ಚನ್ನಪಟ್ಟಣ: ಮೈಸೂರಿನಲ್ಲಿ ಮಹಿಷ ದಸರಾ ವೇಳೆ ಸಾಹಿತಿ ಪ್ರೊ. ಭಗವಾನ್ ಅವರು ಒಕ್ಕಲಿಗರು ಸಂಸ್ಕೃತಿ ಹೀನರು ಎಂದು ರಾಷ್ಟ್ರಕವಿ ಕುವೆಂಪು ಈ ಹಿಂದೆ ಹೇಳಿದ್ದರು ಎಂದು ಹೇಳಿರುವ ಹೇಳಿಕೆಯನ್ನು ವಿರೋಧಿಸಿ ನಗರದ ಬಸ್ ನಿಲ್ದಾಣದ ಬಳಿ ತಾಲ್ಲೂಕು ಒಕ್ಕಲಿಗ ಮುಖಂಡರು ಭಾನುವಾರ ಪ್ರತಿಭಟನೆ ನಡೆಸಿದರು.
ಭಗವಾನ್ ವಿರುದ್ಧ ಧಿಕ್ಕಾರ ಕೂಗಿದ ಪ್ರತಿಭಟನಕಾರರು, ಭಗವಾನ್ ತಮ್ಮ ಹೇಳಿಕೆಗೆ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದರು.
ಮುಖಂಡ ಕೆ.ಮಲ್ಲಯ್ಯ ಮಾತನಾಡಿ, ಭಗವಾನ್ ಅವರದ್ದು ವಿದ್ಯಾರ್ಥಿ ದೆಸೆಯಿಂದಲೂ ವಿಕೃತಿಯನ್ನು ಮೆರೆಯುವ ವ್ಯಕ್ತಿತ್ವ. ಒಕ್ಕಲಿಗರ ಬಗ್ಗೆ ಸಲ್ಲದ ಹೇಳಿಕೆ ನೀಡಿರುವ ಅವರು ಕೂಡಲೇ ಸಮುದಾಯದ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.
ರಮೇಶ್ ಗೌಡ ಮಾತನಾಡಿ, ಭಗವಾನ್ ಅವರು ತಮ್ಮ ಘನತೆಗೆ ತಕ್ಕ ಹೇಳಿಕೆ ನೀಡಿಲ್ಲ. ಅವರು ಈ ಹಿಂದೆ ಹಿಂದೂ ಧರ್ಮವನ್ನು ಅವಹೇಳನ ಮಾಡಿದ್ದರು. ಶ್ರೀರಾಮನ ಕುರಿತಾಗಿ ವ್ಯಂಗ್ಯ ಮಾಡಿದ್ದರು. ಇದೀಗ ಒಕ್ಕಲಿಗರು ಸಂಸ್ಕೃತಿ ಹೀನರು ಎಂದು ಕುವೆಂಪು ಹೇಳಿದ್ದರು ಎಂದು ಹೇಳಿ ತಮ್ಮ ಒಕ್ಕಲಿಗರ ವಿರೋಧಿತನವನ್ನು ತೋರಿಸಿ, ಇದನ್ನು ಕುವೆಂಪು ಹೇಳಿದ್ದರು ಎಂದು ಬಿಂಬಿಸಿಕೊಂಡಿದ್ದಾರೆ. ಒಕ್ಕಲಿಗರು ವಿಧಾನ ಸೌಧ, ವಿಕಾಸ ಸೌಧ, ಬೆಳಗಾವಿಯ ಸುವರ್ಣ ಸೌಧ, ಹಲವಾರು ಅಣೆಕಟ್ಟು, ಬೃಹತ್ ರಸ್ತೆ ನಿರ್ಮಾಣ ಮಾಡಿದ್ದಾರೆ. ಸರ್ವರಿಗೂ ಸಮ್ಮತವಾಗುವ ಆಡಳಿತ ನೀಡಿದ್ದಾರೆ. ಸಮುದಾಯದ ಬಗ್ಗೆ ಹಗುರವಾಗಿ ಮಾತನಾಡಿರುವ ಭಗವಾನ್ ಅವರಿಗೆ ಮುಂದೆ ಮಸಿ ಬಳಿಯುವ ಕಾರ್ಯಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸಮುದಾಯದ ಮುಖಂಡರಾದ ಕೆ.ಎನ್. ರಾಜು, ಬಿ.ಸಿ. ಯೋಗೇಶ್ ಗೌಡ, ಬೈರಾಪಟ್ಟಣ ರಾಮಕೃಷ್ಣ, ಗೌಡಗೆರೆ ತಿಮ್ಮೇಗೌಡ, ಚಿಕ್ಕೇನಹಳ್ಳಿ ಸುಧಾಕರ್, ರ‍್ಯಾಂಬೊ ಸೂರಿ, ರಾಮೇಗೌಡ ಇತರರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.