ರಾಮನಗರ: ಪೂಜಿಸುವೆ ಭೂ ದೇವಿಯ ಧಿಕ್ಕರಿಸುವೆ ಹೆಂಡತಿಯ ಮೂದೇವಿಯ...
ತಿಳಿದವನಿಗೆ ಜೀವನ ರಸದೂಟ
ತಿಳಿಯದವನಿಗೆ ಜೀವನ ಬರೀ ಊಟ...
ವರದಕ್ಷಿಣೆ ತರಲಿಲ್ಲವೆಂದು ಅತ್ತೆ ಸೊಸೆಗಿಟ್ಟಳು ಬೆಂಕಿ
ಸೊಸೆ ಅತ್ತೆಯನ್ನು ಬಿಗಿದಪ್ಪಿದಳು, ಸೊಸೆ ಜೊತೆ ಅತ್ತೆಯೂ ಸುಟ್ಟು ಹೋದಳು...
ನಗರದ ಅರ್ಕಾವತಿ ಬಡಾವಣೆಯಲ್ಲಿರುವ ಬ್ಲಾಸಮ್ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ಸೋಮವಾರ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಹಮ್ಮಿಕೊಂಡಿದ್ದ ದಾಯಿತ್ವ ಸ್ವೀಕಾರ ಮತ್ತು ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಕೆಲ ಚುಟುಕುಗಳ ಝಲಕ್ ಇದು.
ವೇದಿಕೆಯಲ್ಲಿ ಕವಿಗಳು ತಮ್ಮ ಚುಟುಕುಗಳನ್ನು ಓದುತ್ತಿದ್ದರೆ, ಮುಂಭಾಗದಲ್ಲಿದ್ದವರ ಮುಖಗಳು ಅರಳಿ ನಗೆಯುಕ್ಕುತ್ತಿತ್ತು. ಕವಿಗಳಿಗೆ ಚಪ್ಪಾಳೆಯ ಮೆಚ್ಚುಗೆ ವ್ಯಕ್ತವಾಗುತ್ತಿತ್ತು. ಸಂಸಾರದೊಳಗಿನ ಮುನಿಸುಸೇರಿದಂತೆ ವಿವಿಧ ರಂಜನೀಯ ಘಟನೆಗಳ ಕುರಿತ ಎರಡ್ಮೂರು ಸಾಲಿನ ಚುಟುಕುಗಳು ನಗೆಗಡಲಲ್ಲಿ ತೇಲಿಸಿದರೆ, ಬದುಕು ಕುರಿತ ಚಟುಕುಗಳ ಅಲ್ಲಿದ್ದವರನ್ನು ಆಲೋಚನೆಗೆ ಪ್ರೇರೆಪಿಸಿದವು.
ಪ್ರಾಸ್ತಾವಿಕವಾಗಿ ಮಾತನಾಡಿದ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಅಂಬರೀಶ್, ‘ಚುಟುಕುಗಳನ್ನು ಚೌಪದಿ ಎಂತಲೂ ಕರೆಯುತ್ತಾರೆ. ಇವು ಅತಿ ಸಲೀಲತೆಯಿಂದ ಕೂಡಿದ್ದು, ಎಲ್ಲವೂ ಜೀವನಮುಖಿ ಸಂದೇಶ ಹೊಂದಿರುತ್ತವೆ. ದೈನಂದಿನ ಬದುಕು, ಸಮಾಜದ ಘಟನೆಗಳು ಸೇರಿದಂತೆ ವಿವಿಧ ರೀತಿಯ ವಿದ್ಯಮಾನಗಳು ಚುಟುಕಿಗೆ ಮೂಲವಾಗಿವೆ’ ಎಂದರು.
‘ಮುಂದಿನ ದಿನಗಳಲ್ಲಿ ಚುಟುಕು ಸಾಹಿತ್ಯವನ್ನು ಸಮಾಜಕ್ಕೆ ಹೆಚ್ಚಾಗಿ ಪರಿಚಯಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಫೆಬ್ರುವರಿ ತಿಂಗಳಲ್ಲಿ ಚುಟುಕು ಸಾಹಿತ್ಯ ಸಮ್ಮೇಳನವನ್ನು ಜಿಲ್ಲೆಯಲ್ಲಿ ಆಯೋಜಿಸಲಾಗುವುದು. ರಾಮನಗರ ಜಿಲ್ಲೆಯ ಸಾಹಿತಿಗಳಿಂದ ಚುಟುಕುಗಳನ್ನು ಕಲೆ ಹಾಕಿ, ಸಂಕಲನವೊಂದನ್ನು ಹೊರತರಲಾಗುವುದು’ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಟಿ. ನಾಗೇಶ್ ಮಾತನಾಡಿ, ‘ಚುಟುಕು ಸಾಹಿತ್ಯ ಮೂಲದ ಸಮಾಜದ ಅಂಕುಡೊಂಕುಗಳನ್ನು ಹೇಳುತ್ತಾ, ಸಮಾಜದ ಸುಧಾರಣೆಗೆ ಪ್ರೇರೇಪಿಸಬಹುದಾಗಿದೆ. ಇಂತಹ ಸಾಹಿತ್ಯ ಪ್ರಕಾರಕ್ಕೆ ಹೆಚ್ಚಿನ ಪ್ರೋತ್ಸಾಹ ಸಿಗಬೇಕಿದೆ. ಚುಟುಕು ಕವಿಗಳಿಗೆ ವೇದಿಕೆಯೂ ಸಿಗಬೇಕಿದೆ. ಆ ನಿಟ್ಟಿನಲ್ಲಿ ಸಾಹಿತ್ಯ ಪರಿಷತ್ ವತಿಯಿಂದ ಚುಟುಕು ಪರಿಷತ್‌ಗೆ ಎಲ್ಲಾ ರೀತಿಯ ನೆರವು ನೀಡಲಾಗುವುದು’ ಎಂದು ಭರವಸೆ ನೀಡಿದರು.
ಅಧ್ಯಕ್ಷರಾಗಿ ಶೈಲೇಶ್: 2024ನೇ ಸಾಲಿನ ಜಿಲ್ಲಾ ಚುಟಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಸಾಹಿತಿ ಕಾಕೊಳು ಶೈಲೇಶ್ ಅವರ ಹೆಸರನ್ನು ಪದಾಧಿಕಾರಿಗಳು ಅನುಮೋದಿಸಿದರು.
ರಘುನಾಥ್ ಅವರು ಜಾನಪದ ಗಾಯನ ರಂಜಿಸಿತು. ಕಾರ್ಯಕ್ರಮದಲ್ಲಿ ಪರಿಷತ್‌ನ ಕಾರ್ಯಾಧ್ಯಕ್ಷ ಹೇಮಂತ್ ಗೌಡ, ಉಪಾಧ್ಯಕ್ಷ ಪೂರ್ಣಚಂದ್ರ, ಕಾರ್ಯದರ್ಶಿ ರಮೇಶ್ ಹೊಸದೊಡ್ಡಿ, ಖಜಾಂಚಿ ಅನಂತನಾಗ್, ಸಂಘಟನಾ ಕಾರ್ಯದರ್ಶಿ ಪ್ರಭು ಅಂಜನಾಪುರ, ಜಂಟಿ ಕಾರ್ಯದರ್ಶಿ ಲಕ್ಕಸಂದ್ರ ಮಹದೇವು, ಪತ್ರಿಕಾ ಕಾರ್ಯದರ್ಶಿ ಚನ್ನಮಾನಹಳ್ಳಿ ಮಲ್ಲೇಶ್ ಮತ್ತು ಶಿವಲಿಂಗಯ್ಯ, ನಿರ್ದೇಶಕರಾದ ರಾಜಶೇಖರ್ ಶಿವಹೊಂಬಯ್ಯ, ರಘುನಾಥ್, ಕಾಕೋಳು ಶೈಲೇಶ್ ಹಾಗೂ ಹೇಮಾವತಿ ಅಂಬರೀಶ್ ಭಾಗವಹಿಸಿದ್ದರು.
‘ಓದುಗನಿಂದ ಶ್ರೇಷ್ಠತೆ ನಿರ್ಧಾರ’
‘ಕಾವ್ಯ ಚುಟುಕು ಅಥವಾ ಗದ್ಯಕ್ಕೆ ಯಾವುದಾದರೂ ಒಂದು ವಿಷಯ ಇರಲೇಬೇಕು. ಮನ ಮುಟ್ಟುವಂತೆ ಅದನ್ನು ಯಾವ ರೀತಿ ಹೇಳಬೇಕು ಎಂಬುದು ಕವಿಗೆ ಗೊತ್ತಿರಬೇಕು. ನಾನು ಬರೆದಿದ್ದೇ ಶ್ರೇಷ್ಠವಾದುದು ಎಂಬ ಭಾವನೆ ಕವಿ ಮತ್ತು ಸಾಹಿತಿಗೆ ಇರುತ್ತದೆ. ಆದರೆ ಅದೇ ವ್ಯಸನವಾಗಬಾರದು. ಯಾವುದು ಶ್ರೇಷ್ಠ ಎಂಬುದನ್ನು ಓದುಗ ನಿರ್ಧರಿಸುತ್ತಾನೆ. ಎಲ್ಲದಕ್ಕೂ ಒಂದು ಅಂತ್ಯವಿದೆ. ಆದರೆ ಉತ್ತಮ ತಿರುಳಿನ ಪುಸ್ತಕಕ್ಕೆ ಸಾವಿಲ್ಲ. ಮನುಷ್ಯನ ಅಸ್ತಿತ್ವ ಇರುವವರೆಗೆ ಅದು ಬದುಕಿರುತ್ತದೆ’ ಎಂದು ಪರಿಷತ್‌ನ ಗೌರವಾಧ್ಯಕ್ಷ ಮತ್ತಿಕೆರೆ ಚೆಲುವರಾಜ ಅವರು ಅಭಿಪ್ರಾಯಪಟ್ಟರು. ‘ಸಾಹಿತ್ಯ ಸದಾ ಒಳ್ಳೆಯದನ್ನು ಬಯಸುತ್ತದೆ. ಜಗತ್ತಿನ ಎಲ್ಲಾ ಭಾಷೆಗಳಲ್ಲಿ ಒಳ್ಳೆಯ ಸಾಹಿತ್ಯ ಇರುವಂತೆ ಕೆಟ್ಟ ಸಾಹಿತ್ಯವೂ ಇದೆ. ಗದ್ಯ ಪ್ರಕಾರ ಬರೆಯುವವನು ಸಾಹಿತಿಯಾದರೆ ಕಾವ್ಯ ಬರೆಯುವವನು ಕವಿಯಾಗುತ್ತಾನೆ. ಇತ್ತೀಚೆಗೆ ದೀರ್ಘ ಕಾವ್ಯ ಓದು ಕಮ್ಮಿಯಾಗುತ್ತಿದೆ. ತಕ್ಷಣ ಓದಬಹುದಾದ ಎರಡ್ಮೂರು ಸಾಲಿನ ಚುಟುಕು ಸಾಹಿತ್ಯ ಹೆಚ್ಚು ಜನಪ್ರಿಯಾಗುತ್ತಿದೆ. ಕೇಳಿದವರ ಮುಖದಲ್ಲಿ ನಗು ಅರಳಿಸಬಲ್ಲ ಚುಟುಕು ಸಾಹಿತ್ಯ ಹೆಚ್ಚು ರಚನೆಯಾಗಬೇಕು. ಚುಟುಕು ಸಾಹಿತ್ಯವನ್ನು ಸಮಾಜಕ್ಕೆ ಹೆಚ್ಚು ಪರಿಚಯಿಸುವ ಕೆಲಸವನ್ನ ಪರಿಷತ್ ಮಾಡಬೇಕು’ ಎಂದು ಸಲಹೆ ನೀಡಿದರು.
ಚುಟುಕು ಕವನ ಆಹ್ವಾನ
ರಾಮನಗರ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ 2024ರಲ್ಲಿ ಜಿಲ್ಲಾ ಮಟ್ಟದ ಚುಟುಕು ಸಾಹಿತ್ಯ ಸಮ್ಮೇಳನ ಹಮ್ಮಿಕೊಂಡಿದೆ. ಆ ಹಿನ್ನೆಲೆಯಲ್ಲಿ ಜಿಲ್ಲೆಯ ಚುಟುಕು ಕವಿಗಳ ಕವನ ಸಂಕಲನವನ್ನು ಹೊರತರಲು ಉದ್ದೇಶಿಸಿದೆ. ಅದಕ್ಕಾಗಿ ಆಸಕ್ತರಿಂದ ಸ್ವರಚಿತ ತಲಾ ಮೂರು ಚುಟುಕುಗಳು ( ನಾಲ್ಕು ಸಾಲು) ಹಾಗೂ ಕವನಗಳನ್ನು ಆಹ್ವಾನಿಸಿದೆ. ಆಸಕ್ತರು ತಮ್ಮ ಸ್ವವಿವರ ಹಾಗೂ ವಿಳಾಸದೊಂದಿಗೆ ಪರಿಷತ್‌ನ ಜಿಲ್ಲಾ ಘಟಕದ ಅಧ್ಯಕ್ಷ ಅಂಬರೀಶ್– 98441 04839 ಕಾರ್ಯಾಧ್ಯಕ್ಷ ಡಾ. ಹೇಮಂತ್ ಗೌಡ– 99010 18644 ಪ್ರಧಾನ ಕಾರ್ಯದರ್ಶಿ ರಮೇಶ್ ಸಿ. ಹೊಸದೊಡ್ಡಿ– 80733 25026 ಖಜಾಂಚಿ ಅನಂತನಾಗ್– 73491 33217 ಅವರ ವಾಟ್ಸ್‌ಆ್ಯಪ್ ಮೊಬೈಲ್ ಸಂಖ್ಯೆಗೆ ಡಿ. 31ರೊಳಗೆ ಕಳಿಸಿ ಕೊಡಬೇಕು ಎಂದು ಪರಿಷತ್ ಅಧ್ಯಕ್ಷ ಅಂಬರೀಶ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.