ADVERTISEMENT

ಪದವೀಧರರ ಹಿತಕ್ಕಾಗಿ ಹೋರಾಟ: ಪಕ್ಷೇತರ ಅಭ್ಯರ್ಥಿ

​ಪ್ರಜಾವಾಣಿ ವಾರ್ತೆ
Published 1 ಜೂನ್ 2024, 4:53 IST
Last Updated 1 ಜೂನ್ 2024, 4:53 IST

ರಾಮನಗರ: ‘ಪದವೀಧರರ ಪ್ರತಿನಿಧಿಯಾಗಿ ನಾನು ಆಯ್ಕೆಯಾದರೆ ಆರೋಗ್ಯ, ಶಿಕ್ಷಣ, ಉದ್ಯೋಗ ಭದ್ರತೆ, ಸರ್ಕಾರಿ ಕಾಲೇಜುಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ, ಗುತ್ತಿಗೆ ನೇಮಕಾತಿಗಳನ್ನು ಕ್ರಮಬದ್ಧಗೊಳಿಸುವ ನಿಟ್ಟಿನಲ್ಲಿ ವಿಧಾನ ಪರಿಷತ್‌ನಲ್ಲಿ ಹೋರಾಟ ನಡೆಸುತ್ತೇನೆ’ ಎಂದು ಬೆಂಗಳೂರು ಪದವೀಧರರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಡಾ. ಭಾನುಪ್ರಕಾಶ್ ಹೇಳಿದರು.

‘ಸಮಾಜದಲ್ಲಿ ಪದವೀಧರರ ಪಾತ್ರ ಮಹತ್ತರವಾದುದು. ಅಂತಹವರ ಪ್ರತಿನಿಧಿಯಾದವರು ತಮ್ಮ ಕರ್ತವ್ಯವನ್ನು ಸರಿಯಾಗಿ ನಿಭಾಯಿಸಬೇಕು. ಇದುವರೆಗೆ ಪ್ರತಿನಿಧಿಸಿದವರು ಆ ಕೆಲಸ ಮಾಡಿಲ್ಲ. ಕರ್ಮ ಸಿದ್ಧಾಂತದ ಮೇಲೆ ನಂಬಿಕೆ ಇಟ್ಟಿರುವ ನಾನು, ಪದವೀಧರರ ಸೇವಾಕಾಂಕ್ಷಿಯಾಗಿ ರಾಜಕೀಯ ಪ್ರವೇಶಿಸಿದ್ದೇನೆ’ ಎಂದು ನಗರದ ಖಾಸಗಿ ಹೋಟೆಲ್‌ನಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಹಿಂದಿಗಿಂತಲೂ ಈ ಸಲದ ಚುನಾವಣೆಯು ಹೆಚ್ಚಿನ ಬಿರುಸು ಪಡೆದಿದ್ದು, ಜಿದ್ದಾಜಿದ್ದಿಯಿಂದ ಕೂಡಿದೆ. ದೊಡ್ಡ ರಾಜಕೀಯ ನಾಯಕರೇ ತಮ್ಮ ಅಭ್ಯರ್ಥಿ ಪರವಾಗಿ ಪ್ರಚಾರಕ್ಕಿಳಿದಿದ್ದಾರೆ. ಸ್ಥಳೀಯ ಮುಖಂಡರ ನೇತೃತ್ವದಲ್ಲಿ ನೋಂದಣಿ ನಡೆದಿರುವುದರಿಂದ ಈ ಸಲ ಮತದಾರರ ಸಂಖ್ಯೆ ಹಿಗ್ಗಿದೆ. ಬೆಂಗಳೂರಿನಲ್ಲಿ ಪದವೀಧರರಲ್ಲದವರು ಸಹ ನೋಂದಣಿಯಾಗಿದ್ದು, ಕೆಲ ಅಭ್ಯರ್ಥಿಗಳು ಗೆಲುವಿಗಾಗಿ ಅಡ್ಡದಾರಿ ಹಿಡಿದಿರುವುದು ಇದರಿಂದ ಸ್ಪಷ್ಟವಾಗುತ್ತದೆ.‌ ಇದರಲ್ಲಿ ಅಧಿಕಾರಿಗಳ ಲೋಪವೂ ಇದೆ’ ಎಂದು ಆರೋಪಿಸಿದರು.

ADVERTISEMENT

‘ಈ ಚುನಾವಣೆಯು ಪ್ರಾಶಸ್ತ್ಯ ಮತದ ಆಧಾರದ ಮೇಲೆ ನಡೆಯಲಿದೆ. ಕೇವಲ ಒಬ್ಬರಿಗಷ್ಟೇ ಅಲ್ಲದೆ, ಉಳಿದ ಅಭ್ಯರ್ಥಿಗಳಿಗೂ ಮತ ನೀಡುವ ಹಕ್ಕು ಮತದಾರನಿಗಿದೆ. ಪದವೀಧರರನ್ನು ಇದನ್ನು ಅರಿತುಕೊಂಡು ಮತ ಚಲಾಯಿಸಬೇಕಿದೆ’ ಎಂದರು.

ರಂಗಕರ್ಮಿ ಗೋವಿಂದಸ್ವಾಮಿ ಹಾಗೂ ಮುಖಂಡ ರವಿಕುಮಾರ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.