ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ಅರಿವು ಕಾರ್ಯಾಗಾರ
ಪ್ರಜಾವಾಣಿ ವಾರ್ತೆ Published 10 ಡಿಸೆಂಬರ್ 2019, 14:16 IST Last Updated 10 ಡಿಸೆಂಬರ್ 2019, 14:16 IST ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ನಿಯಮ-2016 ಅರಿವು ಕಾರ್ಯಾಗಾರ
ಬಿಡದಿ: ಸ್ವಚ್ಛತೆ ಕಾಪಾಡುವಲ್ಲಿ ಬೀದಿ ಬದಿ ವ್ಯಾಪಾರಿಗಳ ಪಾತ್ರ ಪ್ರಮುಖವಾಗಿದ್ದು, ಸ್ಥಳೀಯ ಸಂಸ್ಥೆಗಳ ಸಿಬ್ಬಂದಿ ಜೊತೆ ಕೈ ಜೋಡಿಸಿ ಕೆಲಸ ಮಾಡುವ ಸಂಕಲ್ಪ ಮಾಡಬೇಕು ಎಂದು ಬಿಡದಿ ಪುರಸಭೆ ಸದಸ್ಯ ರಮೇಶ್ ಕುಮಾರ್ ಕಿವಿಮಾತು ಹೇಳಿದರು.
ಇಲ್ಲಿನ ರೈತ ಭವನದಲ್ಲಿ ಪುರಸಭೆ ವತಿಯಿಂದ ಹಮ್ಮಿಕೊಂಡಿದ್ದ ಘನತ್ಯಾಜ್ಯ ವಸ್ತು ನಿರ್ವಹಣೆ ನಿಯಮ- 2016 ಮತ್ತು ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ನಿಯಮ-2016 ಅರಿವು ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ರಸ್ತೆ ಬದಿ ವ್ಯಾಪಾರಿಗಳಿಂದ ತ್ಯಾಜ್ಯ ಸಂಗ್ರಹಿಸುವ ಉದ್ದೇಶದಿಂದ ಪ್ರತಿ ರಸ್ತೆ ಬದಿ ವ್ಯಾಪಾರಿಯಿಂದ ಮಾಸಿಕ ತಲಾ 25 ರೂಪಾಯಿ ಪಡೆದುಕೊಂಡು ಹಸಿ ಕಸ ಮತ್ತು ಒಣ ಕಸ ಪ್ರತ್ಯೇಕವಾಗಿ ಸಂಗ್ರಹಿಸುವ ಕೆಲಸವನ್ನು ಪುರಸಭೆ ಸಿಬ್ಬಂದಿ ಮಾಡಲಿದ್ದಾರೆ. ಈ ದಿಕ್ಕಿನಲ್ಲಿ ರಸ್ತೆ ಬದಿ ವ್ಯಾಪಾರಿಗಳು ಸಿಬ್ಬಂದಿಗೆ ಸಹಕರಿಸುವ ಮೂಲಕ ಸ್ವಚ್ಛ ಬಿಡದಿ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಪರಿಸರ ಎಂಜಿನಿಯರ್ ಬಿ.ಸಿ.ಅರ್ಚನಾ ಮಾತನಾಡಿ, ‘ತನ್ನ ಸುತ್ತ-ಮುತ್ತಲಿನ ಪರಿಸರದ ಸ್ವಚ್ಛತೆ ಕಾಪಾಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಈ ದಿಕ್ಕಿನಲ್ಲಿ ಬೀದಿ ಬದಿ ವ್ಯಾಪಾರಿಗಳು ತಮ್ಮ ವ್ಯವಹಾರದ ಜತೆಗೆ,ತಮ್ಮೂರಿನ ಸ್ವಚ್ಛತೆ ಮತ್ತು ನೈರ್ಮಲ್ಯತೆಯನ್ನು ಕಾಪಾಡುವಲ್ಲಿ ವಿಶೇಷ ಗಮನಹರಿಸಬೇಕು’ ಎಂದು ಸಲಹೆ ನೀಡಿದರು.
ಸಂಪನ್ಮೂಲ ವ್ಯಕ್ತಿ ಗೋಪಾಲಯ್ಯ ಘನತ್ಯಾಜ್ಯ ವಸ್ತು ನಿರ್ವಹಣೆ ನಿಯಮ- 2016 ಮತ್ತು ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ನಿಯಮ-2016 ಕುರಿತು ಉಪನ್ಯಾಸ ನೀಡಿದರು. ನಂತರ ಸಭೆಯಲ್ಲಿ ಭಾಗವಹಿಸಿದ್ದ ರಸ್ತೆ ಬದಿ ವ್ಯಾಪಾರಿಗಳ ಜತೆ ಸಂವಾದ ನಡೆಸಿದರು.
ಹಸಿ ಮತ್ತು ಒಣ ಕಸ ಪ್ರತ್ಯೇಕವಾಗಿ ಸಂಗ್ರಹಿಸುವ ಸಂಬಂಧಿಸಿದ ಕಿರುಚಿತ್ರವನ್ನು ಪ್ರದರ್ಶಿಸಲಾಯಿತು. ಆರೋಗ್ಯ ನಿರೀಕ್ಷಕಿ ಲತಾಮಣಿ, ಪುರಸಭೆ ಸಿಬ್ಬಂದಿ ನವೀನ್, ವನಿತಾ ಭಾಗವಹಿಸಿದ್ದರು.