ರಾಮನಗರ: ಕೆಲ ದಿನಗಳಿಂದ ಆಗಾಗ ಸುರಿಯುತ್ತಿರುವ ಮಳೆಗೆ ನಗರದ ರಸ್ತೆಗಳು ತೀರಾ ಹದಗೆಟ್ಟಿವೆ. ಮುಖ್ಯರಸ್ತೆಗಳಿಂದಿಡಿದು ಗಲ್ಲಿ ರಸ್ತೆಗಳವರೆಗೆ ಬಹುತೇಕ ರಸ್ತೆಗಳು ಗುಂಡಿಬಿದ್ದಿವೆ. ಸುರಿಯುವ ಮಳೆಯ ನೀರು ರಸ್ತೆ ಗುಂಡಿಗಳಲ್ಲಿ ನಿಂತಿರುವುದರಿಂದ, ಕೆಲ ರಸ್ತೆಗಳು ಕೆಸರಿನ ರಾಡಿಯಾಗಿವೆ. ಇದರಿಂದಾಗಿ ವಾಹನಗಳ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ.
ನಗರದ ಮುಖ್ಯರಸ್ತೆ, ಹಳೆ ಬಸ್ ನಿಲ್ದಾಣ ರಸ್ತೆ, ಕೋರ್ಟ್ ರಸ್ತೆ, ಐಜೂರು, ವಿವೇಕಾನಂದ ನಗರ, ಬಾಲಗೇರಿ, ಮಂಡಿಪೇಟೆ, ರೈಲು ನಿಲ್ದಾಣ ರಸ್ತೆ, ಎಂ.ಜಿ. ರಸ್ತೆ, ವಿನಾಯಕ ನಗರ, ಮಂಜುನಾಥ ನಗರ, ಮಲ್ಲೇಶ್ವರ ಬಡಾವಣೆ, ರಾಯರದೊಡ್ಡಿ ಸೇರಿದಂತೆ ನಗರದ ಯಾವ ರಸ್ತೆಯೂ ಗುಂಡಿಮುಕ್ತವಾಗಿಲ್ಲ. ಸಣ್ಣಪುಟ್ಟ ಅಪಘಾತಗಳಿಗೆ ಲೆಕ್ಕವಿಲ್ಲ. ಜನ ಶಾಪ ಹಾಕಿಕೊಂಡೇ ತಿರುಗಾಡಬೇಕಾದ ಸ್ಥಿತಿ ಇದೆ.
ಕೆಸರಿನ ರಾಡಿ: ‘ವ್ಯಾಪಾರ–ವಹಿವಾಟಿನ ಕೇಂದ್ರವಾಗಿರುವ ಮುಖ್ಯರಸ್ತೆಗೆ ಹೊಂದಿಕೊಂಡಂತಿರುವ ಮಂಡಿಪೇಟೆ, ಟೌನ್ ಪೊಲೀಸ್ ಠಾಣೆ ರಸ್ತೆಯು ಕೆಸರಿನ ಗದ್ದೆಯಂತಾಗಿದೆ. ಇಲ್ಲಿ ಪಾದಚಾರಿಗಳು ನಡೆದುಕೊಂಡು ಹೋಗುವುದಿರಲಿ, ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳು ಸಹ ಸಂಚರಿಸಲಾಗದ ದುಃಸ್ಥಿತಿ ತಲುಪಿದೆ’ ಎಂದು ವ್ಯಾಪಾರಿ ವಿನೇಶ್ ‘ಪ್ರಜಾವಾಣಿ’ಯೊಂದಿಗೆ ಆಕ್ರೋಶ ವ್ಯಕ್ತಪಡಿಸಿದರು.
‘ನಾವು ಕೇಳುವುದು ಉತ್ತಮ ರಸ್ತೆ, ನೀರು ಸೇರಿದಂತೆ ಕೆಲ ಮೂಲಸೌಕರ್ಯಗಳನ್ನು ಮಾತ್ರ. ಆದರೆ, ನಗರಸಭೆಗೆ ಅದನ್ನು ಸರಿಯಾಗಿ ಕೊಡಲಾಗದಿದ್ದರೆ ಆ ಆಡಳಿತ ಇದ್ದೂ ಏನು ಪ್ರಯೋಜನ? ಕಣ್ಣಿಗೆ ಎದ್ದು ಕಾಣುವ ಸಮಸ್ಯೆಗಳಿಗೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಶಾಸಕರು ಕುರುಡು ಮತ್ತು ಕಿವುಡಾಗಿದ್ದಾರೆ. ಇದು ನಮ್ಮ ದೌರ್ಭಾಗ್ಯವೆಂದೇ ಜನ ಸಹಿಸಿಕೊಂಡು ಹೋಗುತ್ತಿದ್ದಾರೆ’ ಎಂದು ಹತಾಶೆಯಿಂದ ನುಡಿದರು.
ಹಳ್ಳವಾಗುವ ರಸ್ತೆ: ನಗರದ ರೈಲು ನಿಲ್ದಾಣದ ರಸ್ತೆಯು ಮಳೆ ಬಂದಾಗಲ್ಲೆಲ್ಲಾ ಹಳ್ಳವಾಗಿ ಬದಲಾಗುತ್ತದೆ. ನಿಲ್ದಾಣದ ಮುಂದಿರುವ ರಸ್ತೆಯ ಅಕ್ಕಪಕ್ಕದ ಚರಂಡಿಗಳು ಕಟ್ಟಿಕೊಂಡಿರುವುದರಿಂದ ಮಳೆ ಬಂದಾಗ ಇಲ್ಲಿ ನೀರು ಸಂಗ್ರಹವಾಗುತ್ತದೆ. ಹರಿದು ಹೋಗಲು ಗಂಟೆಗಟ್ಟಲೆ ಸಮಯ ಬೇಕಾಗುತ್ತದೆ. ಆಗ ವಾಹನಗಳ ಸವಾರರು ಹಾಗೂ ಪಾದಚಾರಿಗಳು ಪರದಾಟ ಹೇಳತೀರದು.
‘ನಿಲ್ದಾಣದಿಂದ ಅನತಿ ದೂರದಲ್ಲಿರುವ ರೈಲ್ವೆ ಕೆಳ ಸೇತುವೆ ಸ್ಥಿತಿಯನ್ನು ಜೋರು ಮಳೆ ಬಂದಾಗಲೇ ನೋಡಬೇಕು. ಎರಡೂ ಬದಿಯಲ್ಲಿ ಇಳಿಜಾರು ಇರುವುದರಿಂದ ನೀರು ನೇರವಾಗಿ ಬಂದು ಸೇತುವೆ ತಳಭಾಗದಲ್ಲಿ ಸಂಗ್ರಹಗೊಳ್ಳುತ್ತದೆ. ಇದರ ಜೊತೆಗೆ ಸೇರಿಕೊಳ್ಳುವ ತ್ಯಾಜ್ಯದಿಂದಾಗಿ ನೀರು ಸರಾಗವಾಗಿ ಹರಿದು ಹೋಗದೆ ಕಟ್ಟಿಕೊಳ್ಳುತ್ತದೆ. ಆಗ ಇಲ್ಲಿ ವಾಹನಗಳ ಸಂಚಾರ ಕೆಲ ಹೊತ್ತು ಬಂದ್ ಆಗುತ್ತದೆ’ ಎಂದು ಯಾರಬ್ ನಗರದ ನಜೀರ್ ಹೇಳಿದರು.
ನಗರದ ಗುಂಡಿಗಳು ಹದಗೆಟ್ಟಿರುವುದರ ಹೊಣೆಯನ್ನು ನಗರಸಭೆಯೇ ಹೊರಬೇಕು. ಜನರಿಂದ ತೆರಿಗೆ ಕಟ್ಟಿಸಿಕೊಳ್ಳಲು ತೋರುವ ಉತ್ಸಾಹವನ್ನು ರಸ್ತೆ ಸೇರಿದಂತೆ ಮೂಲಸೌಕರ್ಯ ಒದಗಿಸುವಲ್ಲೂ ತೋರಬೇಕುಪ್ರಸನ್ನ ಗಾಂಧಿನಗರ ನಿವಾಸಿ
ಜನ ಕೇಳುವುದೇ ರಸ್ತೆ ನೀರು ಮಳೆ ನೀರು ಸರಾಗವಾಗಿ ಹರಿದು ಹೋಗಲು ಚರಂಡಿ. ನಗರಸಭೆಯವರು ಈ ಮೂಲಸೌಕರ್ಯಗಳನ್ನು ಒದಗಿಸುವ ಮೂಲಕ ತಮ್ಮ ಕರ್ತವ್ಯ ಮೆರೆಯಬೇಕುವಿಶ್ವಾಸ್ ಆರ್.ಕೆ ರಂಗರಾಯನದೊಡ್ಡಿ ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.