಾಗಿದೆ. ಈ ಮಳೆಗಾಲದ ಆರಂಭದಲ್ಲಿಯೇ ರೈತರಿಗೆ ವಿತರಿಸಲು ಇಲಾಖೆಯು ಸಿದ್ಧತೆ ನಡೆಸಿದೆ. ಜೊತೆಗೆ ರಸ್ತೆ ಬದಿಗಳಲ್ಲಿ, ನೆಡುತೋಪುಗಳಲ್ಲಿಯೂ ಇವುಗಳನ್ನು ನೆಡುವ ಗುರಿ ಹೊಂದಲಾಗಿದೆ.

ಸರ್ಕಾರವು ಕೃಷಿ ಅರಣ್ಯ ಯೋಜನೆ, ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಗಳ ಮೂಲಕ ರೈತರು ಅರಣ್ಯ ವಿಸ್ತರಣೆ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹಿಸುತ್ತಿದೆ. ಕೃಷಿಕರಿಂದಲೂ ಉತ್ತಮ ಸ್ಪಂದನೆ ದೊರೆಯುತ್ತಿದೆ. ಹೆಚ್ಚಿನವರು ಹೆಬ್ಬೇವು ಬೆಳೆಸಲು ಆಸಕ್ತಿ ತೋರಿದ್ದಾರೆ. ಶ್ರೀಗಂಧ, ರಕ್ತಚಂದನದಂತಹ ಸಸಿಗಳನ್ನೂ ವಿತರಿಸಲಾಗುತ್ತಿದೆ.

ADVERTISEMENT

ಹೊಲಗಳಲ್ಲಿ ಸಸಿ ನೆಟ್ಟು ಬೆಳೆಸುವ ಆಸಕ್ತಿ ಹೊಂದಿರುವ ರೈತರಿಗೆ ಅರಣ್ಯ ಇಲಾಖೆಯು ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗಖಾತ್ರಿ ಯೋಜನೆಯ ಅಡಿ ಸಸಿಗಳನ್ನು ವಿತರಿಸಲಿದೆ. ನಿರ್ವಹಣೆಗೆ ಹಣಕಾಸಿನ ನೆರವನ್ನೂ ನೀಡಲಿದೆ. ಈ ಯೋಜನೆಯ ಅಡಿ ಪ್ರತಿ ಸಸಿಗೆ ಅವಶ್ಯವಾದ ಗುಂಡಿ ತೋಡುವುದರಿಂದ ಹಿಡಿದು ಅದನ್ನು ನೆಟ್ಟು ಪೋಷಿಸಲು ₨84 ಸಹಾಯಧನ ಸಿಗಲಿದೆ. ಬಿಪಿಎಲ್ ಪಡಿತರ ಚೀಟಿ ಹಾಗೂ ನರೇಗಾ ಉದ್ಯೋಗ ಚೀಟಿ ಹೊಂದಿರುವ ಗ್ರಾಮೀಣ ರೈತರು ಅರ್ಜಿ ಸಲ್ಲಿಸಬಹುದಾಗಿದೆ. ಇದಕ್ಕಾಗಿ ಸಂಬಂಧಿಸಿದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಿಂದ ಪತ್ರ ತರಬೇಕಾಗುತ್ತದೆ. ನರೇಗಾ ಯೋಜನೆ ಅಡಿ ರೈತರಿಗೆ ಈ ವರ್ಷ 6.9 ಲಕ್ಷ ಸಸಿಗಳು ವಿತರಣೆ ಆಗಲಿವೆ.

ಆರ್‍ಎಸ್‌ಪಿಡಿ ಯೋಜನೆಯ ಅಡಿ ರೈತರಿಗೆ ರಿಯಾಯಿತಿ ದರದಲ್ಲಿ ಸಸಿಗಳ ಮಾರಾಟವೂ ನಡೆದಿದೆ. 6X9 ಅಳತೆಯ ಸಸಿಗೆ ₨1 ಹಾಗೂ 8X12 ಅಳತೆಯ ಸಸಿಗೆ ₨3 ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಈ ಯೋಜನೆಯ ಅಡಿ ಜಿಲ್ಲೆಯಲ್ಲಿ ಒಟ್ಟಾರೆ 2.14 ಲಕ್ಷ ಸಸಿಗಳು ಮಾರಾಟಕ್ಕೆ ಲಭ್ಯವಿದೆ.

ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಲ್ಲಿ ನೋಂದಾಯಿಸಿಕೊಂಡ ರೈತರು, ನೆಟ್ಟ ಬದುಕುಳಿದ ಗಿಡಗಳಿಗೆ ಪ್ರತಿ ಗಿಡಕ್ಕೆ ಮೊದಲ ಎರಡು ವರ್ಷ ತಲಾ ₹30 ಹಾಗೂ ಮೂರನೇ ವರ್ಷಕ್ಕೆ ₹40 ಪ್ರೋತ್ಸಾಹ ಧನ ಅವರ ಖಾತೆ ಜಮೆ ಆಗಲಿದೆ.

*
ರೈತರಿಗೆ ಅತಿ ಕಡಿಮೆ ದರದಲ್ಲಿ ಸಸಿಗಳನ್ನು ಪೂರೈಸಲಾಗುತ್ತಿದೆ. ಗುಂಡು ತೋಪು, ಗೋಮಾಳ ಮೊದಲಾದ ಕಡೆಯೂ ಸಸಿಗಳನ್ನು ನೆಡಲಾಗುವುದು.
-ದೇವರಾಜು, ಡಿಸಿಎಫ್, ಸಾಮಾಜಿಕ ಅರಣ್ಯ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.