ADVERTISEMENT

ಕನಕಪುರದ ಹೂಳ್ಯ, ಮಾಗಡಿ ನಾಯಕನಪಾಳ್ಯ ಆಯ್ಕೆ

ಪ್ರಧಾನಮಂತ್ರಿ ಜನಜಾತಿಯ ಉನ್ನತ ಗ್ರಾಮ ಅಭಿಯಾನ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2024, 7:07 IST
Last Updated 28 ಸೆಪ್ಟೆಂಬರ್ 2024, 7:07 IST

ರಾಮನಗರ: ದೇಶಾದ್ಯಂತ ಬಹುಸಂಖ್ಯಾತ ಬುಡಕಟ್ಟು ಸಮುದಾಯದ ಜನರ ಆರ್ಥಿಕ, ಸಾಮಾಜಿಕ ಹಾಗೂ ಸಮಗ್ರ ಅಭಿವೃದ್ಧಿಯ ಗುರಿ ಹೊಂದಿರುವ ಪಿ.ಎಂ ಜನ್‌ಮಾನ್ ಯೋಜನೆಯಿಂದ ಸ್ಫೂರ್ತಿ ಪಡೆದ ಯೋಜನೆಯಾದ, ‘ಪ್ರಧಾನಮಂತ್ರಿ ಜನಜಾತಿಯ ಉನ್ನತ ಗ್ರಾಮ ಅಭಿಯಾನ’ಕ್ಕೆ ಜಿಲ್ಲೆಯ ಎರಡು ಗ್ರಾಮಗಳನ್ನು ಆಯ್ಕೆ ಮಾಡಲಾಗಿದೆ.

ಈ ಕುರಿತು ಪ್ರಕಟಣೆ ನೀಡಿರುವ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರು, ಕನಕಪುರ ತಾಲ್ಲೂಕಿನ ಉಯ್ಯಂಬಳ್ಳಿ ಗ್ರಾಮ ಪಂಚಾಯಿತಿಯ ಹೂಳ್ಯ ಮತ್ತು ಮಾಗಡಿ ತಾಲ್ಲೂಕಿನ ಹಂಚಿಕುಪ್ಪೆ ಗ್ರಾಮ ಪಂಚಾಯಿತಿಯ ನಾಯಕನಪಾಳ್ಯ ಗ್ರಾಮ ಆಯ್ಕೆಯಾಗಿದೆ. ಪರಿಶಿಷ್ಟ ಪಂಗಡ ಸಮುದಾಯದವರು ಎರಡು ಗ್ರಾಮಗಳಲ್ಲಿ ವಿವಿಧ ಮೂಲಸೌಕರ್ಯಗಳನ್ನು 17 ವಿವಿಧ ಇಲಾಖೆಗಳಿಂದ ಒದಗಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಕೇಂದ್ರ ಸರ್ಕಾರವು 2024-25ನೇ ಸಾಲಿನ ಆರ್ಥಿಕ ಬಜೆಟ್‌ನಲ್ಲಿ ಘೋಷಿಸಿರುವಂತೆ, ದೇಶದಾದ್ಯಮತ 63 ಸಾವಿರ ಗ್ರಾಮಗಳ 5 ಕೋಟಿ ಜನರ ಸಮಗ್ರ ಅಭಿವೃದ್ಧಿಯ ಗುರಿಯನ್ನು ಈ ಅಭಿಯಾನ ಹೊಂದಿದೆ. 2024-25ನೇ ಸಾಲಿನಿಂದ 2028-29ನೇ ಸಾಲಿನವರೆಗಿನ 5 ವರ್ಷಗಳ ಈ ಅಭಿಯಾನಕ್ಕೆ ಕೇಂದ್ರ ಬುಡಕಟ್ಟು ಮಂತ್ರಾಲಯ ನೋಡಲ್ ಸಚಿವಾಲಯವಾಗಿದೆ ಎಂದು ಹೇಳಿದ್ದಾರೆ.

ADVERTISEMENT

ಕೇಂದ್ರದ 17 ಇಲಾಖೆಗಳ ಸಹಯೋಗದೊಂದಿಗೆ ಈ ಯೋಜನೆಯನ್ನು ಜಾರಿ ಮಾಡಲಾಗುತ್ತಿದೆ. ಬುಡಕಟ್ಟು ಸಮುದಾಯಗಳ ಅಭಿವೃದ್ಧಿ ಕ್ರಿಯಾಯೋಜನೆಯಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮೀಸಲಿರಿಸಿದ ₹79,156 ಕೋಟಿ ಅನುದಾನದಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. 2024-25ನೇ ಸಾಲಿನಿಂದ 2025-26ರ ಆರ್ಥಿಕ ಸಾಲಿನ ಮೊದಲ ಹಂತದಲ್ಲಿ ₹4 ಸಾವಿರ ಕೋಟಿ ಅನುದಾನ ನಿಗದಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಇಲಾಖೆ– ಯೋಜನೆಗಳ ವಿವರ: ಗ್ರಾಮೀಣ ಇಲಾಖೆಯಲ್ಲಿ ಪಕ್ಕಾ ಮನೆಗಳು (ಪಿಎಂಎಐ), ಸಂಪರ್ಕ ರಸ್ತೆ (ಪಿಎಂಜಿಎಸ್‌ವೈ), ಗ್ರಾಮೀಣ ನೀರು ಸರಬರಾಜು ಇಲಾಖೆಯಲ್ಲಿ ನೀರು ಸರಬರಾಜು ಜಲ ಜೀವನ್ ಮಿಷನ್ (ಜೆಜೆಎಂ), ವಿದ್ಯುತ್ ಇಲಾಖೆಯಲ್ಲಿ (ಬೆಸ್ಕಾಂ) ಮನೆ ವಿದ್ಯುದೀಕರಣ (ಆರ್‌ಡಿಎಸ್‌ಎಸ್), ಹೊಸ ಮತ್ತು ನವೀಕರಿಸಬಹುದಾದ ಇಂಧನ ಇಲಾಖೆಯಲ್ಲಿ ಆಫ್-ಗ್ರಿಡ್ ಸೌರ, ಹೊಸ ಸೌರ ವಿದ್ಯುತ್ ಯೋಜನೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಸಂಚಾರಿ ವೈದ್ಯಕೀಯ ಘಟಕಗಳು ರಾಷ್ಟ್ರೀಯ ಆರೋಗ್ಯ ಮಿಷನ್ ಆಯುಷ್ಮಾನ್ ಕಾರ್ಡ್-ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ (ಪಿಎಂಜೆಎವೈ) ಎನ್‌ಎಚ್‌ಎಂ.

ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಇಲಾಖೆಯಲ್ಲಿ ಸಂಪರ್ಕಗಳು (ಎಲ್‌ಪಿಜಿ ಪಿಎಂ ಉಜ್ವಲ ಯೋಜನಾ), ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಅಂಗನವಾಡಿ ಕೇಂದ್ರಗಳ ಅಭಿವೃದ್ಧಿ-ಪೋಷಣ್ ಅಭಿಯಾನ, ಶಿಕ್ಷಣ ಇಲಾಖೆಯಲ್ಲಿ ವಿದ್ಯಾರ್ಥಿನಿಲಯಗಳ ನಿರ್ಮಾಣ-ಸಮಗ್ರ ಶಿಕ್ಷಾ ಅಭಿಯಾನ (ಎಸ್‌ಎಸ್‌ಎ), ಆಯುಷ್ ಇಲಾಖೆಯಲ್ಲಿ ಪೋಷಣ್ ವಾಟಿಕಾಸ್-ರಾಷ್ಟ್ರೀಯ ಆಯುಷ್ ಮಿಷನ್, ದೂರಸಂಪರ್ಕ ಇಲಾಖೆಯಲ್ಲಿ ಯುನಿವರ್ಸಲ್ ಸೇವೆ (ಯುನಿವರ್ಸಲ್ ಸೇವೆ (ಆಬ್ಲಿಗೇಷನ್ ನಿಧಿ-ಭಾರತ್ ನೆಟ್), ಕೌಶಲ್ಯಾಭಿವೃದ್ಧಿ ಇಲಾಖೆಯಲ್ಲಿ ಸ್ಕಿಲ್ ಇಂಡಿಯಾ.

ಮಾಹಿತಿ ತಂತ್ರಜ್ಞಾನ ಮತ್ತು ಎಲೆಕ್ಟ್ರಾನಿಕ್ಸ್‌ ಇಲಾಖೆಯಲ್ಲಿ ಡಿಜಿಟಲ್ ಇನಿಶಿಯೇಟಿವ್ಸ್, ಕೃಷಿ ಇಲಾಖೆಯಲ್ಲಿ ಸುಸ್ಥಿರ ಕೃಷಿ ಉತ್ತೇಜನ, ಪಶು ಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆಯಲ್ಲಿ ಜಾನುವಾರು ಪಾಲನೆ-ರಾಷ್ಟ್ರೀಯ ಜಾನುವಾರು ಮಿಷನ್, ಪಂಚಾಯತ್ ರಾಜ್ ಇಲಾಖೆಯಲ್ಲಿ ಸಾಮರ್ಥ್ಯದ ಕಟ್ಟಡ-ರಾಷ್ಟ್ರೀಯ ಗ್ರಾಮ ಸ್ವರಾಜ್ಯ ಅಭಿಯಾನ, ಪ್ರವಾಸೋದ್ಯಮ ಇಲಾಯಲ್ಲಿ ಟ್ರೈಬಲ್ ಹೋಂ ಸ್ಟೇ-ಸ್ವದೇಶ್ ದರ್ಶನ ಹಾಗೂ ಬುಡಕಟ್ಟು ವ್ಯವಹಾರಗಳ ಸಚಿವಾಲಯದಲ್ಲಿ ಪ್ರಧಾನಮಂತ್ರಿ ಆದಿ ಆದರ್ಶ ಗ್ರಾಮ ಯೋಜನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.