ADVERTISEMENT

‘ದೈಹಿಕ, ಮಾನಸಿಕ ಒತ್ತಡ ತಗ್ಗಿಸುವ ಯೋಗ’

​ಪ್ರಜಾವಾಣಿ ವಾರ್ತೆ
Published 26 ಜೂನ್ 2024, 5:08 IST
Last Updated 26 ಜೂನ್ 2024, 5:08 IST
ರಾಮನಗರದ ಬಲಿಜ ಸಮುದಾಯ ಭವನದಲ್ಲಿ ರಾಮನಗರ ಪಿರಮಿಡ್ ಧ್ಯಾನ ಮಂದಿರ ಇತ್ತೀಚೆಗೆ ಆಯೋಜಿಸಿದ್ದ ‘ಧ್ಯಾನಯೋಗ ಮತ್ತು ಪ್ರವಚನ’ ಕಾರ್ಯಕ್ರಮದಲ್ಲಿ ಯೋಗಿ ಸದಾನಂದಗಿರಿ ಮಹಾರಾಜ್ ಅವರನ್ನು ಸನ್ಮಾನಿಸಲಾಯಿತು. ಕೇಂದ್ರದ ಮುಖ್ಯಸ್ಥ ಎನ್. ಕೃಷ್ಣಪ್ಪ ಹಾಗೂ ಇತರರು ಇದ್ದಾರೆ
ರಾಮನಗರದ ಬಲಿಜ ಸಮುದಾಯ ಭವನದಲ್ಲಿ ರಾಮನಗರ ಪಿರಮಿಡ್ ಧ್ಯಾನ ಮಂದಿರ ಇತ್ತೀಚೆಗೆ ಆಯೋಜಿಸಿದ್ದ ‘ಧ್ಯಾನಯೋಗ ಮತ್ತು ಪ್ರವಚನ’ ಕಾರ್ಯಕ್ರಮದಲ್ಲಿ ಯೋಗಿ ಸದಾನಂದಗಿರಿ ಮಹಾರಾಜ್ ಅವರನ್ನು ಸನ್ಮಾನಿಸಲಾಯಿತು. ಕೇಂದ್ರದ ಮುಖ್ಯಸ್ಥ ಎನ್. ಕೃಷ್ಣಪ್ಪ ಹಾಗೂ ಇತರರು ಇದ್ದಾರೆ   

ರಾಮನಗರ: ‘ನಿತ್ಯ ಯೋಗಾಸನ ಮಾಡುವುದರಿಂದ ಮಾನಸಿಕ ಮತ್ತು ದೈಹಿಕ ಒತ್ತಡಗಳನ್ನು ಕಡಿಮೆ ಮಾಡಿಕೊಳ್ಳಬಹುದು. ಜೊತೆಗೆ ದೀರ್ಘಾಯುಷ್ಯ ಪಡೆಯಬಹುದು’ ಎಂದು ಯೋಗಿ ಸದಾನಂದಗಿರಿ ಮಹಾರಾಜ್  ಹೇಳಿದರು.

ನಗರದ ಬಲಿಜ ಸಮುದಾಯ ಭವನದಲ್ಲಿ ರಾಮನಗರ ಪಿರಮಿಡ್ ಧ್ಯಾನ ಮಂದಿರದ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ‘ಧ್ಯಾನಯೋಗ ಮತ್ತು ಪ್ರವಚನ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಮನುಷ್ಯನಿಗೆ ಕೋಪವು ದೊಡ್ಡ ಶತ್ರುವಾಗಿದ್ದು, ಇದನ್ನು ಯೋಗ ಮತ್ತು ಧ್ಯಾನಗಳಿಂದ ಮಾತ್ರ ಹೋಗಲಾಡಿಸಬಹುದು’ ಎಂದು ತಿಳಿಸಿದರು.

‘ಮಹಿಳೆಯರು ಮನೆ ಮತ್ತು ಕಚೇರಿ ಕೆಲಸದಿಂದ ಹೆಚ್ಚಿನ ಒತ್ತಡ ಎದುರಿಸುತ್ತಿದ್ದಾರೆ. ಅವರು ನಿತ್ಯ ಯೋಗ ಮಾಡುವುದರಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು. ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು ಮತ್ತು ಧ್ಯಾನ ರೂಢಿಸಿಕೊಳ್ಳಬೇಕು. ಕಲಿಕೆಯಲ್ಲಿ ಆಸಕ್ತಿ ಮೈಗೂಡಿಸಿಕೊಳ್ಳಬೇಕು. ಕೀಳರಿಮೆ ಬಿಟ್ಟು ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ADVERTISEMENT

‘ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ಆರೋಗ್ಯದ ದೃಷ್ಟಿಯಿಂದ ಸಸ್ಯಾಹಾರ ಪದ್ಧತಿ ಅಳವಡಿಸಿಕೊಳ್ಳುತ್ತಿದ್ದಾರೆ. ಫೈಬರ್, ಧಾನ್ಯಗಳು, ಕಾಳುಗಳು, ಬೀಜಗಳು ಇತ್ಯಾದಿ ಹೃದಯ ಮತ್ತು ದೇಹದ ಆರೋಗ್ಯಕ್ಕೆ ಉತ್ತಮವಾಗಿವೆ ಎಂದು ಸಂಶೋಧನೆಯಿಂದ ತಿಳಿದು ಬಂದಿದೆ. ಇದು ಕಡಿಮೆ ರಕ್ತದೊತ್ತಡ, ಮೂಳೆಗಳನ್ನು ಸದೃಢಗೊಳಿಸುವುದು, ತೂಕ ನಿರ್ವಹಣೆ ಹಾಗೂ ಮಧುಮೇಹ ನಿಯಂತ್ರಿಸಲು ಸಹಾಯ ಮಾಡುತ್ತದೆ’ ಎಂದರು.

ಪಿರಮಿಡ್ ಧ್ಯಾನ ಕೇಂದ್ರದ ಮುಖ್ಯಸ್ಥ ಎನ್. ಕೃಷ್ಣಪ್ಪ ಮಾತನಾಡಿ, ‘ಧ್ಯಾನ ಮತ್ತು ಯೋಗಾಸನ ಮಾಡುವುದರಿಂದ ಮನುಷ್ಯ ತನ್ನ ಜೀವಿತಾವಧಿಯವರೆಗೂ ಯಾವುದೇ ಆರೋಗ್ಯದ ಸಮಸ್ಯೆ ಇಲ್ಲದೆ ಜೀವಿಸಬಹುದು. ನಮ್ಮ ಧ್ಯಾನ ಕೇಂದ್ರದಲ್ಲಿ ಪ್ರತಿದಿನ ಉಚಿತವಾಗಿ ಯೋಗ ತರಬೇತಿ ನೀಡುತ್ತಿದ್ದು, ಸಾರ್ವಜನಿಕರು ಇದರ ಸದುಪಯೋಗಪಡಿಸಿಕೊಳ್ಳಬೇಕು’ ಎಂದು ಹೇಳಿದರು.

ವಕೀಲರಾದ ಗೋಪಾಲಗೌಡ, ಕಿರಣ್, ಶಿಕ್ಷಕ ವಿ.ಎಸ್. ಪ್ರಶಾಂತ್, ಪ್ರಭು ಹಾಗೂ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.