ADVERTISEMENT

ಅಧ್ಯಕ್ಷರ ಚುನಾವಣೆ ದಿಢೀರ್ ರದ್ದು: ಆಕ್ರೋಶ

ಹಳ್ಳಿಮಾಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ; ಮೈತ್ರಿ ಮುಖಂಡರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 9 ಜುಲೈ 2024, 5:00 IST
Last Updated 9 ಜುಲೈ 2024, 5:00 IST
ರಾಮನಗರ ತಾಲ್ಲೂಕಿನ ಹಳ್ಳಿಮಾಳ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಅಧ್ಯಕ್ಷ ಸ್ಥಾನದ ಚುನಾವಣೆ ಅಂಗವಾಗಿ, ಸೋಮವಾರ ಸಂಘದ ಬಳಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು
ರಾಮನಗರ ತಾಲ್ಲೂಕಿನ ಹಳ್ಳಿಮಾಳ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಅಧ್ಯಕ್ಷ ಸ್ಥಾನದ ಚುನಾವಣೆ ಅಂಗವಾಗಿ, ಸೋಮವಾರ ಸಂಘದ ಬಳಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು   

ರಾಮನಗರ: ತಾಲ್ಲೂಕಿನ ಹಳ್ಳಿಮಾಳ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಸೋಮವಾರ ನಡೆಯಬೇಕಿದ್ದ ಚುನಾವಣೆಯನ್ನು ಚುನಾವಣಾಧಿಕಾರಿ ದಿಢೀರ್ ರದ್ದುಪಡಿಸಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಇದನ್ನು ಘಟನೆ ಖಂಡಿಸಿ ಸಂಘದ ಜೆಡಿಎಸ್–ಬಿಜೆಪಿ ಬೆಂಬಲಿತ ನಿರ್ದೇಶಕರು, ಸ್ಥಳೀಯ ಮುಖಂಡರು ಹಾಗೂ ಪಕ್ಷಗಳ ಕಾರ್ಯಕರ್ತರು ಸಂಘದ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಸಂಘದ ಅಧ್ಯಕ್ಷ ಸ್ಥಾನಕ್ಕೆ ಬೆಳಿಗ್ಗೆ ಮತದಾನ ಪ್ರಕ್ರಿಯೆ ನಿಗದಿಯಾಗಿತ್ತು. ಅಹಿತರ ಘಟನೆಗೆ ಆಸ್ಪದವಿಲ್ಲದಂತೆ ಪೊಲೀಸ್ ಬಂದೋಬಸ್ತ್ ಕೂಡ ಮಾಡಲಾಗಿತ್ತು. ಬೆಳಿಗ್ಗೆ ಮತದಾನಕ್ಕಾಗಿ ಜೆಡಿಎಸ್ ಬೆಂಬಲಿತ ನಿರ್ದೇಶಕರು ಸಂಘಕ್ಕೆ ಬಂದಾಗ, ಚುನಾವಣಾಧಿಕಾರಿ ರಮ್ಯಶ್ರೀ ಹಾಗೂ ಕಾಂಗ್ರೆಸ್ ಬೆಂಬಲಿತ ನಿರ್ದೇಶಕರು ಗೈರಾಗಿದ್ದರು.

ಮತದಾನ ಪ್ರಕ್ರಿಯೆ ಶುರುವಾಗದಿರುವ ಕುರಿತು ನಿರ್ದೇಶಕರು ಸಂಘದ ಕಾರ್ಯನಿರ್ವಹಣಾಧಿಕಾರಿಯನ್ನು ಪ್ರಶ್ನಿಸಿದಾಗ, ಚುನಾವಣೆ ರದ್ದುಗೊಂಡಿರುವುದಾಗಿ ತಿಳಿಸಿದರು. ಈ ಕುರಿತು ಚುನಾವಣಾಧಿಕಾರಿ ವಾಟ್ಸ್‌ಆ್ಯಪ್‌ನಲ್ಲಿ ಪ್ರಕಟಣೆ ಕಳಿಸಿರುವುದನ್ನು ತೋರಿಸಿದರು. ಅಲ್ಲದೆ, ಅನಾಮಧೇಯ ವ್ಯಕ್ತಿಯೊಬ್ಬ ಸಂಘದ ನೋಟಿಸ್ ಬೋರ್ಡಿನಲ್ಲಿ ಪ್ರಕಟಣೆ ಅಂಟಿಸಿರುವ ಕುರಿತು ವಿಷಯ ನಿರ್ದೇಶಕರ ಗಮನಕ್ಕೆ ಬಂತು.

ADVERTISEMENT

ಇದರಿಂದ ಆಕ್ರೋಶಗೊಂಡ ನಿರ್ದೇಶಕರು, ಮುನ್ಸೂಚನೆ ನೀಡದೆ ಚುನಾವಣೆ ರದ್ದುಪಡಿಸಿರುವ ಕಾರ್ಯನಿರ್ವಹಣಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯ ಜೆಡಿಎಸ್ ಮತ್ತು ಬಿಜೆಪಿ ಮುಖಂಡರು ಸ್ಥಳದಲ್ಲಿ ಜಮಾಯಿಸಿದರು. ಸ್ಥಳದಲ್ಲಿ ಕೆಲ ಹೊತ್ತು ಪ್ರತಿಭಟನೆ ನಡೆಸಿದರು.

ದಿನಾಂಕ ನಿಗದಿಗೆ ಪಟ್ಟು: ಚುನಾವಣೆ ರದ್ದು ಖಂಡಿಸಿದ ಪ್ರತಿಭಟನಾಕಾರರು, ಹಳ್ಳಿಮಾಳದಿಂದ ರಾಮನಗರದ‌ ರಾಮನಗರದ ಕಂದಾಯ ಭವನದಲ್ಲಿರುವ ಸಹಕಾರ ಸಂಘಗಳ ಉಪನಿಬಂಧಕರು ಹಾಗೂ ಸಂಘಗಳ ನೋಂದಣಾಧಿಕಾರಿಗಳ ಕಚೇರಿಗೆ ಬಂದು ಮುತ್ತಿಗೆ ಹಾಕಿದರು. ಉಪನಿಬಂಧಕರನ್ನು ತರಾಟೆ ತೆಗೆದುಕೊಂಡರು.

ಅಧ್ಯಕ್ಷರ ಚುನಾವಣೆಗೆ ಈಗಲೇ ದಿನಾಂಕ ನಿಗದಿಪಡಿಸಬೇಕು ಹಾಗೂ ಕರ್ತವ್ಯಲೋಪ ಎಸಗಿದ ಚುನಾವಣಾಧಿಕಾರಿ ರಮ್ಯಶ್ರಿ ಅಮಾನತಿಗೆ ಪಟ್ಟು ಹಿಡಿದರು. ಅದಕ್ಕೆ ಪ್ರತಿಕ್ರಿಯಿಸಿದ ಉಪ ನಿಬಂಧಕ, ‘ರಮ್ಯಶ್ರೀ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಮೇಲಧಿಕಾರಿಗಳ ಸಲಹೆ ಮೇರೆಗೆ ಮತ್ತೊಂದು ದಿನಾಂಕ ನಿಗದಿಪಡಿಸಲಾಗುವುದು. ಆಗ ಮಂಜುನಾಥ್ ಅವರನ್ನು ಚುನಾವಣಾಧಿಕಾರಿಯಾಗಿ ನಿಯೋಜಿಸಲಾಗುವುದು’ ಎಂದು ಭರವಸೆ ನೀಡಿದರು.

ಅದಕ್ಕೆ ಒಪ್ಪದ ಪ್ರತಿಭಟನಾಕಾರರು, ದಿನಾಂಕ ನಿಗದಿಪಡಿಸುವವರೆಗೆ ಕಚೇರಿಯಿಂದ ಕದಲುವುದಿಲ್ಲ ಎಂದು ಸ್ಥಳಲ್ಲೇ ಕುಳಿತರು. ಅಧಿಕಾರಿಗಳ ವಿರುದ್ಧ, ಸರ್ಕಾರ ಹಾಗೂ ಸ್ಥಳೀಯ ಶಾಸಕರ ವಿರುದ್ಧ ಘೋಷಣೆಗಳನ್ನು ಕೂಗಿದರು. ಮಧ್ಯಾಹ್ನದವರೆಗೆ ಪ್ರತಿಭಟನೆ ನಡೆಸಿದರೂ, ಅಧಿಕಾರಿಗಳು ತಮ್ಮ ಮಾತು ಬದಲಿಸಲಿಲ್ಲ. ಆಗ ಪ್ರತಿಭಟನೆ ತೀವ್ರಗೊಳಿಸುವ ನಿರ್ಧಾರದೊಂದಿಗೆ ಸ್ಥಳದಿಂದ ತೆರಳಿದರು.

ಬಮೂಲ್ ನಿರ್ದೇಶಕ ಜಯಮುತ್ತು, ಬಿಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಪಿ. ಅಶ್ವತ್ಥ್ , ಜೆಡಿಎಸ್ ಮುಖಂಡರಾದ ಮಂಜುನಾಥ್ , ದೊರೆಸ್ವಾಮಿ, ಗೂಳಿಗೌಡ, ಕೃಷ್ಣ, ಸುಗ್ಗಮನಹಳ್ಳಿ ರಾಮಕೃಷ್ಣಯ್ಯ, ಚಂದ್ರಶೇಖರ್, ಜಯಕುಮಾರ್, ವಾಸು ನಾಯಕ ಸೇರಿದಂತೆ ಹಲವರು ಇದ್ದರು.

ರಾಮನಗರ ತಾಲ್ಲೂಕಿನ ಹಳ್ಳಿಮಾಳ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಅಧ್ಯಕ್ಷ ಸ್ಥಾನದ ಚುನಾವಣೆ ರದ್ದುಪಡಿಸಿರುವುದನ್ನು ಖಂಡಿಸಿ ರಾಮನಗರದ ಕಂದಾಯ ಭವನದಲ್ಲಿರುವ ಹಕಾರ ಸಂಘಗಳ ಉಪನಿಬಂಧಕರು ಹಾಗೂ ಸಂಘಗಳ ನೋಂದಣಾಧಿಕಾರಿಗಳ ಕಚೇರಿಗೆ ಸಂಘದ ಜೆಡಿಎ‌ಸ್–ಬಿಜೆಪಿ ಬೆಂಬಲಿತ ನಿರ್ದೇಶಕರು ಹಾಗೂ ಮುಖಂಡರು ಮುತ್ತಿಗೆ ಹಾಕಿದರು

ಇಂದು ಪ್ರತಿಭಟನೆ: ಸಂಸದ ನಿಖಿಲ್ ಭಾಗಿ

ರಾಜಕೀಯ ಒತ್ತಡಕ್ಕೆ ಸಂಘದ ಅಧ್ಯಕ್ಷ ಸ್ಥಾನದ ಚುನಾವಣೆ ರದ್ದುಪಡಿಸಿರುವ ಸಹಕಾರ ಸಂಘದ ಅಧಿಕಾರಿಗಳ ನಡೆ ಖಂಡಿಸಿ ಜೆಡಿಎಸ್–ಬಿಜೆಪಿ ಮಂಗಳವಾರ ಕಂದಾಯ ಭವನದ ಎದುರು ಬೃಹತ್ ಪ್ರತಿಭಟನೆಗೆ ನಿರ್ಧರಿಸಿದೆ. ‘ಪ್ರತಿಭಟನೆಯಲ್ಲಿ ಸಂಸದ ಡಾ. ಸಿ.ಎನ್. ಮಂಜುನಾಥ್ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಪ್ರತಿಭಟನೆ ನಡೆಸಿ ನೋಂದಣಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು. ಪ್ರತಿ ಪಂಚಾಯಿತಿಯಿಂದಲೂ ತಲಾ ನೂರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ’ ಎಂದು ಕಂದಾಯ ಭವನದಲ್ಲಿ ಸಂಜೆ ನಡೆದ ಸುದ್ದಿಗೋಷ್ಠಿಯಲ್ಲಿ ಬಿಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಪಿ. ಅಶ್ವತ್ಥ್ ಹೇಳಿದರು. ಜೆಡಿಎಸ್ ಮುಖಂಡ ಉಮೇಶ್ ಮಾತನಾಡಿ ‘ಜೂನ್ 29ರಂದೇ ನಿಗದಿಯಾಗಿದ್ದ ಚುನಾವಣೆಯನ್ನು ಜುಲೈ 8ಕ್ಕೆ ಮುಂದೂಡಿದ್ದರು. ಈಗ ಮುಂದಿನ ದಿನಾಂಕ ತಿಳಿಸದೆ ರದ್ದುಪಡಿಸಿದ್ದಾರೆ. ಇದೆಲ್ಲವೂ ಪೂರ್ವನಿಯೋಜಿತವಾಗಿದೆ. ಕಾಂಗ್ರೆಸ್‌ನವರಿಗೆ ಅಧ್ಯಕ್ಷ ಪಟ್ಟ ಕಟ್ಟಲು ಜೆಡಿಎಸ್‌ ಬೆಂಬಲಿತ ನಿರ್ದೇಶಕರನ್ನು ತಮ್ಮತ್ತ ಸೆಳೆಯಲು ಕಾಂಗ್ರೆಸ್‌ನವರು ಮಾಡಿರುವ ಷಡ್ಯಂತ್ರವಿದು’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.