ADVERTISEMENT

‘ಕಾಡಾನೆ ನಿಯಂತ್ರಿಸಿ, ಇಲ್ಲದಿದ್ದರೆ ಜಮೀನು ಗುತ್ತಿಗೆ ತಗೋಳಿ’

ಕಾಡಾನೆ ಹಾವಳಿ ತಡೆಗೆ ಆಗ್ರಹ; ಅರಣ್ಯ ಇಲಾಖೆ ಕಚೇರಿ ಎದುರು ಶುರುವಾದ ಧರಣಿ ರಾತ್ರಿ ಅಂತ್ಯ

​ಪ್ರಜಾವಾಣಿ ವಾರ್ತೆ
Published 28 ಜೂನ್ 2024, 6:30 IST
Last Updated 28 ಜೂನ್ 2024, 6:30 IST
ಹೆಚ್ಚುತ್ತಿರುವ ಕಾಡಾನೆಗಳ ಉಪಟಳ ನಿಯಂತ್ರಣಕ್ಕೆ ಆಗ್ರಹಿಸಿ ರಾಮನಗರದ ಉಪ ಅರಣ್ಯ ಸಂರಕ್ಷಾಣಾಧಿಕಾರಿ ಕಚೇರಿ ಕಚೇರಿ ಎದುರು ಗುರುವಾರ ನಡೆದ ಅನಿರ್ದಿಷ್ಟಾವಧಿ ಧರಣಿಯಲ್ಲಿ ರೈತ ಮುಖಂಡ ಸಿ. ಪುಟ್ಟಸ್ವಾಮಿ ಮಾತನಾಡಿದರು. ಡಿಸಿಎಫ್ ರಾಮಕೃಷ್ಣಪ್ಪ, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಸಿ. ಶಿವಾನಂದಮೂರ್ತಿ ಇದ್ದಾರೆ
ಹೆಚ್ಚುತ್ತಿರುವ ಕಾಡಾನೆಗಳ ಉಪಟಳ ನಿಯಂತ್ರಣಕ್ಕೆ ಆಗ್ರಹಿಸಿ ರಾಮನಗರದ ಉಪ ಅರಣ್ಯ ಸಂರಕ್ಷಾಣಾಧಿಕಾರಿ ಕಚೇರಿ ಕಚೇರಿ ಎದುರು ಗುರುವಾರ ನಡೆದ ಅನಿರ್ದಿಷ್ಟಾವಧಿ ಧರಣಿಯಲ್ಲಿ ರೈತ ಮುಖಂಡ ಸಿ. ಪುಟ್ಟಸ್ವಾಮಿ ಮಾತನಾಡಿದರು. ಡಿಸಿಎಫ್ ರಾಮಕೃಷ್ಣಪ್ಪ, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಸಿ. ಶಿವಾನಂದಮೂರ್ತಿ ಇದ್ದಾರೆ   

ರಾಮನಗರ: ‘ಜಮೀನಿಗೆ ನುಗ್ಗಿ ನಮ್ಮ ಬದುಕನ್ನು ಮೂರಾಬಟ್ಟೆ ಮಾಡಿರುವ ಕಾಡಾನೆ ಸೇರಿದಂತೆ ವನ್ಯಜೀವಿಗಳಿಗೆ ಕಡಿವಾಣ ಹಾಕಿ. ಇಲ್ಲದಿದ್ದರೆ, ನಮ್ಮ ಜಮೀನನನ್ನು ಅರಣ್ಯ ಇಲಾಖೆಯವರೇ ಗುತ್ತಿಗೆ ತೆಗೆದುಕೊಂಡು ನಮಗೆ ವರ್ಷಕ್ಕಿಷ್ಟು ಮೊತ್ತ ಪಾವತಿಸಿ. ನಾವು ಹೇಗೋ ಬದುಕಿಕೊಳ್ಳುತ್ತೇವೆ...’

– ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕಾಡಾನೆಗಳ ಉಪಟಳ ಖಂಡಿಸಿ, ರೈತ ಸಂಘ, ಹಸಿರು ಸೇನೆ ಹಾಗೂ ಸಮಾನ ಮನಸ್ಕರ ಸಹಭಾಗಿತ್ವದಲ್ಲಿ ನಗರದ ಹೊರವಲಯದಲ್ಲಿರುವ ಉಪ ಅರಣ್ಯ ಸಂರಕ್ಷಾಣಾಧಿಕಾರಿ ಕಚೇರಿ ಬಳಿ ಗುರುವಾರ ಹಮ್ಮಿಕೊಂಡಿದ್ದ ಅನಿರ್ದಿಷ್ಟಾವಧಿ ಧರಣಿಯಲ್ಲಿ ರೈತರು ಅಧಿಕಾರಿಗಳಿಗೆ ಆಕ್ರೋಶದಿಂದ ಮಾಡಿದ ಮನವಿ ಇದು.

ಬೆಳಿಗ್ಗೆ ಕಚೇರಿ ಎದುರು ಜಮಾಯಿಸಿದ ರೈತರು ಉನ್ನತ ಅಧಿಕಾರಿಗಳು ಸ್ಥಳಕ್ಕೆ ಬಂದು ನಮ್ಮ ಸಮಸ್ಯೆಗೆ ಪರಿಹಾರ ಕೊಡಬೇಕು ಎಂದು ಪಟ್ಟು ಹಿಡಿದರು. ಆದರೆ ಅರಣ್ಯ ಇಲಾಖೆಯ ಡಿಸಿಎಫ್ ರಾಮಕೃಷ್ಣಪ್ಪ, ಹೆಚ್ಚುವರಿ ಜಿಲ್ಲಾಧಿಕಾರಿ, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ರಾಜು ಸೇರಿದಂತೆ ಜಿಲ್ಲಾ ಮಟ್ಟದ ಕೆಲ ಅಧಿಕಾರಿಗಳು ಧರಣಿನಿರತರನ್ನು ಭೇಟಿ ಮಾಡಿ, ಸಮಸ್ಯೆಗೆ ಸ್ಪಂದಿಸುವ ಭರವಸೆ ನೀಡಿದರು.

ADVERTISEMENT

ಅವರ ಮಾತಿಗೆ ಸೊಪ್ಪು ಹಾಕದ ರೈತರು ಸಂಜೆಯವರೆಗೆ ಕಚೇರಿಯಲ್ಲೇ ಬೀಡು ಬಿಟ್ಟರು. ಧರಣಿಯುದ್ದಕ್ಕೂ ಅರಣ್ಯ ಇಲಾಖೆ ಹಾಗೂ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಈ ವೇಳೆ, ಮನವೊಲಿಸಲು ಬಂದ ಪೊಲೀಸರು ಮತ್ತು ಧರಣಿನಿರತರ ನಡುವೆ ಮಾತಿನ ಚಕಮಕಿಯೂ ನಡೆಯಿತು. ಕಡೆಗೆ ಸಂಜೆ 7ರ ಸುಮಾರಿಗೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರ್ ಸ್ಥಳಕ್ಕೆ ಭೇಟಿ ನೀಡಿದರು.

ರೈತರ ಅಹವಾಲು ಆಲಿಸಿ ಅವರೊಂದಿಗೆ ಚರ್ಚಿಸಿದ ಶಿವಶಂಕರ್, ಕಾಡಾನೆ ಸೇರಿದಂತೆ ವನ್ಯಜೀವಿಗಳ ಹಾವಳಿ ತಡೆಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು. ಜೊತೆಗೆ ರೈತರು 25 ಬೇಡಿಕೆಗಳನ್ನು ಈಡೇರಿಸುವ ಕುರಿತು ಅಧಿಕಾರಿಗಳ ಮತ್ತು ಸರ್ಕಾರದ ಮಟ್ಟದಲ್ಲಿ ‌ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು. ಅವರ ಮಾತಿಗೆ ಒಪ್ಪಿಗೆ ಸೂಚಿಸಿದ ರೈತರು ರಾತ್ರಿ 9ರ ಸುಮಾರಿಗೆ ಧರಣಿ ಕೈಬಿಟ್ಟರು.

ರೈತ ಮುಖಂಡರಾದ ರುದ್ರಪ್ಪ, ರಾಜಣ್ಣ ಸೇರಿದಂತೆ ಜಿಲ್ಲೆಯ ವಿವಿಧ ಭಾಗದ ರೈತರು ಧರಣಿಯಲ್ಲಿ ಭಾಗವಹಿಸಿದ್ದರು. ಅರಣ್ಯ ಇಲಾಖೆ ಅಧಿಕಾರಿಗಳಾದ ಎಸಿಎಫ್ ಲಿಂಗರಾಜು, ಗಣೇಶ್, ಆರ್‌ಎಫ್‌ಓಗಳಾದ ದಾಳೇಶ್, ಆಶಾ, ಚೈತ್ರಾ, ರಾಮನಗರ ಗ್ರಾಮಾಂತರ ಠಾಣೆ ಇನ್‌ಸ್ಪೆಕ್ಟರ್ ರಮೇಶ್ ಹಾಗೂ ಇತರರು ಇದ್ದರು.

ಧರಣಿ ವೇಳೆ ರೈತರು ಮತ್ತು ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ರಮೇಶ್ ನಡುವೆ ಮಾತಿನ ಚಕಮಕಿ ನಡೆಯಿತು

ರೈಲ್ವೆ ಬ್ಯಾರಿಕೇಡ್ ಶೀಘ್ರ ಪೂರ್ಣ’

‘ಜಿಲ್ಲೆಯ ದೊಡ್ಡಕೆರೆ ಸಮೀಪ ಎರಡು ಕಿ.ಮೀ. ಉದ್ದದ ರೈಲ್ವೆ ಬ್ಯಾರಿಕೇಡ್ ನಿರ್ಮಾಣವನ್ನು ಸದ್ಯದಲ್ಲೇ ಪೂರ್ಣಗೊಳಿಸಲಾಗುವುದು. ಚಾಮರಾಜನಗರ ವ್ಯಾಪ್ತಿಯಲ್ಲಿ ಗುತ್ತಿಗೆದಾರರು ಸರಿಯಾಗಿ ಕಾರ್ಯನಿರ್ವಹಿಸದ ಕಾರಣ ಕೆಲವೆಡೆ ನಿರ್ಮಾಣ ಕಾರ್ಯ ವಿಳಂಬವಾಗಿದ್ದು ಅದನ್ನು ಪರಿಹರಿಸಲಾಗುವುದು. ಅಲ್ಲದೆಪ್ರಾಯೋಗಿಕವಾಗಿ ಕಬ್ಬಾಳು ಅರಣ್ಯದ ಸುತ್ತ ಸೋಲಾರ್ ಬೇಲಿ ಅಳವಡಿಸಿ ಆನೆಗಳು ರೈತರ ಜಮೀನಿಗೆ ನುಗ್ಗದಂತೆ ಮಾಡಲಾಗುವುದು. ಕ್ರಮಹಿಸಲಾಗುವುದು ನಂತರ ಇತರೆ ಕಡೆ ಇದನ್ನು ಜಾರಿಗೆ ತರಲು ಕ್ರಮ ವಹಿಸಲಾಗುವುದು. ನೀವು ಸಲ್ಲಿಸಿರುವ 25 ಬೇಡಿಕೆಗಳ ಪಟ್ಟಿ ಪೈಕಿ ನಮ್ಮ ಹಂತದಲ್ಲಿ ಆಗುವುದಕ್ಕೆ ಹಂತಹಂತವಾಗಿ ಸ್ಪಂದಿಸಲಾಗುವುದು. ಸರ್ಕಾರದ ಮಟ್ಟದಲ್ಲಿ ಆಗುವಂತಹದನ್ನು ಅವರ ಗಮನಕ್ಕೆ ತರಲಾಗುವುದು’ ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರ್ ಧರಣಿನಿರತರಿಗೆ ಭರವಸೆ ನೀಡಿದರು.

‘ಬದುಕು ಬೀದಿಗೆ ಬಂದಿದೆ’

‘ಕಾಡಾನೆಗಳ ಕಳೆದ 13 ವರ್ಷಗಳಿಂದ ನಿರಂತರವಾಗಿ ನಡೆಸುತ್ತಿರುವ ದಾಳಿಗೆ ರೈತರ ಬದುಕು ಬೀದಿಗೆ ಬಂದಿದೆ. ಜೀವಹಾನಿ ಜೊತೆಗೆ ಕೋಟ್ಯಂತರ ರೂಪಾಯಿ ಮೌಲ್ಯದ ಬೆಳೆಹಾನಿ ಸಂಭವಿಸುತ್ತಲೇ ಇದೆ. ಆದರೆ ಅರಣ್ಯ ಇಲಾಖೆಯವರು ಮಾತ್ರ ಎಲ್ಲವೂ ಆದ ಮೇಲೆ ಬಂದು ಕಾಡಾನೆಗಳನ್ನು ಕಾಡಿಗಟ್ಟಿದ್ದೇವೆ ಎನ್ನುತ್ತಾರೆ. ಆದರೆ ದಾಳಿ ಮಾತ್ರ ನಡೆಯುತ್ತಲೇ ಇದೆ. ಹಾಗಾಗಿ ಈ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಬೇಕು. ಬೆಳೆ ಹಾನಿಗೆ ಸದ್ಯದ ಮಾರುಕಟ್ಟೆ ದರಕ್ಕೆ ಅನುಗುಣವಾಗಿ ಪರಿಹಾರ ನೀಡಬೇಕು’ ಎಂದು ರೈತ ಮುಖಂಡ ಸಿ. ಪುಟ್ಟಸ್ವಾಮಿ ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.