ರಾಮನಗರ: ನೈಸ್ ಕಂಪನಿಯು ರೈತರ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಭಾರೀ ಭ್ರಷ್ಟಾಚಾರ ನಡೆಸಿದೆ. ಇದನ್ನು ಪ್ರಶ್ನಿಸಿದ ರೈತರ ಮೇಲೆ ದೌರ್ಜನ್ಯ ನಡೆಸುತ್ತಿದೆ ಎಂದು ಆರೋಪಿಸಿ, ಕರ್ನಾಟಕ ಪ್ರಾಂತ ರೈತ ಸಂಘದ (ಕೆಪಿಆರ್‌ಎಸ್) ನೈಸ್ ಭೂ ಸಂತ್ರಸ್ತ ರೈತರ ಹೋರಾಟ ಸಮಿತಿ ಸದಸ್ಯರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.
ನೈಸ್ ಕಂಪನಿ ಹಾಗೂ ಅದರ ಮುಖ್ಯ ಅಶೋಕ ಖೇಣಿ ವಿರುದ್ಧ ಘೋಷಣೆಗಳನ್ನು ಕೂಗಿದ ಸದಸ್ಯರು, ರೈತರ ಭೂಮಿಯನ್ನು ಹಿಂದಿರುಗಿಸಬೇಕು ಎಂದು ಆಗ್ರಹಿಸಿದರು. ‘ನೈಸ್ ಕಂಪನಿ ತೊಲಗಿಸಿ’, ‘ಭೂಮಿ ಹಿಂದಿರುಗಿಸಿ ರೈತರನ್ನು ಉಳಿಸಿ’ ಎಂಬ ಫಲಕಗಳನ್ನು ಪ್ರದರ್ಶಿಸಿದರು.
ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಯಶವಂತ್ ಟಿ. ಮಾತನಾಡಿ, ‘ರಸ್ತೆ ನಿರ್ಮಾಣಕ್ಕಾಗಿ ನೈಸ್ ಕಂಪನಿಯು 1997ರಲ್ಲಿ ಬೆಂಗಳೂರಿನಿಂದ ಮೈಸೂರಿನ ತನಕ, ಸುಮಾರು 152 ಗ್ರಾಮಗಳ ಸಾವಿರಾರು ಎಕರೆ ಭೂಮಿಯನ್ನು ಕೆಐಡಿಬಿ ಮೂಲಕ ವಶಪಡಿಸಿಕೊಂಡಿದೆ. ಆದರೆ, ಒಪ್ಪಂದದ ಪ್ರಕಾರ ಇದುವರೆಗೆ ರಸ್ತೆ ನಿರ್ಮಾಣ ಮಾಡಿಲ್ಲ’ ಎಂದು ಆರೋಪಿಸಿದರು.
‘ಕೇವಲ ನೆಲಮಂಗಲ ರಸ್ತೆಯಿಂದ ಹೊಸೂರು ರಸ್ತೆಯವರೆಗೆ ಮಾತ್ರ ರಸ್ತೆ ನಿರ್ಮಿಸಲಾಗಿದೆ. ಮೂಲ ಒಪ್ಪಂದಕ್ಕೆ ವಿರುದ್ಧವಾಗಿ ಕಾಮಗಾರಿ ನಡೆಸಿರುವ ಕಂಪನಿ ಅವ್ಯವಹಾರದಲ್ಲಿ ತೊಡಗಿದೆ. ಅಕ್ರಮದ ಕುರಿತು ಕ್ರಮ ಕೈಗೊಳ್ಳುವಂತೆ ಸುಪ್ರೀಂ ಕೋರ್ಟ್ ಸೂಚಿಸಿದೆ. ಅವ್ಯವಹಾರ ಕುರಿತು ತನಿಖೆ ನಡೆಸಿದ್ದ ಸರ್ಕಾರದ ಸದನ ಸಮಿತಿ ಸಹ ಭೂ ಸ್ವಾಧೀನದಲ್ಲಿ ಭ್ರಷ್ಟಾಚಾರ ನಡೆದಿರುವುದನ್ನು ಪತ್ತೆಹಚ್ಚಿ, ಕ್ರಮಕ್ಕೆ ಶಿಫಾರಸು ಮಾಡಿತ್ತು. ಆದರೂ, ಸರ್ಕಾರಗಳು ಇದುವರೆಗೆ ಕ್ರಮ ಕೈಗೊಂಡಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ಸರ್ಕಾರದ ಉಪ ಸಮಿತಿ ಸಹ 2023ರಲ್ಲಿ ಕಂಪನಿಯ ಅಕ್ರಮಗಳನ್ನು ಪರಿಶೀಲಿಸಿತ್ತು. 27 ವರ್ಷವಾದರೂ ರಸ್ತೆ ಅಭಿವೃದ್ಧಿಯಾಗದ ಕಾರಣ ಸುಮಾರು ₹3 ಸಾವಿರ ಕೋಟಿ ಪರಿಹಾರ ನೀಡಬೇಕು. ಇಲ್ಲದಿದ್ದರೆ, ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮತ್ತೆ ಅರ್ಜಿ ಸಲ್ಲಿಸಿ, ರೈತರ ಭೂಮಿಯನ್ನು ವಾಪಸ್ ಪಡೆಯಬೇಕು ಎಂದು ಹೇಳಿತ್ತು. ಆ ಬಗ್ಗೆಯೂ ಯಾರೂ ಚಕಾರ ಎತ್ತಿಲ್ಲ. ಈಗಿನ ಸರ್ಕಾರವಾದರೂ ಕಂಪನಿಯ ಅಕ್ರಮದ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.
ಸಮಿತಿ ಅಧ್ಯಕ್ಷ ನಾರಾಯಣಪ್ಪ, ಚಂದ್ರಶೇಖರ ಡಿ, ಸೋಮೇಶ್ವರ, ಸಂಪತ್ ಕುಮಾರ್, ಕುಂಟೀರಪ್ಪ, ಶಶಿಕುಮಾರ್, ದಿನೇಶ್ ಆರಾಧ್ಯ, ರಾಮಣ್ಣ ಹಾಗೂ ಇತರರು ಇದ್ದರು.
‘ಪ್ರಶ್ನಿಸುವ ರೈತರಿಗೆ ತೊಂದರೆ’
‘ನೈಸ್ ಕಂಪನಿ ವ್ಯಾಪ್ತಿಯಲ್ಲಿ ಬರುವ ರೈತರ ಜಮೀನಿನ ಪಹಣಿಯು ನೈಸ್ ಕಂಪನಿ ಹೆಸರಿನಲ್ಲೇ ದಾಖಲಾಗಿದೆ. ಕಾನೂನುಬಾಹಿರವಾಗಿ ಜಮೀನು ವಶಪಡಿಸಿಕೊಂಡಿರುವ ಕಂಪನಿ ಪೊಲೀಸರು ಮತ್ತು ರೌಡಿಗಳನ್ನು ಬಳಸಿಕೊಂಡು ರೈತರಿಗೆ ತೊಂದರೆ ಕೊಡುತ್ತಿದೆ’ ಎಂದು ಸಮಿತಿಯ ಎನ್. ವೆಂಕಟಾಚಲಯ್ಯ ದೂರಿದರು. ‘ರೈತರಿಂದ ವಶಪಡಿಸಿಕೊಂಡ ಜಮೀನಿನಲ್ಲಿ ಕಂಪನಿ ರಿಯಲ್ ಎಸ್ಟೇಟ್ ದಂಧೆ ಮಾಡುತ್ತಿದೆ. ಸರ್ಕಾರವು ಕಂಪನಿಯಿಂದ ರೈತರ ಭೂಮಿಯನ್ನು ತನ್ನ ವಶಕ್ಕೆ ಪಡೆಯಬೇಕು. ಕಂಪನಿಯ ಭ್ರಷ್ಟಾಚಾರದ ಕುರಿತು ತನಿಖೆ ನಡೆಸಬೇಕು. ಕಾಂಗ್ರೆಸ್ ಶಾಸಕ ಟಿ.ಬಿ. ಜಯಚಂದ್ರ ಅವರಿಗೆ ಜೀವ ಬೆದರಿಕೆ ಹಾಕಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.