ರಾಮನಗರ: ತ್ರಿವಿಧ ದಾಸೋಹಿ, ಸಿದ್ಧಗಂಗಾ ಮಠದ ಲಿಂಗೈಕ್ಯ ಶಿವಕುಮಾರ ಸ್ವಾಮೀಜಿ ಅವರ ಹುಟ್ಟೂರಾದ ಮಾಗಡಿ ತಾಲ್ಲೂಕಿನ ವೀರಾಪುರ ಗ್ರಾಮದ ಅಭಿವೃದ್ಧಿ ಇನ್ನೂ ಮರೀಚಿಕೆಯಾಗಿಯೇ ಉಳಿದಿದೆ. ಶ್ರೀಗಳ 111 ಅಡಿ ಎತ್ತರದ ಪ್ರತಿಮೆ ಕಾಮಗಾರಿಗೂ ಕಾಲ ಕೂಡಿಬಂದಿಲ್ಲ.
ಶ್ರೀಗಳು ಹುಟ್ಟಿ ಬೆಳೆದ ವೀರಾಪುರವನ್ನು ಪಾರಂಪರಿಕ ಹಾಗೂ ವಿಶ್ವದರ್ಜೆಯ ಸಾಂಸ್ಕೃತಿಕ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸುವುದಾಗಿ ರಾಜ್ಯ ಸರ್ಕಾರ ಘೋಷಿಸಿತ್ತು. ಇದಕ್ಕಾಗಿ ಬಜೆಟ್‌ನಲ್ಲಿ ₹ 25 ಕೋಟಿ ಅನುದಾನವನ್ನೂ ತೆಗೆದಿಟ್ಟಿತ್ತು. ಶ್ರೀಗಳು 111 ವರ್ಷ ಜೀವಿಸಿ ಸಮಾಜದ ಒಳಿತಿಗೆ ತಮ್ಮ ಬದುಕನ್ನು ಸಮರ್ಪಿಸಿಕೊಂಡವರು. ಅದರ ಸವಿನೆನಪಿಗಾಗಿ ವೀರಾಪುರ ಸಮೀಪದ ಗುಡ್ಡದಲ್ಲಿ ಅವರ 111 ಅಡಿ ಎತ್ತರದ ಪ್ರತಿಮೆ ನಿರ್ಮಾಣ ಕಾರ್ಯಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ 2019ರ ನ. 8ರಂದು ಶಂಕುಸ್ಥಾಪನೆ ನೆರವೇರಿಸಿದ್ದರು.
ನೂರೆಂಟು ವಿಘ್ನ:
ಶಿವಗಂಗೆ ಬೆಟ್ಟಕ್ಕೆ ಅಭಿಮುಖವಾಗಿ ನಿರ್ಮಾಣ ಆಗಲಿರುವ ಶ್ರೀಗಳ ಪ್ರತಿಮೆಯ ಬಂಡೆಯಾಕಾರದ ತಳಹದಿಯೇ 30 ಅಡಿ ಎತ್ತರ ಇರಲಿದೆ. ಅದರ ಮೇಲೆ ಊರುಗೋಲು ಹಿಡಿದುಕೊಂಡಿರುವ ಖಾವಿಧಾರಿ ಶ್ರೀಗಳ ಬೃಹತ್ ಪ್ರತಿಮೆ ನಿರ್ಮಾಣ ಆಗಲಿದೆ. ತಳಪಾಯದಲ್ಲಿ ಸಭಾಭವನ, ವಸ್ತು ಸಂಗ್ರಹಾಲಯ, ಧ್ಯಾನ ಕೊಠಡಿ ನಿರ್ಮಾಣಕ್ಕೆ ವಿನ್ಯಾಸ ಮಾಡಲಾಗಿದೆ. ಪ್ರಕೃತಿ ವಿಕೋಪಗಳನ್ನು ತಾಳಿಕೊಳ್ಳುವ ಶಕ್ತಿ ಈ ಪ್ರತಿಮೆಗೆ ಇರಲಿದ್ದು, ಪಿಎಸ್‌ಎಪಿ ಎನ್ನುವ ಕಂಪನಿ ನಿರ್ಮಾಣದ ಜವಾಬ್ದಾರಿ ವಹಿಸಿಕೊಂಡಿದೆ.
ಪ್ರತಿಮೆ ಕಾಮಗಾರಿಗೆ ಚಾಲನೆ ನೀಡಿ ವರ್ಷವೇ ಕಳೆದಿದೆ. ಅರಣ್ಯ ಇಲಾಖೆಗೆ ಸೇರಿದ ಜಾಗ ಇದಾಗಿದ್ದು, ದಾಖಲೆಗಳ ಹಸ್ತಾಂತರಕ್ಕೆ ಸಮಯ ವ್ಯಯವಾಗಿದೆ. ಕೆಲವು ರಾಜಕೀಯ ಕಾರಣಗಳಿಂದಾಗಿ ಕಾಮಗಾರಿ ಇನ್ನೂ ಆರಂಭಗೊಂಡಿಲ್ಲ. ಪ್ರತಿಮೆ ಹೊರತುಪಡಿಸಿ ಒಟ್ಟು 17 ಎಕರೆ ಪ್ರದೇಶದಲ್ಲಿ ವಿವಿಧ ಅಭಿವೃದ್ದಿ ಯೋಜನೆಗಳಿಗೆ ಸರ್ಕಾರ ಆಸಕ್ತಿ ತೋರಿದೆ. ಧ್ಯಾನ ಕೇಂದ್ರ, ಸಭಾಂಗಣ, ಮ್ಯೂಸಿಯಂ, ಉದ್ಯಾನ, ದಾಸೋಹ ಭವನ, ಯಾತ್ರಿಗಳಿಗಾಗಿ ಭವನಗಳು ಮೊದಲಾದವುಗಳ ನಿರ್ಮಾಣಕ್ಕೆ ಯೋಜಿಸಲಾಗಿದೆ. ಆದರೆ ಈ ಎಲ್ಲ ಯೋಜನೆಗಳು ಇನ್ನೂ ಕಾಗದದ ರೂಪದಲ್ಲಿಯೇ ಇವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.